ಒಣಗಿದ ಬಿದಿರು; ಅರಣ್ಯ ಇಲಾಖೆ ನಿರ್ಲಕ್ಷ್ಯ

7
ಬೇಸಿಗೆಯಲ್ಲಿ ಬೆಂಕಿ ಬೀಳುವ ಆತಂಕ, ಮುನ್ನೆಚ್ಚರಿಕೆ ಕ್ರಮಕ್ಕೆ ಒತ್ತಾಯ

ಒಣಗಿದ ಬಿದಿರು; ಅರಣ್ಯ ಇಲಾಖೆ ನಿರ್ಲಕ್ಷ್ಯ

Published:
Updated:
Deccan Herald

ಶಿರಸಿ: ಹೂ ಬಿಟ್ಟ ಬಿದಿರು ಹಿಂಡು, ಒಣಗಿ ನಿಂತು ಹಲವಾರು ತಿಂಗಳುಗಳು ಕಳೆದಿವೆ. ರಸ್ತೆ ಬಾಗಿ ನಿಂತಿರುವ ಬಿದಿರು ಹಿಂಡು, ವಾಹನ ಸಂಚಾರಕ್ಕೆ ಅಡ್ಡಿಯುಂಟುಮಾಡುತ್ತಿದೆ. ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ, ಬೇಸಿಗೆಯಲ್ಲಿ ಕಾಡಿಗೆ ಕಾಡ್ಗಿಚ್ಚು ಹರಡುವ ಆತಂಕ ಎದುರಾಗಿದೆ.

ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲ್ಲೂಕುಗಳಲ್ಲಿ ಎಲ್ಲೆಡೆ ಬಿದಿರು ಒಣಗಿದೆ. ಯಾವುದೇ ರಸ್ತೆಯಲ್ಲಿ ಸಂಚರಿಸಿದರೂ, ಒಣಗಿದ ಬಿದಿರು ಹಿಂಡು ಕಾಣಸಿಗುತ್ತದೆ. ಒಣಗಿರುವ ಬಿದಿರಿಗೆ ಬೇಗ ಬೆಂಕಿ ಹೊತ್ತಿಕೊಳ್ಳುತ್ತದೆ. ಬಿದಿರಿಗೆ ಬೆಂಕಿ ಬಿದ್ದರೆ, ಪಟಾಕಿ ಫ್ಯಾಕ್ಟರಿಗೆ ಬೆಂಕಿ ಬಿದ್ದಂತೆ, ದೊಡ್ಡ ಸದ್ದಾಗುತ್ತದೆ, ಅಲ್ಲದೇ ಬೆಂಕಿಯ ಕೆನ್ನಾಲಿಗೆ ಮುಂದೆ ಚಾಚುತ್ತ ಹೋಗುವುದರಿಂದ ನೈಸರ್ಗಿಕ ಕಾಡಿಗೆ ಅಪಾಯವಿದೆ ಎನ್ನುತ್ತಾರೆ ಇಸಳೂರು ಗ್ರಾಮ ಪಂಚಾಯ್ತಿ ಸದಸ್ಯ ಆರ್.ವಿ.ಹೆಗಡೆ.

ಒಣಗಿದ ಬಿದಿರು ಹಿಂಡುಗಳನ್ನು ತೆರವುಗೊಳಿಸುವಂತೆ ಜನಪ್ರತಿನಿಧಿಗಳು, ಸಾರ್ವಜನಿಕರು ಅರಣ್ಯ ಇಲಾಖೆಗೆ ಹಲವಾರು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಕೆಲ ಕಡೆಗಳಲ್ಲಿ ಮಾತ್ರ, ರಸ್ತೆಗೆ ಬಂದಿದ್ದ ಹಿಂಡನ್ನು ಬದಿಗೆ ಸರಿಸಿ, ಕೈತೊಳೆದುಕೊಂಡಿರುವ ಇಲಾಖೆ, ಉಳಿದವನ್ನು ಹಾಗೆಯೇ ಬಿಟ್ಟಿದೆ. ಬಿದಿರು ಕಟ್ಟೆಬಂದ ನಂತರ ಚಿಗುರುವುದಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಕಟ್ಟೆ ಬಂದ ಕೂಡಲೇ ಹರಾಜು ಮಾಡಿ ಮಳೆಗಾಲದೊಳಗೆ ವಿಲೇವಾರಿ ಮಾಡಿದ್ದಿದ್ದರೆ, ಬೆಂಕಿ ಭಯ ಅಷ್ಟರ ಮಟ್ಟಿಗೆ ಕಡಿಮೆಯಾಗುತ್ತಿತ್ತು. ಆದರೆ, ಅರಣ್ಯ ಇಲಾಖೆಗೆ ಇದಾವುದೂ ಕಣ್ಣಿಗೆ ಕಾಣತ್ತಿಲ್ಲ. ವಿದ್ಯುತ್ ಅವಘಡ ಅಥವಾ ಕಿಡಿಗೇಡಿಗಳ ಕೃತ್ಯದಿಂದ ಅರಣ್ಯಕ್ಕೆ ಬೆಂಕಿ ಬಿದ್ದರೆ ಮುಂದಿನ ಅನಾಹುತ ಊಹಿಸಲು ಅಸಾಧ್ಯ. ಇನ್ನಾದರೂ ಇಲಾಖೆ ಎಚ್ಚೆತ್ತುಕೊಂಡು, ವ್ಯಾಪಕ ಕಾರ್ಯಾಚರಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೆನರಾ ಅರಣ್ಯ ವೃತ್ತದಾದ್ಯಂತ ಕಳೆದ ವರ್ಷದಿಂದ ಅರಣ್ಯಕ್ಕೆ ಬೆಂಕಿ ಬೀಳದಂತೆ ಇಲಾಖೆಯಿಂದ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಆಯ್ದ ಪ್ರದೇಶಗಳಲ್ಲಿ ಬೆಂಕಿ ರೇಖೆಗಳನ್ನು ರಚಿಸಲಾಗಿದೆ. ಬೆಂಕಿ ರಕ್ಷಣೆ ಕಾವಲುಗಾರರನ್ನು ಸಹ ನೇಮಿಸಿ ಬೆಂಕಿ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದು ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಬಾಸರಕೋಡ ಪ್ರತಿಕ್ರಿಯಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !