ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಪರಿಚಯ ಹೊಸದಾಗಿ ಬೇಕಿಲ್ಲ

ಎನ್‌ಸಿಪಿ ಅಭ್ಯರ್ಥಿ ಮಾಧವ ನಾಯಕ ಅಭಿಮತ
Last Updated 26 ಏಪ್ರಿಲ್ 2018, 11:45 IST
ಅಕ್ಷರ ಗಾತ್ರ

ಕಾರವಾರ:  ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾರವಾರ– ಅಂಕೋಲಾ ಕ್ಷೇತ್ರದ ಎನ್‌ಸಿಪಿ ಅಭ್ಯರ್ಥಿಯಾಗಿ ಮಾಧವ ನಾಯಕ ಕಣಕ್ಕಿಳಿದಿದ್ದಾರೆ. ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ಅವರು ‘ಜನಶಕ್ತಿ ವೇದಿಕೆ’ಯ ಮೂಲಕ ಸಾಮಾಜಿಕ ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಚುನಾವಣೆ ಮತ್ತು ರಾಜಕೀಯದ ಬಗ್ಗೆ ಅವರು ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

 ಹೋರಾಟಗಾರರಾದ ನೀವು ರಾಜಕೀಯಕ್ಕೆ ಯಾಕೆ ಬಂದಿರಿ?

ಈ ಹಿಂದೆ ಅಧಿಕಾರ ಪಡೆದ ಎಲ್ಲ ಶಾಸಕರಿಗೂ ಇಲ್ಲಿ ಉದ್ಯೋಗ ಸೃಷ್ಟಿ ಮಾಡುವಂತೆ ಒತ್ತಾಯಿಸಿದ್ದೇವೆ. ಆದರೆ, ಪ್ರಯೋಜನವಾಗಲಿಲ್ಲ. ಈ ಕ್ಷೇತ್ರಕ್ಕೆ ಅಗತ್ಯವಾದ ಶಿಕ್ಷಣ, ಆರೋಗ್ಯ ಸೌಕರ್ಯವೂ ಸಿಕ್ಕಿಲ್ಲ. ಉದ್ಯೋಗ ಸೃಷ್ಟಿಸುವ ಬದಲು ಜನಪ್ರತಿನಿಧಿಗಳೇ ಉದ್ಯೋಗಪತಿಗಳಾಗುತ್ತಿದ್ದಾರೆ. ಈ ಅವ್ಯವಸ್ಥೆಗಳ ವಿರುದ್ಧ ನನ್ನ ಹೋರಾಟಗಳನ್ನು ಗಮನಿಸುತ್ತಿದ್ದ ನನ್ನ ಗುರುಗಳು ರಾಜಕೀಯ ಪ್ರವೇಶ ಮಾಡುವಂತೆ ಉತ್ತೇಜಿಸಿದರು. ಬೆಂಬಲಿಗರ ಅಭಿಪ್ರಾಯವನ್ನೂ ಸಂಗ್ರಹಿಸಿ ರಾಜಕೀಯ ಪ್ರವೇಶ ಮಾಡಿದ್ದೇನೆ.

ಮೂರು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಲು ನಿಮ್ಮ ಶಕ್ತಿಯೇನು?

ಸತ್ಯ, ಪ್ರಾಮಾಣಿಕತೆ, ಜನರು ಇಟ್ಟಿರುವ ವಿಶ್ವಾಸ, ಅವರು ನೀಡುತ್ತಿರುವ ಸಹಕಾರವೇ ನನ್ನ ಶಕ್ತಿ. ಜನರಿಗೆ ಬದಲಾವಣೆ
ಬೇಕಾಗಿದೆ. ಇರುವ ಮೂವರಲ್ಲಿ ಉತ್ತಮರ ಆಯ್ಕೆ ಮಾಡಬೇಕಾದ ಅನಿವಾರ್ಯತೆಯಿತ್ತು. ಈ ಬಾರಿ ಹಾಗಿಲ್ಲ. ಆಯ್ಕೆಯ ಅವಕಾಶವಿದೆ. ಚುನಾವಣೆಗಾಗಿ ದುಡ್ಡು ಖರ್ಚು ಮಾಡುವವರ ಎದುರು ನಾನು ಹೆದರಿ ಮನೆಯಲ್ಲೇ ಕುಳಿತರೆ ಪ್ರಯೋಜನವಿಲ್ಲ. ಈ ಬಾರಿ ಪ್ರಯತ್ನ ಪಟ್ಟಿರುವ ಕನಿಷ್ಠ ತೃಪ್ತಿಯಾದರೂ ನನಗೆ ಸಿಗುತ್ತದೆ.

ಸ್ಪರ್ಧೆಗೆ ರಾಷ್ಟ್ರೀಯ ಪಕ್ಷವೇ ಯಾಕೆ ಬೇಕು?

ಪಕ್ಷೇತರನಾದರೆ ಮತಯಾಚನೆಗೆ ಕಾರ್ಯಕರ್ತರು ಇರುವುದಿಲ್ಲ. ನನಗೆ ಚಿಹ್ನೆ ಸಿಗುವುದು ತಡವಾಗುತ್ತದೆ. ಇದು ಪ್ರಚಾರಕ್ಕೆ ತೊಡಕಾಗುತ್ತದೆ. ರಾಷ್ಟ್ರೀಯ ಪಕ್ಷ ಎಂದಾಗ ಜನರಿಗೆ ಚಿಹ್ನೆ ಮನಸ್ಸಿನಲ್ಲಿ ಉಳಿಯುತ್ತದೆ.

ಕಾಂಗ್ರೆಸ್, ಬಿಜೆಪಿಯಿಂದಲೂ ಟಿಕೆಟ್‌ಗಾಗಿ ಪ್ರಯತ್ನಿಸಿದ್ದೀರಲ್ಲ?

ನಾನು ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಪ್ರಯತ್ನಿಸಿದ್ದು ನಿಜ.ಆದರೆ, ಬಿಜೆಪಿಯಿಂದ ಟಿಕೆಟ್‌ ಕೇಳಿಲ್ಲ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ನನ್ನನ್ನು ಮಾತುಕತೆಗೆ ಕರೆದಿದ್ದರು. ನಾನು ಅವರ ವಿರುದ್ಧವೇ ಹೋರಾಟ ಮಾಡಿದವನು. ನನಗೆ ಬಿಜೆಪಿ ಟಿಕೆಟ್ ಕೊಡಿ ಎಂದು ಅವರನ್ನು ಕೇಳಲು ನನ್ನ ನೈತಿಕತೆ ಒಪ್ಪಲಿಲ್ಲ. ಪಕ್ಷ ಸೇರುವಂತೆ ಅವರು ನನಗೆ ಆಹ್ವಾನ ನೀಡಿದರು. ‘ಎಲ್ಲರನ್ನೂ ಪಕ್ಷಕ್ಕೆ ಬನ್ನಿ’ ಎಂದು ಮೂಗಿಗೆ ತುಪ್ಪ ಹಚ್ಚುವ ಕೆಲಸವನ್ನು ಅವರು ಮಾಡುತ್ತಿರುವುದು ನನಗೆ ಗೊತ್ತಿರುವ ವಿಷಯ. ಹಾಗಾಗಿ ನಾನು ಬಿಜೆಪಿ ಸೇರಬೇಕು ಎಂದರೆ ಟಿಕೆಟ್ ಖಚಿತಪಡಿಸಿ ಎಂದು ಖಡಾಖಂಡಿತವಾಗಿ ಹೇಳಿದೆ.

ಪ್ರಚಾರಕ್ಕೆ ಕಡಿಮೆ ಸಮಯವಿದೆ. ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತೀರಿ?

ಕ್ಷೇತ್ರದ ಜನರಿಗೆ ನನ್ನನ್ನು ಹೊಸದಾಗಿ ಪರಿಚಯ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ನಾನು ಪ್ರಾಮಾಣಿಕ
ವಾಗಿ ಕೆಲಸ ಮಾಡಲು ಬಂದವನು. ಜನರ ಕಷ್ಟನಷ್ಟ ಅರ್ಥ ಮಾಡಿಕೊಂಡು ಕೆಲಸ ಮಾಡುತ್ತೇನೆ. ಆದ್ದರಿಂದ ಇದು ಸಮಸ್ಯೆಯಾಗದು.

ಮೂವರಲ್ಲಿ ಎದುರಾಳಿ ಯಾರು?

ನಾನು ಬೆಂಬಲಿಗರನ್ನು ಹಣ ಕೊಟ್ಟು ಕರೆದುಕೊಂಡು ಬಂದಿಲ್ಲ. ಮೂವರು ಅಭ್ಯರ್ಥಿಗಳು ಮೂರು ತಿಂಗಳಿನಿಂದ ಪ್ರಚಾರ ಮಾಡುತ್ತಿದ್ದಾರೆ. ನನಗೆ ಪ್ರಾಮಾಣಿಕ ಬೆಂಬಲಿಗರಿದ್ದಾರೆ. ಆದ್ದರಿಂದ ಉಳಿದೆಲ್ಲವರಿಗಿಂತ ಮುಂದೆ ಇದ್ದೇನೆ.

ರಾಜಕೀಯ ಪ್ರವೇಶದ ಬಯಕೆ ಹಳೆಯದಲ್ಲವೇ?

ನನಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ. 8–10 ವರ್ಷಗಳ ಹಿಂದೆ ಒಂದು ಸಲ ಸಮಾಜವಾದಿ ಪಕ್ಷ ಸೇರುವ ಯೋಚನೆ ಬಂದಿತ್ತು. ಆಗ ಬಂಗಾರಪ್ಪ ಅವರನ್ನು ಶಿವಮೊಗ್ಗದಲ್ಲಿ ಭೇಟಿ ಮಾಡಿದ್ದೆ. ಆದರೆ, ಪಕ್ಷ ಸೇರ್ಪಡೆಯಾಗಲಿಲ್ಲ. ರಾಜಕೀಯದಲ್ಲಿ ಹೊಲಸು ಇದೆ ಎಂಬುದು ಕಾಲಕ್ರಮೇಣ ಮನವರಿಕೆಯಾಯ್ತು. ಹಾಗಾಗಿ ಇಷ್ಟು ವರ್ಷ ಅದರಲ್ಲಿ ನೇರವಾಗಿ ಭಾಗವಹಿಸಲಿಲ್ಲ. ಮೂರು ಚುನಾವಣೆಗಳಲ್ಲಿ ನಾನು ಬೇರೆಯವರನ್ನು ಬೆಂಬಲಿಸಿದೆ. ಆದರೆ, ನಾನು ಬೆಂಬಲಿಸಿದವರು ಮಾತಿಗೆ ತಪ್ಪಿದರು. ಇದರಿಂದ ಪಶ್ಚಾತ್ತಾಪಪಟ್ಟು ದೇವಸ್ಥಾನದ ಎದುರು ಬೂಟು ಪಾಲಿಶ್ ಮಾಡುವ ಮೂಲಕ ಪ್ರಾಯಶ್ಚಿತ್ತ ಮಾಡಿಕೊಂಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT