ಕೆಸರು ಗದ್ದೆಯಾದ ಶಿರಗುಣಿ–ಮುಸ್ಕಿ ರಸ್ತೆ

7
ವಾಹನ ಸಂಚಾರ ಸ್ಥಗಿತ, ಶಾಲೆಗೆ ಹೋಗುವ ಮಕ್ಕಳಿಗೂ ಫಚೀತಿ

ಕೆಸರು ಗದ್ದೆಯಾದ ಶಿರಗುಣಿ–ಮುಸ್ಕಿ ರಸ್ತೆ

Published:
Updated:
Deccan Herald

ಶಿರಸಿ: ಮಳೆಗಾಲ ಆರಂಭವಾದ ಮೇಲೆ ಈ ಹಳ್ಳಿಗೆ ತಲುಪಲು ಹರಸಾಹಸ ಮಾಡಬೇಕು. ಶಾಲೆಗೆ ಹೋಗುವ ಮಕ್ಕಳು ಆರೆಂಟು ಕಿ.ಮೀ ಕಾಲ್ನಡಿಗೆಯಲ್ಲಿ ಬಂದು ಬಸ್ ಹತ್ತಬೇಕು !

ತಾಲ್ಲೂಕು ಕೇಂದ್ರದಿಂದ 46 ಕಿ.ಮೀ ದೂರದಲ್ಲಿರುವ ಮುಸ್ಕಿ, ಶಿರಗುಣಿ ನಿವಾಸಿಗಳಿಗೆ ಪ್ರತಿವರ್ಷ ಮಳೆಗಾಲ ತಂದೊಡ್ಡುವ ಸಂಕಟವಿದು. ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆಗಳು ಇಲ್ಲಿವೆ. ಮಳೆಗಾಲದಲ್ಲಿ ಈ ರಸ್ತೆ ಇನ್ನಷ್ಟು ಶೋಚನೀಯವಾಗುತ್ತವೆ. ಶಿರಸಿಯಿಂದ ಕಕ್ಕಳ್ಳಿವರೆಗಿನ ಸಂಚಾರ ಅಷ್ಟು ಕಷ್ಟವಲ್ಲ. ಆದರೆ, ಕಕ್ಕಳ್ಳಿಯಿಂದ ಶಿರಗುಣಿವರೆಗಿನ 11 ಕಿ.ಮೀ ರಸ್ತೆಯ ಸಂಚರಿಸಲು ಸಾಧ್ಯವಾಗದಷ್ಟು ದುಃಸ್ಥಿತಿ ತಲುಪಿದೆ. 1.5 ಕಿ.ಮೀ ಡಾಂಬರೀಕರಣಗೊಂಡಿದೆ, ಮುಂದಿನ 800 ಮೀಟರ್ ರಸ್ತೆಗೆ ಜಲ್ಲಿ ಹಾಕಲಾಗಿದೆ. ಅದಕ್ಕಿಂತ ಮುಂದಿನ ಭಾಗ ಮಾತ್ರ ಕಾಲಿಟ್ಟರೆ ಜಾರುವ ಸ್ಥಿತಿಯಲ್ಲಿದೆ.

‘ಕೆಸರು ಗದ್ದೆಯಂತಾಗಿರುವ ರಸ್ತೆಯಲ್ಲಿ ವಾಹನ ಚಲಾಯಿಸುವುದಿರಲಿ, ನಡೆದಾಡಲು ಭಯವಾಗುತ್ತದೆ. ಅಂಟು ಮಿಶ್ರಿತ ಜಾರುಗುಣ ಹೊಂದಿರುವ ಇಲ್ಲಿನ ಮಣ್ಣು ಮಳೆನೀರು ತಾಗುತ್ತಿದ್ದಂತೆ ಜಾರಲು ಪ್ರಾರಂಭವಾಗುತ್ತದೆ. ಕೆಸರು ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ ಬಿದ್ದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಬಸ್ ಸೌಲಭ್ಯವಿಲ್ಲದ ಈ ಹಳ್ಳಿಗಳ ಜನರು ಶಾಲೆ, ಆಸ್ಪತ್ರೆ, ದಿನಸಿಗಾಗಿ ಕಕ್ಕಳ್ಳಿಗೆ ನಡೆದುಕೊಂಡು ಬರಬೇಕು’ ಎನ್ನುತ್ತಾರೆ ಸ್ಥಳೀಯ ಮಹಾಬಲೇಶ್ವರ ಹೆಗಡೆ.

‘ಈ ಭಾಗಕ್ಕೆ ಸರ್ವಋತು ರಸ್ತೆ ನಿರ್ಮಿಸುವಂತೆ ಬೇಡಿಕೆ ಇಡುತ್ತ ಬಂದು ಮೂರು ದಶಕಗಳು ಕಳೆದಿವೆ. ಸರ್ಕಾರದ ಮುಂದೆ ಬೇಡಿಕೆಯಿಟ್ಟು ಸಾಕಾಗಿದೆ. ನಾಗರಿಕರು ಪ್ರತಿಭಟನೆಗೆ ಮುಂದಾದಾಗ, ಜನಪ್ರತಿನಿಧಿಗಳು ಭರವಸೆ ನೀಡಿ, ಬಾಯಿ ಮುಚ್ಚಿಸುತ್ತಾರೆ. ಆದರೆ, ಪರಿಸ್ಥಿತಿ ಬದಲಾಗುವುದಿಲ್ಲ. ಕಕ್ಕಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ. ವಾನಳ್ಳಿಗೆ ರೋಗಿಗಳನ್ನು ಕರೆದುಕೊಂಡು ಹೋಗಲು ವಾಹನ ಬಾಡಿಗೆ ₹ 500ರಷ್ಟಾಗುತ್ತದೆ’ ಎಂದು ಅವರು ದೂರಿದರು.

‘ವಾಹನ ಸೌಕರ್ಯದ ಕೊರತೆಯಿಂದ ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿಟ್ಟು ಶಾಲೆಗೆ ಕಳುಹಿಸುವಂತಾಗಿದೆ. ಈ ಭಾಗದಲ್ಲಿ ಸುಮಾರು 150 ಮನೆಗಳಿವೆ. 600ಕ್ಕೂ ಅಧಿಕ ಮತದಾರರಿದ್ದಾರೆ. ಚುನಾವಣೆ ಬಂದಾಗ ಮತ ಕೇಳಲು ಬರುವ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ನಮಗೆ ರಸ್ತೆಯಂತಹ ಮೂಲ ಸೌಲಭ್ಯ ಒದಗಿಸಬೇಕು’ ಎನ್ನುತ್ತಾರೆ ಸ್ಥಳೀಯ ಮಹಿಳೆ ಸುಮಿತ್ರಾ.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ಉನ್ನತೀಕರಣಕ್ಕೆ ಮಂಜೂರು ಆಗಿದ್ದ ಅನುದಾನದಲ್ಲಿ ಕಾಮಗಾರಿ ಆರಂಭವಾಗಿತ್ತು. ಮಳೆಗಾಲದ ಆರಂಭದಲ್ಲಿ ಕೆಲಸ ಸ್ಥಗಿತಗೊಂಡಿರುವ ಕಾರಣ ಈ ಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಶೀಘ್ರ ಕೆಲಸ ಪ್ರಾರಂಭಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !