ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಪ್ರಜ್ಞೆ ಮೂಡಿಸಲು ವಿಶೇಷ ಶಿಬಿರ: ಜಿಲ್ಲಾಧಿಕಾರಿ

Last Updated 7 ಜೂನ್ 2022, 15:14 IST
ಅಕ್ಷರ ಗಾತ್ರ

ಕಾರವಾರ: ‘ಮಕ್ಕಳಲ್ಲಿ ಸ್ಥಳೀಯ ಪರಿಸರದ ಸಂರಕ್ಷಣೆಯ ಪ್ರಜ್ಞೆ ಮೂಡಿಸಲು ಜಿಲ್ಲಾಡಳಿತವು ವಿಶೇಷ ಶಿಬಿರ ಹಮ್ಮಿಕೊಳ್ಳಲಿದೆ. ಇದಕ್ಕೆ ಪ್ರತಿ ತಾಲ್ಲೂಕಿನಿಂದ ತಲಾ 100 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ತಾಲ್ಲೂಕಿನ ಕಡವಾಡ ಜನತಾ ವಿದ್ಯಾಲಯದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಬಿತ್ತೋತ್ಸವ 2022’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಸ್ಯ ಪ್ರಭೇದಗಳು, ಪ್ರಾಣಿಗಳು, ಪಕ್ಷಿಗಳು, ಕಡಲ ಜೀವ ಲೋಕ ಮುಂತಾದವುಗಳ ಅರಿವು ಮೂಡಿಸುವುದು ಶಿಬಿರದ ಉದ್ದೇಶವಾಗಿದೆ. ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಗೆ ಕರೆದುಕೊಂಡು ಹೋಗಿ ವಾಸ್ತವಿಕ ಜ್ಞಾನವನ್ನು ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ನಮ್ಮ ಸುತ್ತಮುತ್ತಲಿನ ಸಸ್ಯ ಸಂಪತ್ತನ್ನು ಉಳಿಸಬೇಕು. ನಮ್ಮ ತಾತನ ಕಾಲದಲ್ಲಿ ಇದ್ದ ಕಾಡಿನಲ್ಲಿ ಅರ್ಧ ಭಾಗ ಅಪ್ಪನ ಕಾಲದಲ್ಲಿ ಇಲ್ಲ. ಅಪ್ಪನ ಕಾಲದಲ್ಲಿ ಇದ್ದಿದ್ದರಲ್ಲಿ ಒಂದಷ್ಟು ಭಾಗ ನಿಮ್ಮ ಕಾಲದಲ್ಲಿಲ್ಲ. ಮುಂದೆ ಮತ್ತಷ್ಟು ಕಡಿಮೆಯಾಗುತ್ತದೆ. ಕಾಡಿನ ಬೆಳವಣಿಗೆಯ ವಿಚಾರದಲ್ಲಿ ಯಾವಾಗಲೂ ಸ್ಥಿರತೆಯನ್ನು ಕಾಪಾಡಿಕೊಂಡು ಬರಬೇಕು’ ಎಂದರು.

‘ಭೂಮಿಯ ಮೇಲಿರುವ ಒಂದಷ್ಟು ಸಸ್ಯ ಸಂಪತ್ತನ್ನು ಹಿಂದಿನವರು ಉಳಿಸಿದ್ದಾರೆ. ಅದರ ಅರಿವು ನಮಗಿರಬೇಕು. ಇಲ್ಲಿರುವ ಪ್ರತಿಯೊಂದು ಜೀವಿಯಿಂದ ಭೂಮಿಗೆ ಆಗುತ್ತಿರುವ ಕೊಡುಗೆಯನ್ನು ತಿಳಿದುಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇದಕ್ಕೂ ಮೊದಲು ಜಿಲ್ಲಾಧಿಕಾರಿ ಗಿಡವನ್ನು ನೆಟ್ಟು ನೀರೆರೆದರು. ಬಳಿಕ ಸ್ಥಳೀಯ ಪ್ರಭೇದಗಳ ವಿವಿಧ ಮರಗಳ ಬೀಜಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಬಿತ್ತನೆ ಮಾಡಲಾಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ ಕುಮಾರ ಕೆ.ಸಿ. ಪ್ರಾಸ್ತಾವಿಕ ಮಾತನಾಡಿದರು.

ಎನ್.ಸಿ.ಸಿ, ಶಾಲಾ ವಿದ್ಯಾರ್ಥಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು. ಅರಣ್ಯ ಇಲಾಖೆ, ಜಿಲ್ಲಾಡಳಿತ, ಜಲ್ಲಾ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT