ಗುರುವಾರ , ಫೆಬ್ರವರಿ 27, 2020
19 °C

ಆರ್ಥಿಕ ನಿಯಂತ್ರಣಕ್ಕೆ ನಗದುರಹಿತ ವ್ಯವಹಾರ: ಸಂಸದ ಅನಂತಕುಮಾರ್ ಹೆಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಆರ್ಥಿಕ ಚಟುವಟಿಕೆಯ ನಿಯಂತ್ರಣ ಇಲ್ಲದಿದ್ದರೆ ಕುಟುಂಬ ಅಥವಾ ದೇಶದ ಹಿಡಿತ ತಪ್ಪಿ ಹೋಗುತ್ತದೆಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ನಗದುರಹಿತ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಿದರು ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.

ತಾಲ್ಲೂಕಿನ ಭೈರುಂಬೆ ಗಡಿಕೈಯಲ್ಲಿ ಭಾನುವಾರ ಆಯೋಜಿಸಿದ್ದ ‘ಡಿಜಿಟಲ್ ಗ್ರಾಮದತ್ತ ಒಂದು ಹೆಜ್ಜೆ‘ ಸಂವಾದದಲ್ಲಿ ಅವರು ಮಾತನಾಡಿದರು. ‘ಮೊದಲು ವೀಸಾ ಮತ್ತು ಮಾಸ್ಟರ್ ಕಾರ್ಡ್ ಬಿಟ್ಟು ದೇಶೀಯ ಕಾರ್ಡ್ ನಮ್ಮಲ್ಲಿ ಇರಲಿಲ್ಲ. ಆ ಕಾರ್ಡ್ ಬಳಸಿದರೆ ವಹಿವಾಟಿನ ಲಾಭದ ಹಣ ವಿದೇಶಕ್ಕೆ ಹೋಗುತ್ತದೆ. ರೂಪೇ ಕಾರ್ಡ್ ಬಳಕೆ ಮಾಡಿದರೆ ಅದರ ಲಾಭದ ಹಣ ದೇಶದಲ್ಲೇ ಉಳಿಯುತ್ತದೆ’ ಎಂದರು.

‘ಸರ್ಕಾರದ ಎಲ್ಲ ಆರ್ಥಿಕ ಯೋಜನೆಗಳು ರಾಷ್ಟ್ರೀಕೃತ ಬ್ಯಾಂಕುಗಳವರೆಗೆ ಮಾತ್ರ ಅನುಷ್ಠಾನಗೊಳ್ಳುತ್ತಿತ್ತು. ಸಹಕಾರ ಸಂಘಗಳ ಮೂಲಕ ಯಾವುದೇ ಯೋಜನೆ ಅನುಷ್ಠಾನಗೊಳ್ಳುತ್ತಿರಲಿಲ್ಲ. ಅವರಿಗೆ ತಂತ್ರಜ್ಞಾನ ಅಥವಾ ಆರ್ಥಿಕ ಅನುಕೂಲ ಕೂಡ ಇರಲಿಲ್ಲ. ಪ್ರಸ್ತುತ ಸಹಕಾರ ಸಂಘಗಳ ಮೂಲಕ ನಗದುರಹಿತ ವ್ಯವಹಾರ ಮಾಡಲು ಅನುಕೂಲ ಆಗುವ ಆ್ಯಪ್‌ ಅನ್ನು ರಾಷ್ಟ್ರ ಮಟ್ಟದಲ್ಲಿ ಚಾಲ್ತಿಗೆ ತರಲಾಗುತ್ತಿದೆ. ಅನಕ್ಷರಸ್ಥರೂ ವರ್ಣ ವೈವಿಧ್ಯದ ಸಹಾಯದಿಂದ ಆರ್ಥಿಕ ವ್ಯವಹಾರ ಮಾಡಲು ಅನುಕೂಲ ಆಗುವ ರೀತಿಯಲ್ಲಿ ಆ್ಯಪ್ ಬದಲಾವಣೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಕೃಷಿಕರ ಎಲ್ಲ ವ್ಯವಹಾರಗಳನ್ನು ನಡೆಸಬಲ್ಲ ಅದ್ಭುತವಾದ ಆ್ಯಪ್ ಬಳಕೆಗೆ ಸಿದ್ಧವಾಗಿದೆ. ಡಿಜಿಟಲೀಕರಣದಂತಹ ಆಧುನಿಕ ತಂತ್ರಜ್ಞಾನವನ್ನು ನಮ್ಮ ವ್ಯಕ್ತಿಗತ ಹಾಗೂ ರಾಷ್ಟ್ರದ ಅಭ್ಯುದಯಕ್ಕೆ ಬಳಸಿಕೊಳ್ಳುವ ವಿವೇಚನೆ ಅಗತ್ಯ. ಈ ಡಿಜಿಟಲೀಕರಣ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಉಮೇಶ ಹೆಗಡೆ ಗಡಿಕೈ ವಹಿಸಿದ ಆಸಕ್ತಿ ಅಭಿನಂದನೀಯ ಎಂದು ಶ್ಲಾಘಿಸಿದರು.

ಮಹಾದೇವ ಹೆಗಡೆ ಗಡಿಕೈ ಅವರು ಸಂಸದರನ್ನು ಶಾಲು ಹೊದೆಸಿ ಸನ್ಮಾನಿಸಿದರು. ನಾರಾಯಣ ಹೆಗಡೆ ಗಡಿಕೈ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು