ಹನಿ ನೀರಾವರಿಯಲ್ಲಿ ಲಾಭ ನೀಡಿದ ಪಪ್ಪಾಯ

ಮಂಗಳವಾರ, ಏಪ್ರಿಲ್ 23, 2019
31 °C
ಮುಂಡಗೋಡ ತಾಲ್ಲೂಕಿನ ಕೊಪ್ಪ ಗ್ರಾಮದ ರೈತನ ಜಮೀನಿನಲ್ಲಿ ಮಿಶ್ರ ಬೆಳೆ

ಹನಿ ನೀರಾವರಿಯಲ್ಲಿ ಲಾಭ ನೀಡಿದ ಪಪ್ಪಾಯ

Published:
Updated:
Prajavani

ಮುಂಡಗೋಡ: ಮಳೆಯಾಶ್ರಿತ ಭತ್ತದಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ ಆಗುತ್ತಿತ್ತು. ಒಂದೇ ಬೆಳೆ ನಂಬಿದರೆ ವರ್ಷದಿಂದ ವರ್ಷಕ್ಕೆ ಸಾಲ ಜಾಸ್ತಿ ಆಗುತ್ತದೆ ಎಂದುಕೊಂಡು ತೋಟಗಾರಿಕಾ ಬೆಳೆಯತ್ತ ಚಿತ್ತ ಹರಿಸಿದ್ದರು. 15 ವರ್ಷಗಳ ಹಿಂದೆ ಹನಿ ನೀರಾವರಿ ಬೇಸಾಯಕ್ಕೆ ಒತ್ತು ನೀಡಿ, ಇಂದು ಲಾಭದ ಕೃಷಿಯೊಂದಿಗೆ ಪ್ರಗತಿಪರ ರೈತರಾಗಿದ್ದಾರೆ.

ವೃತ್ತಿಯಲ್ಲಿ ಪತ್ರಕರ್ತರೂ ಆಗಿರುವ ತಾಲ್ಲೂಕಿನ ಕೊಪ್ಪ ಗ್ರಾಮದ ಬಸವರಾಜ ಪಾಟೀಲ್, ತೋಟಗಾರಿಕಾ ಬೆಳೆಗಳಿಂದ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಸಾಂಪ್ರದಾಯಿಕ ಬೆಳೆಗೆ ಜೋತುಬೀಳದೆ, ಸಾವಯವ ಕೃಷಿ ಅಳವಡಿಸಿಕೊಂಡು ಕಾಲಕ್ಕೆ ತಕ್ಕಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

‘ಒಟ್ಟು ಎಂಟು ಎಕರೆಯಲ್ಲಿ ಅಡಿಕೆ, ತೆಂಗು, ಬಾಳೆ, ಕರಿಮೆಣಸು ಬೆಳೆದಿದ್ದೇನೆ. ಈಚೆಗೆ ಪಪ್ಪಾಯಿ ಸಹ ಬೆಳೆದಿದ್ದು, ಮೊದಲನೆ ಕಟಾವಿನಲ್ಲಿ ಲಾಭ ನೀಡಿದೆ. ಬೇಸಿಗೆಯಲ್ಲಿ ಉದ್ದು, ಅಲಸಂದಿ ಸಹ ಬೆಳೆಯಲಾಗುತ್ತದೆ. ಇದರ ಜೊತೆಗೆ ಮತ್ತೊಂದು ನಾಲ್ಕು ಎಕರೆಯಲ್ಲಿ ಭತ್ತ ಬೆಳೆಯಲಾಗುತ್ತದೆ. ಕೇವಲ ಒಂದೇ ಬೆಳೆಯತ್ತ ಮುಖ ಮಾಡಿದರೆ, ರೈತರು ಆರ್ಥಿಕವಾಗಿ ಸುಧಾರಿಸುವುದಿಲ್ಲ. ಜಮೀನಿನ ದಡದಲ್ಲಿ ಸಾಗವಾನಿ, ಅಕೇಶಿಯಾ ಮರಗಳನ್ನು ಸಹ ಬೆಳೆಸಿ ಲಾಭ ಗಳಿಸಬಹುದು’ ಎನ್ನುತ್ತಾರೆ ರೈತ ಬಸವರಾಜ ಪಾಟೀಲ್.

ಲಾಭ ನೀಡಿದ ಪಪ್ಪಾಯಿ: ‘ಇಲ್ಲಿನ ಹವಾಗುಣಕ್ಕೆ ಸೂಕ್ತ ಅಲ್ಲದಿದ್ದರೂ ಮೂರೂವರೆ ಎಕರೆಯಲ್ಲಿ 2,600 ಪಪ್ಪಾಯಿ ಗಿಡಗಳನ್ನು ಬೆಳೆಸಲಾಗಿದೆ. ಸ್ಥಳೀಯವಾಗಿ ಪ್ರತಿ ಕೆ.ಜಿ.ಗೆ ₹ 12ರಿಂದ ₹ 15ರಂತೆ ಹಾಗೂ ಗೋವಾ ಮಾರುಕಟ್ಟೆಯಲ್ಲಿ ಪ್ರತಿ ಟನ್‌ಗೆ ₹ 9 ಸಾವಿರದಿಂದ ₹ 10 ಸಾವಿರದಂತೆ ಖರೀದಿ ಮಾಡುತ್ತಾರೆ. ಮೊದಲನೆ ಕಟಾವಿನಲ್ಲಿ ಪ್ರತಿ ಎಕರೆಗೆ ₹ 1.5 ಲಕ್ಷದಷ್ಟು ಲಾಭ ಆಗಿದೆ. ಪಪ್ಪಾಯಿ ಬೆಳೆಯನ್ನು ಕಾಳಜಿಯಿಂದ ಬೆಳೆಸಬೇಕು. ನೀರು ಹಾಯಿಸುವುದರ ಬದಲಾಗಿ ಹನಿ ನೀರಾವರಿಗೆ ಒತ್ತು ನೀಡಿದ್ದೇನೆ. ಇದರಿಂದ ತೋಟಕ್ಕೆ ಅಗತ್ಯವಿದ್ದಷ್ಟು ಮಾತ್ರ ನೀರು ಬಳಕೆಯಾಗುತ್ತದೆ’ ಎಂದು ಹೇಳಿದರು.

ಪ್ರಶಸ್ತಿ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ‘ಶ್ರೇಷ್ಠ ಕೃಷಿಕ’ ಪ್ರಶಸ್ತಿ, ಇಲ್ಲಿನ ಕೃಷಿ ಇಲಾಖೆಯ ‘ಪ್ರಗತಿಪರ ರೈತ’ ಪ್ರಶಸ್ತಿ ಲಭಿಸಿವೆ. ಈಚೆಗೆ ಶಿರಸಿಯಲ್ಲಿ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ಇವರು ಬೆಳೆದ ಪಪ್ಪಾಯಿಗೆ ಪ್ರಥಮ ಬಹುಮಾನ ಬಂದಿದೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !