ಶನಿವಾರ, ಜೂಲೈ 11, 2020
29 °C
ಮಾದರಿಗಳನ್ನು ಸಿದ್ಧಪಡಿಸಿ ಮನಗೆದ್ದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು

ಕೊರೊನಾ ವೈರಸ್‌| ‘ಇ ಜಾಗೃತಿ’ಯಲ್ಲಿ ಮಕ್ಕಳ ಸೃಜನಶೀಲತೆ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಲಾಕ್‌ಡೌನ್‌ನಿಂದಾಗಿ ಮನೆಯ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದ್ದ ಮಕ್ಕಳು, ತಮ್ಮ ಸೃಜನಶೀಲತೆ ಯೋಚನೆಯಿಂದ ಕಿಟಕಿಯಾಚೆಗಿನ ವಾಸ್ತವವನ್ನು ಕುಂಚದಲ್ಲಿ ಸೆರೆ ಹಿಡಿದಿದ್ದಾರೆ. ಬಿಳಿ ಹಾಳೆಯಲ್ಲಿ ಚಿತ್ರ ಬರೆದು ಕೊರೊನಾ ಸೋಂಕಿನ ವಿರುದ್ಧ ಡಿಜಿಟಲ್ ಜಾಗೃತಿ ಮೂಡಿಸುತ್ತಿದ್ದಾರೆ.

ಬೇಸಿಗೆ ರಜೆಯಲ್ಲಿ ವಿನೋದದ ಜತೆಗೆ ಸಾಮಾಜಿಕ ಶಿಕ್ಷಣದ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ ಸಂಸ್ಥೆ ವಿವಿಧ ರಚನಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯ ಸ್ಕೌಟ್ಸ್‌ ಮತ್ತು ಗೈಡ್ಸ್‌, ರೋವರ್ಸ್ ಮತ್ತು ರೇಂಜರ್ಸ್ ಮಕ್ಕಳು, ಕೋವಿಡ್ 19 ಸಾಂಕ್ರಾಮಿಕ ಕಾಯಿಲೆಯಿಂದ ಸ್ವಯಂ ರಕ್ಷಣೆ ಪಡೆಯುವ ಮಾದರಿಗಳನ್ನು ಸಿದ್ಧಪಡಿಸಿ, ಸರಪಣಿಗಳ ಮೂಲಕ ಹೆಚ್ಚು ಜನರನ್ನು ತಲುಪುತ್ತಿದ್ದಾರೆ.

‘ಮಕ್ಕಳು ಮಾನಸಿಕವಾಗಿ ಕುಗ್ಗದಂತೆ ಕಾಳಜಿವಹಿಸಲು ಸಂಸ್ಥೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಆರೋಗ್ಯ ಮತ್ತು ಯೋಗಕ್ಷೇಮ ಕಾರ್ಯಕ್ರಮದ ಅಡಿಯಲ್ಲಿ, ಪರಿಚಿತ ಐವರಿಗೆ ದೂರವಾಣಿ ಕರೆ ಮಾಡಿ, ಕೋವಿಡ್ 19 ಹರಡುವಿಕೆ ತಡೆಯಲು ಕೈಗೊಳ್ಳುವ ಕ್ರಮಗಳ ಕುರಿತು ತಿಳಿಸುವಂತೆ ಮಕ್ಕಳಿಗೆ ಹೇಳಲಾಗಿತ್ತು. ನಂತರ ಆ ಐವರು ಮತ್ತೆ ಐವರಿಗೆ ಕರೆ ಮಾಡುವ ಮೂಲಕ ಸರಪಣಿ ಬೆಳೆಸುವ ಯೋಜನೆ ಇದಾಗಿತ್ತು. ಕುಟುಂಬ ಸುರಕ್ಷಿತವಾಗಿರಲು ಮನೆಯಲ್ಲಿದ್ದ ಸೆಲ್ಫಿ ತೆಗೆದು, ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದರು’ ಎನ್ನುತ್ತಾರೆ ಜಿಲ್ಲಾ ಸಂಘಟಕ ವೀರೇಶ ಮಾದರ.

ಪುಟ್ಟ ಮಕ್ಕಳು, ಹ್ಯಾಂಡ್‌ವಾಷ್ ಬಳಸಿ ವೈಜ್ಞಾನಿಕವಾಗಿ ಕೈ ತೊಳೆಯುವ ವಿಧಾನವನ್ನು ವಿಡಿಯೊ ಮಾಡಿ, ಸಾಮಾಜಿಕ ಜಾಲತಾಣ, ಯೂಟ್ಯೂಬ್‌ಗೆ ಹಾಕಿದ್ದನ್ನು ಹಲವರು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ರೇಂಜರ್ಸ್ ಮತ್ತು ಮತ್ತು ರೋವರ್ಸ್‌ಗಳು, ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳುವ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು. ವಿಪತ್ತಿನ ಸಂದರ್ಭದಲ್ಲಿ ಅಗತ್ಯ ಬಂದಲ್ಲಿ ಜಿಲ್ಲಾಡಳಿತಕ್ಕೆ ನೆರವಾಗಲು ಕೊರೊನಾ ವಾರಿಯರ್ಸ್ ಸ್ವಯಂ ಸೇವಕರ ತಂಡವನ್ನು ಅಣಿಗೊಳಿಸಲಾಗುತ್ತಿದೆ. ಮಾಸ್ಕ್ ಬ್ಯಾಂಕ್‌ ಮಾಡಲು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮುಖಗವಸು ಸಿದ್ಧಪಡಿಸುತ್ತಿದ್ದಾರೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು