ಗುರುವಾರ , ಜನವರಿ 23, 2020
26 °C
ಕುಮಟಾ ತಾಲ್ಲೂಕಿನ ಮೇದಿನಿಯಲ್ಲಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ವಾಸ್ತವ್ಯ

ಮೂಲಸೌಕರ್ಯ ನೀಡಲು ಜಿಲ್ಲಾಡಳಿತಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಆ ಕುಗ್ರಾಮಕ್ಕೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು ಇದೇ ಮೊದಲು. ತಮ್ಮೂರಿನ ಸಮಸ್ಯೆಗಳನ್ನು ಆಪ್ತವಾಗಿ ಹೇಳಿಕೊಳ್ಳಲು ಅಪರೂಪದ ಅವಕಾಶಗಳು ಸಿಕ್ಕಿದ್ದೂ ಮೊದಲ ಬಾರಿ. ಇದರಿಂದ ಖುಷಿಯಾದ ಗ್ರಾಮಸ್ಥರು ತಮ್ಮೂರಿಗೆ ಬಂದ ಅಧಿಕಾರಿಗಳಿಗೆ ಅದ್ಧೂರಿ ಸ್ವಾಗತ ಕೋರಿದರು.

ಕುಮಟಾ ತಾಲ್ಲೂಕಿನ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೇದಿನಿಯಲ್ಲಿ ಶನಿವಾರ ಡೋಲು, ವಾದ್ಯಗಳ ಸದ್ದು. ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ವಾಸ್ತವ್ಯ ಹೂಡುವುದು ಇದಕ್ಕೆ ಕಾರಣವಾಗಿತ್ತು. ವಾರ್ತಾ ಇಲಾಖೆ ಆಯೋಜಿಸಿದ್ದ ಮೊದಲ ‘ವಾರ್ತಾ ವಾಸ್ತವ್ಯ’ಕ್ಕೆ ಜಿಲ್ಲಾಧಿಕಾರಿ ತೆಂಗಿನ ಸಸಿ ನೆಟ್ಟು ನೀರುಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇವೇಳೆ ಮಾತನಾಡಿದ ಗ್ರಾಮಸ್ಥರು, ತಮ್ಮೂರಿನ ಸಮಸ್ಯೆಗಳನ್ನು ವಿವರಿಸಿದರು. ಈ ಭಾಗದ ಮೊದಲ ಪದವೀಧರೆ ಮೈತ್ರಿ ಗೌಡ ಮಾತನಾಡಿ, ‘ನಾನು ಹೊರಗಿದ್ದು ಶಿಕ್ಷಣ ಕಲಿತೆ. ಆದರೆ, ನನ್ನ ತಂಗಿಯೂ ಸೇರಿ ಈ ಭಾಗದವರಿಗೆ ಶಿಕ್ಷಣ ಮರೀಚಿಕೆಯಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಡಿ’ ಎಂದು ಮನವಿ ಮಾಡಿದರು.

‘ಪಕ್ಕಾ ರಸ್ತೆ ನಿರ್ಮಿಸಿಕೊಡಿ’ 

ಗ್ರಾಮಸ್ಥ ಕೃಷ್ಣ ಗೌಡ ಮಾತನಾಡಿ, ‘ಹುಲಿದೇವರಕೊಡ್ಲು ಬಳಿಯಿಂದ ಮೇದಿನಿ ಗ್ರಾಮದ ತನಕ ಕಚ್ಚಾ ರಸ್ತೆಯಿದೆ. ಮಳೆಗಾಲದಲ್ಲಿ ಓಡಾಡಲು ಸಾಧ್ಯವಾಗುವುದಿಲ್ಲ. ಪಕ್ಕಾ ರಸ್ತೆಯನ್ನು ನಿರ್ಮಿಸಿಕೊಡಿ’ ಎಂದು ಮನವಿ ಮಾಡಿಕೊಂಡರು.

‘ವಿದ್ಯುತ್ ಸಮಸ್ಯೆಯಿದೆ. ನಾಲ್ಕು ಕಿಲೋಮೀಟರ್ ನೆಲದೊಳಗೆ ಕೇಬಲ್ ಅಳವಸಿ. ತಂತಿ ಸಾಗುವ ದಾರಿಯಲ್ಲಿ ಮರಗಳು ಜಾಸ್ತಿ ಇದ್ದು, ಕಂಬಗಳನ್ನು ಉಳಿಸಿಕೊಳ್ಳುವುದು ಕಷ್ಟ’ ಎಂದರು. 

‘ಕೃಷಿಗೆ ಬೇಕಾದ ಬಿತ್ತನೆ ಬೀಜ, ಸಭಾಭವನ, ಶಾಲೆಗೆ ಕಾಂಪೌಂಡ್, ಪಡಿತರ ದಾಸ್ತಾನು ಕೊಠಡಿ, ಕಡುಬಡವರಿಗೆ ಆಶ್ರಯ ಮನೆ, ಅಂಗನವಾಡಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಬೇಕು. ಶಾಲಾ ಕಟ್ಟಡ ಹಾಳಾಗಿದೆ. ಅಂಗನವಾಡಿಗೆ ಸ್ವಂತ ಕಟ್ಟಡವಿಲ್ಲ’ ಎಂದೂ ತಿಳಿಸಿದರು.

ಹರ್ಷಿತಾ ಚೌಡು ಗೌಡ ಹಾಗೂ ಲಿಖಿತಾ ನಾರಾಯಣ ಗೌಡ ಅವರಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಯಿತು. ಗ್ರಾಮದ ಮಮತಾ, ಜಯಲಕ್ಷ್ಮೀ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು.

ಕುಮಟಾ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ, ತಹಶೀಲ್ದಾರ ಮೇಘರಾಜ ನಾಯ್ಕ, ಹೊನ್ನಾವರ ಉಪವಲಯ ಸಂರಕ್ಷಣಾಧಿಕಾರಿ ಗಣಪತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕಕುಮಾರ್, ಕುಮಟಾ ಉಪವಿಭಾಗಾಧಿಕಾರಿ ಎಂ.ಅಜಿತ್, ಜಿಲ್ಲಾ ಪಂಚಾಯ್ತಿ ಸದಸ್ಯ ಗಜಾನನ ಪೈ, ಎಪಿಎಂಸಿ ಅಧ್ಯಕ್ಷ ಧೀರೂ ಶಾನಭಾಗ, ವಾರ್ತಾಧಿಕಾರಿ ಹಿಮಂತರಾಜು, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಾರ್ವತಿ, ಪತ್ರಕರ್ತ ವಸಂತಕುಮಾರ್ ಇದ್ದರು.

ಲಾವಣ್ಯಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪಲ್ಲವಿ ಮತ್ತು ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಮೈತ್ರಿ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು