ಶಿಥಿಲಾವಸ್ಥೆಯಲ್ಲಿದೆ ಮಾರಿಗುಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಟ್ಟಡ

7
ಮಾರಿಗುಡಿ ಸರ್ಕಾರಿ ಪಿಯುಸಿ ಕಾಲೇಜಿನ ದುಃಸ್ಥಿತಿ, ಮಳೆಯಲ್ಲಿ ಸೋರುವ ತರಗತಿ ಕೊಠಡಿಗಳು

ಶಿಥಿಲಾವಸ್ಥೆಯಲ್ಲಿದೆ ಮಾರಿಗುಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಟ್ಟಡ

Published:
Updated:
Deccan Herald

ಶಿರಸಿ: ವಿದ್ಯಾರ್ಥಿಗಳು ನಡೆದಾಡಿದರೆ ಕಂಪನವಾಗುವ ಮಹಡಿ, ಸೋರುವ ತರಗತಿ ಕೊಠಡಿಗಳು, ಕಿಷ್ಕಿಂಧೆಯಂತಹ ಕೊಠಡಿಯಲ್ಲಿ ಪಾಠ ಮಾಡಬೇಕಾದ ಅನಿವಾರ್ಯತೆ – ಇದು ಇಲ್ಲಿನ ಮಾರಿಗುಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ದುಃಸ್ಥಿತಿ.

ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕೆಲವು ವರ್ಷಗಳ ಕಾಲ ಇತ್ತು. ಬಿಇಒ ಕಚೇರಿಯು 2013ರಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡ ಮೇಲೆ, ಮಾರಿಗುಡಿ ಪ್ರಾಥಮಿಕ ಶಾಲೆಯ ಎರವಲು ಕೊಠಡಿಯಲ್ಲಿ ನಡೆಯುತ್ತಿದ್ದ, ಪದವಿಪೂರ್ವ ಕಾಲೇಜು ಈ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಸುಮಾರು 90 ವರ್ಷ ಹಳೆಯದಾಗಿರುವ ಈ ಕಟ್ಟಡವು ಈಗ ಸಂಪೂರ್ಣ ಜೀರ್ಣಾವಸ್ಥೆ ತಲುಪಿದೆ.

ಕಟ್ಟಡದ ಕೆಳ ಅಂತಸ್ತಿನಲ್ಲಿ ಪ್ರಾಚಾರ್ಯರ ಕೊಠಡಿ ಸೇರಿ ನಾಲ್ಕು ಕೊಠಡಿಗಳು, ಮೊದಲ ಅಂತಸ್ತಿನಲ್ಲಿ ಮೂರು ಕೊಠಡಿಗಳು ಇವೆ. ಮೊದಲ ಮಹಡಿಯ ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತಿದ್ದವು. ಇಲ್ಲಿಗೆ ಹೋಗುವ ಏಣಿ ಮೆಟ್ಟಿಲುಗಳು ಅಪಾಯಕರ ಸ್ಥಿತಿಯಲ್ಲಿರುವುದರಿಂದ ಮತ್ತು ಕೊಠಡಿಗಳು ಮಳೆಗೆ ಒಂದೇಸವನೆ ಸೋರುವುದರಿಂದ, ಕೆಳ ಅಂತಸ್ತಿನಲ್ಲಿಯೇ ಹೊಂದಾಣಿಕೆ ಮಾಡಿಕೊಂಡು ತರಗತಿ ನಡೆಸಬೇಕಾಗಿದೆ.

‘ಕಲಾ ಮತ್ತು ವಾಣಿಜ್ಯ ವಿಭಾಗದ ಸೇರಿ ಸುಮಾರು 300 ವಿದ್ಯಾರ್ಥಿಗಳಿದ್ದಾರೆ. ಕೆಳಗಿನ ಕೊಠಡಿಗಳನ್ನು ಮಾತ್ರ ಅವಲಂಬಿಸಿ ತರಗತಿ ನಡೆಸುವುದು ಕಷ್ಟ. ಆದರೆ, ಅನಿವಾರ್ಯವಾಗಿ ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೇಲಿನ ಮಹಡಿಯ ಮೆಟ್ಟಿಲು ಹತ್ತುವಾಗ ಭಯವಾಗುತ್ತದೆ. ಮಳೆ ನೀರು ಗೋಡೆಗೆ ಅಪ್ಪಳಿಸುವ ಕಾರಣ ಕಟ್ಟಡ ದಿನದಿಂದ ದಿನಕ್ಕೆ ಶಿಥಿಲಗೊಳ್ಳುತ್ತಿದೆ’ ಎನ್ನುತ್ತಾರೆ ವಿದ್ಯಾರ್ಥಿಗಳು.

‘ಶಾಶ್ವತ ಶೌಚಾಲಯ ಇಲ್ಲದ ಕಾರಣ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಸಮೀಪದ ನಗರಸಭೆ ಶೌಚಾಲಯವನ್ನು ಬಳಸಬೇಕಾದ ಅನಿವಾರ್ಯತೆಯಿದೆ. ಹಳೆ ಬಸ್ ನಿಲ್ದಾಣದಿಂದ ಸಮೀಪವಿರುವ ಕಾಲೇಜು ಕಟ್ಟಡ ಮಧ್ಯವರ್ತಿ ಸ್ಥಳದಲ್ಲಿದೆ. ಬಸ್ಸಿನಲ್ಲಿ ಬರುವ ಹಳ್ಳಿ ವಿದ್ಯಾರ್ಥಿಗಳಿಗೆ ಈ ಕಾಲೇಜು ಅನುಕೂಲವಾಗಿದೆ. ಕಾಲೇಜನ್ನು ಸ್ಥಳಾಂತರಿಸುವುದಿದ್ದರೆ, ಹತ್ತಿರದ ಕಟ್ಟಡಗಳಿಗೆ ಸ್ಥಳಾಂತರಿಸಬೇಕು. ಇಲ್ಲವಾದರೆ, ನಮಗೆ ತೊಂದರೆಯಾಗುತ್ತದೆ’ ಎನ್ನುತ್ತಾರೆ ಅವರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ, ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಶೇಷ ಪ್ರಯತ್ನ ನಡೆಸಿ, ಈ ಕಾಲೇಜನ್ನು ಶಿರಸಿಗೆ ತಂದಿದ್ದರು. ನಂತರದ ವರ್ಷಗಳಲ್ಲಿ ಕಾಲೇಜು ಕಟ್ಟಡಕ್ಕೆ ಜಾಗ ಮಂಜೂರುಗೊಳಿಸುವಂತೆ ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿದರೂ, ಈ ಬಗ್ಗೆ ಕ್ರಮವಾಗಿಲ್ಲ ಎನ್ನುತ್ತಾರೆ ಕಾಲೇಜು ಪ್ರಮುಖರು.

‘ಶಾಸಕರು ಕಾಲೇಜಿಗೆ ಭೇಟಿ ನೀಡಿ, ಕಾಲೇಜಿನ ಸ್ಥಿತಿಗತಿ ಪರಿಶೀಲಿಸಿದ್ದಾರೆ. ಕಾಲೇಜಿಗೆ ಅನುದಾನ ದೊರೆತಿದ್ದರೂ, ಜಾಗದ ಅಲಭ್ಯತೆಯಿಂದ ಕಾಮಗಾರಿ ಸಾಧ್ಯವಾಗಿಲ್ಲ’ ಎಂದು ಪ್ರಭಾರಿ ಪ್ರಾಚಾರ್ಯ ಆರ್.ಕೆ.ನಾಯ್ಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !