ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಹಿನ್ನೆಲೆ: ವಾರ್ಡ್‌ಗಳಿಗೆ ಹೊರಟ ತರಕಾರಿ ವಾಹನ

ಇಂಧನ ಸಮಸ್ಯೆ ಎದುರಿಸುತ್ತಿರುವ ರೈತರು
Last Updated 28 ಮಾರ್ಚ್ 2020, 12:47 IST
ಅಕ್ಷರ ಗಾತ್ರ

ಶಿರಸಿ: ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಶನಿವಾರ ಕೆಲವು ವಾರ್ಡ್‌ಗಳಿಗೆ ಅವಶ್ಯ ವಸ್ತುಗಳ ಪೂರೈಕೆ ನಡೆಯಿತು. ಕೆಎಚ್‌ಬಿ ಕಾಲೊನಿ, ಅಶೋಕನಗರ ಮುಂತಾದ ಕಡೆಗಳಲ್ಲಿ ವಾಹನದ ಮೂಲಕ ತರಕಾರಿ, ಹಣ್ಣು ಪೂರೈಕೆ ಮಾಡಲಾಯಿತು.

ಗ್ರಾಮೀಣ ಭಾಗದ ಜನರ ಬೇಡಿಕೆ ಪೂರೈಸಲು ಟಿಎಸ್‌ಎಸ್ ಸೂಪರ್ ಮಾರ್ಕೆಟ್ ಹಾಗೂ ಇನ್ನೆರಡು ವ್ಯಾಪಾರಸ್ಥರು ಮುಂದಾಗಿದ್ದಾರೆ. ಟಿಎಸ್‌ಎಸ್‌ನ ‘ಗ್ರಾಮೀಣ ದಿನಸಿ ವ್ಯವಸ್ಥೆ’ ವಾಹನವು ಶನಿವಾರದಿಂದ ಹಳ್ಳಿ ಕಡೆಗೆ ಹೊರಟಿದೆ. ಕೆಲವು ಅಂಗಡಿಗಳು ಶನಿವಾರ ಕೆಲ ಹೊತ್ತು ಬಾಗಿಲು ತೆರೆದಿದ್ದವು. ಜನರು ಅಗತ್ಯ ಸಾಮಗ್ರಿಗಳನ್ನು ಖರೀದಿಸಿದರು. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಗ್ರಾಮ ಕಾರ್ಯಪಡೆ ರಚನೆ ಮಾಡಿ, ಹಳ್ಳಿಗರ ಸಮಸ್ಯೆ ಬಗೆಹರಿಸಲು ಆಡಳಿತ ಕ್ರಮವಹಿಸುತ್ತಿದೆ.

ಸರ್ಕಾರಿ ನೌಕರರು, ಬ್ಯಾಂಕ್ ಸಿಬ್ಬಂದಿ, ಪೊಲೀಸರು, ಪತ್ರಕರ್ತರು ಹೀಗೆ ಅನುಮತಿ ಇದ್ದವರಿಗಷ್ಟೇ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಸಿಗುತ್ತಿರುವುದರಿಂದ, ಗ್ರಾಮೀಣ ಪ್ರದೇಶದಲ್ಲಿ ನಿತ್ಯ ಹಾಲಿನ ಕ್ಯಾನ್ ಸಾಗಿಸುವ ವಾಹನಗಳು ಇಂಧನ ಕೊರತೆ ಅನುಭವಿಸುತ್ತಿವೆ. ಬೇಸಿಗೆ ಕಾಲವಾಗಿರುವುದರಿಂದ ರೈತರಿಗೆ ತೋಟ, ಗದ್ದೆಗಳಿಗೆ ನೀರು ಹಾಯಿಸುವುದು ಅನಿವಾರ್ಯವಾಗಿದೆ. ಆದರೆ, ಅವರಿಗೆ ಪಂಪ್‌ಸೆಟ್ ಚಾಲು ಮಾಡಲು ಇಂಧನ ಸಿಗದಿರುವುದು ಸಮಸ್ಯೆಯಾಗಿ ಕಾಡುತ್ತಿದೆ.

ಸುಭಾಶ್ಚಂದ್ರ ಭೋಸ್ ಕಾರ್ಯಪಡೆಯ ಸದಸ್ಯರು, ತೀರಾ ಅವಶ್ಯವುಳ್ಳ ಜನರ ಮನೆಬಾಗಿಲಿಗೆ ಸಾಮಗ್ರಿಗಳನ್ನು ತಲುಪಿಸುವ ಸೇವೆ ಮಾಡುತ್ತಿದ್ದಾರೆ. ಭಾರತೀಯ ವೈದ್ಯಕೀಯ ಸಂಘದ ಶಿರಸಿ ಘಟಕವು ಪಂಡಿತ್ ಆಸ್ಪತ್ರೆಯ ಫಿವರ್ ಕ್ಲಿನಿಕ್‌ನಲ್ಲಿ ಕೆಲಸ ಮಾಡುವ ವೈದ್ಯರು, ಸಿಬ್ಬಂದಿಗೆ ಸುರಕ್ಷಾ ಕಿಟ್‌ಗಳನ್ನು ವಿತರಿಸಿದೆ.

ದೊಡ್ನಳ್ಳಿ ರಸ್ತೆಯಲ್ಲಿ ಸ್ಥಳೀಯರನ್ನು ಹೊರತುಪಡಿಸಿ, ಇನ್ಯಾರಾದರೂ ಬಂದರೆ ಗಮನಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂಬ ಫಲಕವನ್ನು ಶಿಕ್ಷಕ ಕೆ.ಎಲ್.ಭಟ್ಟ ಹಾಕಿದ್ದಾರೆ. ಇದರ ಮುಂದಿನ ಭಾಗವಾಗಿ ಊರಿನ ಜನರು ಪಾಳಿಯಲ್ಲಿ ಕುಳಿತು ಹೊರಗಿನವರು ಗ್ರಾಮಕ್ಕೆ ಪ್ರವೇಶ ಮಾಡದಂತೆ ಕಾವಲು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT