ಸೋಮವಾರ, ಆಗಸ್ಟ್ 19, 2019
24 °C
ಸ್ವಾತಂತ್ರ್ಯೋತ್ಸವದ ಸಂದೇಶದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಭರವಸೆ

‘ಸಂತ್ರಸ್ತರಿಗೆ ಪರಿಹಾರ ನೀಡಲು ಜಿಲ್ಲಾಡಳಿತ ಬದ್ಧ’

Published:
Updated:
Prajavani

ಕಾರವಾರ: ‘ಪ್ರಾಕೃತಿಕ ವಿಕೋಪ ಮಾನವನ ನಿಯಂತ್ರಣಕ್ಕೆ ನಿಲುಕದ್ದು. ಪ್ರವಾಹದಿಂದ ಜಿಲ್ಲೆಯ ಜನರು ಸಾಕಷ್ಟು ನೋವು ಅನುಭವಿಸಿದ್ದಾರೆ. ಸಂತ್ರಸ್ತರಿಗೆ ಪರಿಹಾರ ನೀಡುವ ಮತ್ತು ಅವರಲ್ಲಿ ಜೀವನೋತ್ಸಾಹ ತುಂಬುವ ಯೋಜನೆಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಬದ್ಧವಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಹೇಳಿದರು. 

ಅವರು ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಗುರುವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

‘ಜಿಲ್ಲೆಯಲ್ಲಿ 10 ದಿನಗಳಲ್ಲಿ ಸಂಭವಿಸಿದ ಜಲ ಪ್ರವಾಹಕ್ಕೆ ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ– ಪಾಸ್ತಿ ಹಾನಿಯಾಗಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರವಾಹ ಇಳಿದಿದ್ದು, ಸಾರ್ವಜನಿಕರು ತುಸು ನೆಮ್ಮದಿಯಿಂದ ಇರುವಂತಾಗಿದೆ. ಪ್ರವಾಹದ ಸಂದರ್ಭದಲ್ಲಿ ಜಿಲ್ಲೆಯ ಜನರು ಜಿಲ್ಲಾಡಳಿತದ ಸಹಕಾರಕ್ಕೆ ನಿಂತು, ಸಂತ್ರಸ್ತರ ನೆರವಿಗೆ ಧಾವಿಸಿ ಬಂದಿದ್ದಾರೆ. ಜಿಲ್ಲಾಡಳಿತ ತನ್ನ ಶಕ್ತಿ ಮೀರಿ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದೆ. ತೀವ್ರ ಸಂಕಷ್ಟಕ್ಕೆ ಸಿಲುಕಿದವರಿಗೆ ತಕ್ಷಣ ಪರಿಹಾರ ನೀಡಲಾಗಿದೆ. ಇದೀಗ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ನೆರೆಹಾನಿಯ ಸಮೀಕ್ಷೆ ನಡೆಸಿ ಅಗತ್ಯ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ಆಕರ್ಷಕ ಪಥಸಂಚಲನ: ಪೊಲೀಸ್, ಗೃಹರಕ್ಷಕದಳ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಳ ಹಾಗೂ ವಿವಿಧ ಶಾಲಾ ಮಕ್ಕಳ ಒಟ್ಟು 19 ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪರೇಡ್ ಕಮಾಂಡರ್ ಸಚಿನ್ ಲಾರೆನ್ಸ್ ಇದರ ನೇತೃತ್ವ ವಹಿಸಿದ್ದರು. ಪೊಲೀಸ್ ಬ್ಯಾಂಡ್‍ ಅವರಿಗೆ ಸಾಥ್ ನೀಡಿತು.

ಲ್ಯಾಪ್‌ಟಾಪ್ ವಿತರಣೆ: ಸರ್ಕಾರಿ ಶಾಲೆಯಲ್ಲಿ ಕಲಿತು, ಏಪ್ರಿಲ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಅಂಕೋಲಾದ ಮನೋಜ ನಾಯಕ, ಶ್ರೀನಿವಾಸ ನಾಯ್ಕ ಹಾಗೂ ಹೊನ್ನಾವರದ ಶಾಂತಿಕಾ ನಾಯ್ಕ ಅವರಿಗೆ ಪ್ರೋತ್ಸಾಹದಾಯಕವಾಗಿ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು. 

ಪಥಸಂಚಲನದಲ್ಲಿ ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ 8ನೇ ಕರ್ನಾಟಕ ನೇವಲ್ ಎನ್‌ಸಿಸಿ ಬಟಾಲಿಯನ್ ಪ್ರಥಮ, ಸೇಂಟ್ ಮೈಕೆಲ್ ಹೈಸ್ಕೂಲ್‌ನ 8ನೇ ಎನ್‌ಸಿಸಿ ಬಟಾಲಿಯನ್ ದ್ವಿತೀಯ ಹಾಗೂ ಶಿವಾಜಿ ಗಂಡು ಮಕ್ಕಳ ಪ್ರೌಢಶಾಲೆಯ 29ನೇ ಎನ್‌ಸಿಸಿ ಬಟಾಲಿಯನ್ ತೃತೀಯ ಸ್ಥಾನ ಪಡೆದುಕೊಂಡಿತು. ಈ ತಂಡಗಳಿಗೂ ವೇದಿಕೆಯಲ್ಲಿ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಇದ್ದರು. 

ಮಳೆಯಿಂದ ಹಾರದ ಧ್ವಜ: ನಗರದಲ್ಲಿ ಗುರುವಾರ ಬೆಳಿಗ್ಗೆ ಸುರಿದ ಮಳೆಯಿಂದ ಧ್ವಜಾರೋಹಣಕ್ಕೂ ತೊಂದರೆಯಾಯಿತು. ಧ್ವಜಕ್ಕೆ ಕಟ್ಟಿದ್ದ ದಾರವು ಮಳೆಯಿಂದ ಬಿಗಿಯಾಗಿ ಧ್ವಜ ಬಿಡಿಸಿಕೊಳ್ಳಲಿಲ್ಲ. ಇದರಿಂದಾಗಿ ವೇದಿಕೆಯಲ್ಲಿದ್ದ ಅಧಿಕಾರಿಗಳು ತಬ್ಬಿಬ್ಬಾದರು. ಬಳಿಕ ಧ್ವಜವನ್ನು ಕೆಳಗಿಳಿಸಿಕೊಂಡು ಬಿಡಿಸಿ, ಮತ್ತೆ ಮೇಲಕ್ಕೆ ಏರಿಸಲಾಯಿತು. ಪೊಲೀಸ್ ಬ್ಯಾಂಡ್‌ನಲ್ಲಿ ಎರಡು ಬಾರಿ ರಾಷ್ಟ್ರಗೀತೆಯನ್ನು ನುಡಿಸಲಾಯಿತು.

ದಶಕದ ನಂತರ ಡಿ.ಸಿ.ಗೆ ಅವಕಾಶ: ಸಚಿವ ಸಂಪುಟ ರಚನೆಯಾಗದೆ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗದ ಕಾರಣ ಜಿಲ್ಲೆಯಲ್ಲಿ ಧ್ವಜಾರೋಹಣದ ಅವಕಾಶ ಈ ಬಾರಿ ಜಿಲ್ಲಾಧಿಕಾರಿಗೆ ಲಭಿಸಿತು.

2005– 06ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ರಿತೇಶ್‌ಕುಮಾರ್ ಸಿಂಗ್ ಈ ಮೊದಲು ಅವಕಾಶ ಪಡೆದಿದ್ದರು. 2008– 09ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿಶ‌್ವೇಶ್ವರ ಹೆಗಡೆ ಕಾಗೇರಿ ಕಾರಣಾಂತರಗಳಿಂದ ಗೈರಾಗಿದ್ದರು. ಇದೇ ಅವಧಿಯಲ್ಲಿ ಅಂದಿನ ಜಿಲ್ಲಾಧಿಕಾರಿ ಕೂಡ ವರ್ಗಾವಣೆಯಾಗಿದ್ದರು. ಹಾಗಾಗಿ ಅಂದಿನ ಹೆಚ್ಚುವರಿ ಜಿಲ್ಲಾಧಿಕಾರಿ ನರಸಿಂಹ ಮೂರ್ತಿ ರಾಷ್ಟ್ರ ಧ್ವಜಾರೋಹಣ ಮಾಡಿದ್ದನ್ನು ಹಿರಿಯ ಸರ್ಕಾರಿ ನೌಕರರು ನೆನಪಿಸಿಕೊಳ್ಳುತ್ತಾರೆ. 

Post Comments (+)