ಶುಕ್ರವಾರ, ಮೇ 27, 2022
28 °C
ಒಂದೇ ವೇದಿಕೆಯಲ್ಲಿ ಸಮಗ್ರ ಮಾಹಿತಿ ಸಿಗುವಂತಾಗಲು ಜಿಲ್ಲಾಡಳಿತದ ಕ್ರಮ

ಒತ್ತುವರಿ ಅರ್ಜಿ ವಿಲೇವಾರಿಗೆ ವೆಬ್‌ಸೈಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಜಿಲ್ಲೆಯಲ್ಲಿ ಅರಣ್ಯ ಒತ್ತುವರಿ ಸಂಬಂಧ ಬಾಕಿಯಿರುವ ಅರ್ಜಿಗಳ ವ್ಯವಸ್ಥಿತ ವಿಲೇವಾರಿಗೆ ಜಿಲ್ಲಾಡಳಿತವು ವೆಬ್‌ಸೈಟ್ ರೂಪಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

1978ಕ್ಕೂ ಮೊದಲೇ ಅತಿಕ್ರಮಣ ಮಾಡಿಕೊಂಡ ಅರಣ್ಯವನ್ನು ‘ಅರಣ್ಯ ಹಕ್ಕು ಕಾಯ್ದೆ’ಯಡಿ ಸಕ್ರಮ ಮಾಡಿಕೊಡುವಂತೆ 2,400ಕ್ಕೂ ಅಧಿಕ ಅರ್ಜಿಗಳು ಜಿಲ್ಲಾಡಳಿತದಲ್ಲಿ ವಿಲೇವಾರಿಗೆ ಬಾಕಿಯಿವೆ. ಅವುಗಳು, ಹಂಗಾಮಿ ಮತ್ತು ಕಾಯಂ ಲಾಗಣಿಯ ಅರ್ಜಿಗಳ ವಿಲೇವಾರಿಗೆ ಹೊಸ ವೆಬ್‌ಸೈಟ್ ಸಹಕಾರಿಯಾಗಲಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರವು ಸಿದ್ಧಪಡಿಸುತ್ತಿರುವ ವೆಬ್‌ಸೈಟ್‌ಗೆ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿಗಳ ಸಂಗ್ರಹಿಸುತ್ತಿದ್ದಾರೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಡಾ. ಕೆ. ಹರೀಶ ಕುಮಾರ ಮಾಹಿತಿ ನೀಡಿದ್ದಾರೆ.

1972ಕ್ಕೂ ಮೊದಲಿನ ಹಂಗಾಮಿ ಲಾಗಣಿಗಳನ್ನು ಕಾಯಂಗೊಳಿಸಲು ವಿಲೇವಾರಿಗೆ ಬಾಕಿಯಿವೆ. ಅಂತೆಯೇ ಅರಣ್ಯ ಹಕ್ಕು ಕಾಯ್ದೆಯಡಿ 80 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳ ನೋಂದಣಿ ಕಾರ್ಯ ಮಾಡಲಾಗಿದ್ದು, ಮುಂದಿನ ಹಂತದ ಪ್ರಕ್ರಿಯೆ ಬಾಕಿಯಿದೆ. ಈ ರೀತಿ ಜಿಲ್ಲೆಯಲ್ಲಿರುವ ಬೇರೆ ಬೇರೆ ರೀತಿಯ ಅರ್ಜಿಗಳ ಸಮೀಕ್ಷೆ ಕಾರ್ಯವನ್ನು ಈಗಾಗಲೇ ಕೈಗೊಳ್ಳಲಾಗಿದ್ದರೂ ಕಡತಗಳ ವಿಲೇವಾರಿ ಆಗಬೇಕಿದೆ. ಇದಕ್ಕೆ ಪೂರಕವಾದ ಮಾಹಿತಿಗಳು ಒಂದೇ ಕಡೆ ಸಿಗುವಂತಾದರೆ ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಸಂತ ರೆಡ್ಡಿ, ‘ವೆಬ್‌ಸೈಟ್‌ಗೆ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾಡಳಿತದಿಂದ ಸೂಚನೆ ಬಂದಿದೆ. ಆ ನಿಟ್ಟಿನಲ್ಲಿ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದು, ಅವುಗಳನ್ನು ಅಪ್‍ಲೋಡ್ ಮಾಡಲಾಗುತ್ತದೆ’ ಎಂದು ತಿಳಿಸಿದ್ದಾರೆ.

ಅರ್ಥೈಸುವುದೇ ಸವಾಲು!

ಜಿಲ್ಲೆಯಲ್ಲಿ ಅರಣ್ಯ ಒತ್ತುವರಿಗೆ ಸಂಬಂಧಿಸಿದಂತೆ ಅರ್ಜಿಗಳ ಸ್ವರೂಪ ಬೇರೆ ಬೇರೆಯದ್ದಾಗಿವೆ. ಹಾಗಾಗಿ ಹೊಸದಾಗಿ ವರ್ಗಾವಣೆಯಾಗಿ ಜಿಲ್ಲೆಯಲ್ಲಿ ಅಧಿಕಾರ ಸ್ವೀಕರಿಸುವ ಅಧಿಕಾರಿಗಳಿಗೆ ಇವುಗಳನ್ನು ಅರ್ಥ ಮಾಡಿಕೊಳ್ಳುವುದೂ ಸವಾಲಾಗಿದೆ. ಅಲ್ಲದೇ ಸರ್ಕಾರಕ್ಕೆ ಸೂಕ್ತ ಮಾಹಿತಿ ನೀಡಿ ಪರಿಹಾರ ಕಂಡುಕೊಳ್ಳಲೂ ಕಷ್ಟವಾಗುತ್ತಿದೆ.

ಸಕ್ರಮಾತಿಗೆ ಹತ್ತಾರು ದಶಕಗಳಿಂದಲೂ ಅರ್ಜಿದಾರರು ಕಾಯುತ್ತಿದ್ದಾರೆ. ವಿವಿಧ ಕಚೇರಿಗಳಲ್ಲಿ ಅವು ಬಾಕಿಯಿದ್ದು, ಪ್ರಗತಿ ಕಾಣುತ್ತಿಲ್ಲ. ಈ ಬಗ್ಗೆ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಟನೆಗಳು, ಹೋರಾಟಗಳು ನಡೆದಿವೆ. ಅಲ್ಲದೇ ವಿಲೇವಾರಿ ಮಾಡುವ ವಿಧಾನದ ಬಗ್ಗೆಯೂ ಗೊಂದಲಗಳಿವೆ. ಇವೆಲ್ಲವನ್ನು ನಿಭಾಯಿಸುವ ನಿಟ್ಟಿನಲ್ಲಿ ವೆಬ್‌ಸೈಟ್ ಹೆಚ್ಚು ಅನುಕೂಲಕರ ಆಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು