ಬುಧವಾರ, ಡಿಸೆಂಬರ್ 8, 2021
23 °C
ದಾಂಡೇಲಿ ತಾಲ್ಲೂಕಿನ ಕೇಗದಾಳದಲ್ಲಿ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ

ಕಾರವಾರ: ಗ್ರಾಮಸ್ಥರ ಅರ್ಜಿಗೆ ಜಿಲ್ಲಾಡಳಿತ ಸ್ಪಂದನ

ಪ‍್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾಂಡೇಲಿ/ ಕಾರವಾರ: ‘ಗ್ರಾಮೀಣ ಜನರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸ್ಪಂದಿಸುತ್ತದೆ. ಕಂದಾಯವೂ ಸೇರಿದಂತೆ ವಿವಿಧ ಇಲಾಖೆಗಳ ಅರ್ಜಿಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ತಾಲ್ಲೂಕಿನ ಅಂಬಿಕಾನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಗದಾಳ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಳಿಗ್ಗೆಯಿಂದ ಸಂಜೆಯವರೆಗೂ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದನ ನೀಡಿದರು. ಗ್ರಾಮದ ಸಮಸ್ಯೆಯ ಬಗ್ಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರ ಜೊತೆ ಚರ್ಚಿಸಿದರು. ಬಳಿಕ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಂಬಿಕಾ ನಗರದಲ್ಲಿ ಕರ್ನಾಟಕ ವಿದ್ಯುತ್ ನಿಗಮದ ಪವರ್ ಹೌಸ್ ಬಳಿ ಹಾಗೂ ಭಗವತಿ ರಸ್ತೆಯಲ್ಲಿ ಈಚೆಗೆ ಭೂ ಕುಸಿತವಾದ ಪ್ರದೇಶಕ್ಕೂ ಭೇಟಿ ನೀಡಿ ಮಾಹಿತಿ ಪಡೆದರು.

ಅಂಗನವಾಡಿ ಕೇಂದ್ರದಲ್ಲಿ ಅರ್ಹ ಫಲಾನುಭವಿಗಳಿಗೆ ದೊರೆಯುವ ಸೌಲಭ್ಯಗಳ ಮಾಹಿತಿ ಪಡೆದುಕೊಂಡರು. ಪೂರಕ ಪೌಷ್ಟಿಕ ಆಹಾರದ ಬಗ್ಗೆ ಹಮ್ಮಿಕೊಳ್ಳಲಾದ ಆಹಾರ ಸಾಮಗ್ರಿಗಳ ಪ್ರದರ್ಶನ ವೀಕ್ಷಿಸಿದರು. ಪೋಷಣಾ ಅಭಿಯಾನ ಯೋಜನೆಯಡಿ ನಾಲ್ವರು ಬಾಣಂತಿಯರಿಗೆ ಸಿ.ಡಿ.ಪಿ.ಒ ಹಾಗೂ ಗ್ರಾಮ ಪಂಚಾಯಿತಿ ಸದಸ್ಯೆಯರು ಸೀಮಂತ ಕಾರ್ಯಕ್ರಮ ನೆರವೇರಿಸಿದರು.

ಕೊರೊನಾ ಕಾರಣದಿಂದ ಮಕ್ಕಳಿಗೆ ಆಹಾರ ಧಾನ್ಯಗಳನ್ನು ಮನೆ ಮನೆಗೆ ವಿತರಿಸುತ್ತಿರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದರು. ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಮೊಟ್ಟೆಗಳ ವಿತರಣೆಗೆ ಜಿಲ್ಲಾಧಿಕಾರಿ ಸೂಚಿಸಿದರು. ಇದೇವೇಳೆ, ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಅಹವಾಲುಗಳನ್ನು ಸ್ವೀಕರಿಸಿ, ಸ್ಥಳದಲ್ಲಿಯೇ ಬಗೆಹರಿಸಬಹುದಾದ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು. ನೇರವಾಗಿ ಒಟ್ಟು 27 ಅರ್ಜಿಗಳು ಸಲ್ಲಿಕೆಯಾದವು. ಅವುಗಳಲ್ಲಿ ವಸತಿ ರಹಿತರಿಗೆ ನಿವೇಶನ ಕಾಯ್ದಿರಿಸುವುದು, ಮಂಜೂರು ಮಾಡುವಲ್ಲಿ ವಿಳಂಬ, ಆನೆ ಹಾವಳಿ, ಕಾಂಕ್ರೀಟ್ ರಸ್ತೆ, ಶೌಚಾಲಯ, ಸ್ಮಶಾನ ಜಾಗ, ನಿರುದ್ಯೋಗ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದವು ಸೇರಿದ್ದವು.

ಅದ್ಧೂರಿ ಸ್ವಾಗತ: ಕೇಗದಾಳಕ್ಕೆ ಜಿಲ್ಲಾಧಿಕಾರಿ ಭೇಟಿಯು ಗ್ರಾಮದಲ್ಲಿ ಸಂಭ್ರಮ ಮೂಡಿಸಿತ್ತು. ಮಹಿಳೆಯರು ಆರತಿ ಮಾಡಿ ಸ್ವಾಗತ ಕೋರಿದರು. ನಂತರ ವಿವಿಧ ಜಾನಪದ ಕಲಾತಂಡ, ಅಧಿಕಾರಿಗಳು ಹಾಗೂ ಶಾಲಾ ಮಕ್ಕಳು ಮೆರವಣಿಗೆಯ ಮೂಲಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕರೆದುಕೊಂಡು ಬಂದರು. ಅಹವಾಲು ಸ್ವೀಕಾರ ಕೌಂಟರ್‌ಗಳಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಪಿಂಚಣಿ ಸೌಲಭ್ಯ ಮತ್ತು ಇತರ ಅಹವಾಲುಗಳನ್ನು ಸ್ವೀಕರಿಸಲಾಯಿತು.

ಪಿಡಿಓ ಪ್ರಕಾಶ ಅಂಜುಟಿಗೇರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಾಗು ಬಾಯಿ ಶಾಮು ತಾಟೆ, ಉಪಾಧ್ಯಕ್ಷ ವಿಠ್ಠಲ ಜಾನು ಮಿಶಾಳೆ, ಗ್ರಾಮ ಪಂಚಾಯಿತಿ ಸದಸ್ಯೆ ಅಮೀನಾ ಕೆ.ಎಂ ಇಬ್ರಾಹಿಂ, ಸದಸ್ಯರಾದ ಗಿರೀಶ.ಎಸ್, ಬಮ್ಮಿ ಶಾವು ತಾಟೆ, ಕ್ಲೇಮೆಂಟ್ ಕ್ರಿಸ್ಟೋಫರ್, ಮುರುಗಾ ಆಚಾರಿ, ತಹಶೀಲ್ದಾರ್ ಶ್ರೀಶೈಲ ಪರಮಾನಂದ, ಸಿ.ಡಿ.ಪಿ.ಒ ಲಕ್ಷ್ಮಿ ದೇವಿ ಸೇರಿದಂತೆ ವಿವಿಧ ಅಧಿಕಾರಿಗಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.