ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಗೋರ್ ಕಡಲತೀರದಲ್ಲಿ ‘ಡಾಲರ್’!

ಕಾರವಾರದಲ್ಲಿ ಇದೇ ಮೊದಲ ಬಾರಿಗೆ ಕಂಡುಬಂದ ಅಪರೂಪದ ಕಡಲಜೀವಿ
Last Updated 1 ಮಾರ್ಚ್ 2020, 20:15 IST
ಅಕ್ಷರ ಗಾತ್ರ

ಕಾರವಾರ: ಸಮುದ್ರದ ತಳದಲ್ಲಿ ವಾಸ ಮಾಡುವ ಅಪರೂಪದ ಜಲಚರ ‘ಸ್ಯಾಂಡ್ ಡಾಲರ್’ ಇದೇ ಮೊದಲ ಬಾರಿಗೆ ಕಾರವಾರದ ಕಡಲತೀರದಲ್ಲಿ ಕಾಣಿಸಿಕೊಂಡಿದೆ. ಇದು ಸಮುದ್ರ ಅಧ್ಯಯನ ಮಾಡುವವರ ಕುತೂಹಲಕ್ಕೆ ಕಾರಣವಾಗಿದೆ.

ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಮರಳಿನಲ್ಲಿ ಹತ್ತಾರು ಸಂಖ್ಯೆಯಲ್ಲಿ ಕಂಡುಬಂದಿವೆ. ‘ನಕ್ಷತ್ರ ಮೀನು’ ಪ್ರಭೇದಕ್ಕೆ ಸೇರಿದ ಇವುಗಳಿಗೆ ವೈಜ್ಞಾನಿಕವಾಗಿ ‘ಕ್ಲಾಯಪೇಸ್ಟರ್ ರಾರಿಸ್ಪಯನಸ್’ ಎಂದು ಕರೆಯಲಾಗುತ್ತದೆ. ಆಭರಣಗಳಲ್ಲಿ ಅಳವಡಿಸಲಾಗುವ ‘ಡಾಲರ್’ ಮಾದರಿಯಲ್ಲೇ ಇವುಗಳ ದೇಹ ರಚನೆಯಿದೆ. ಇವುಕಡಲಿನ ತಳದಲ್ಲಿರುವ ಮರಳಿನಲ್ಲಿವಾಸ ಮಾಡುತ್ತವೆ.ಹಾಗಾಗಿ ಇವುಗಳು‘ಸ್ಯಾಂಡ್ ಡಾಲರ್’ ಎಂದು ಪರಿಚಿತವಾಗಿವೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ, ‘ಕಾರವಾರದ ಕಡಲತೀರದಲ್ಲಿ ಈವರೆಗೆ ಇವುಗಳನ್ನು ಕಂಡಿರಲಿಲ್ಲ. ಅರಬ್ಬಿ ಸಮುದ್ರದಲ್ಲಿ ದೇಶದ ಕರಾವಳಿಯುದ್ದಕ್ಕೂ ಇವು ವಾಸಿಸುತ್ತವೆ.ರಾಜ್ಯದ ಕರಾವಳಿಯಲ್ಲಿ ಮೊದಲ ಬಾರಿಗೆ 2006ರಲ್ಲಿ ಭಟ್ಕಳ ಮತ್ತು ಮಂಗಳೂರಿನಲ್ಲಿ ಕಾಣಿಸಿಕೊಂಡಿದ್ದವು. ಉಳಿದಂತೆ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಸ್ಪೇನ್, ಪೋರ್ಚುಗಲ್ ಮುಂತಾದ ದೇಶಗಳ ಕರಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ’ ಎಂದು ವಿವರಿಸಿದರು.

‘ಇವುಗಳ ಮೇಲ್ಮೈ ಸ್ವಲ್ಪ ಗಟ್ಟಿಯಾಗಿದ್ದು, ದೇಹದ ರಕ್ಷಣೆಗಾಗಿ ಸುತ್ತಲೂ ಚಿಕ್ಕ ಮುಳ್ಳುಗಳಿರುತ್ತವೆ. ಮರಳಿನ ಬಣ್ಣವನ್ನೇ ಇವು ಹೊಂದಿರುವುದರಿಂದ ಅಲ್ಲಿ ಸುಲಭವಾಗಿ ಗುರುತಿಸುವುದು ಕಷ್ಟ. ಆದರೆ, ಬಹುತೇಕ ಎಲ್ಲ ಮೀನುಗಳು ಮತ್ತು ದೊಡ್ಡ ಜಾತಿಯ ಸಮುದ್ರ ಏಡಿಗಳು ಇವುಗಳನ್ನು ಬೇಟೆಯಾಡಿ ತಿನ್ನುತ್ತವೆ. ಸ್ಯಾಂಡ್ ಡಾಲರ್‌ಗಳಿಗೆಲಾರ್ವಾ, ಸೆಟ್ಲೆ ಮೀನಿನ ಸಣ್ಣ ಮರಿಗಳು, ಆಲ್ಗೆ ಮುಂತಾದವು ಆಹಾರ’ ಎಂದು ಮಾಹಿತಿ ನೀಡಿದರು.

‘ಬಲೆಗೆ ಬಿದ್ದಿರಬಹುದು’
ಆರು ಕೋನಗಳು ಇರುವ ಡಾಲರ್‌ನಂತೆ ಕಾಣುವ ಈ ಸಮುದ್ರ ಜೀವಿಗಳು, ಬಹುಪಾಲು ಪಾರದರ್ಶಕವಾಗಿರುತ್ತವೆ. ಸುಂದರವಾಗಿರುವ ಇವುಗಳು ಮನುಷ್ಯರಿಗೆ ಆಹಾರವಾಗಿ ಬಳಕೆಯಾಗುವುದಿಲ್ಲ.

‘ಟ್ರೋಲ್ ಮೀನುಗಾರಿಕೆಯ ಬಲೆಗಳನ್ನು ಸಮುದ್ರದ ತಳಕ್ಕೆ ಬಿಟ್ಟಾಗಈ ಜೀವಿಗಳು ಸಿಕ್ಕಿಬಿದ್ದಿರುವ ಸಾಧ್ಯತೆಯಿದೆ. ಅವುಗಳು ಉಪಯೋಗವಿಲ್ಲದ ಕಾರಣ ಮೀನುಗಾರರು ಸಮುದ್ರ ದಡದಲ್ಲಿ ಬಿಟ್ಟಿರುವ ಸಾಧ್ಯತೆಯಿದೆ’ ಎಂದು ಡಾ.ಶಿವಕುಮಾರ ಹರಗಿ ಊಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT