ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂಚಾರ ನಿಗಾಕ್ಕೆ ಡ್ರೋನ್ ಕ್ಯಾಮೆರಾ

ಸಾರ್ವಜನಿಕರ ಕೈಯಲ್ಲಿ ತಪ್ಪೊಪ್ಪಿಗೆ ಫಲಕ ಹಿಡಿಸಿದ ಪೊಲೀಸರು
Last Updated 30 ಮಾರ್ಚ್ 2020, 12:29 IST
ಅಕ್ಷರ ಗಾತ್ರ

ಶಿರಸಿ: ಅನವಶ್ಯಕವಾಗಿ ರಸ್ತೆಗಿಳಿಯುವ ಸಾರ್ವಜನಿಕರನ್ನು ನಿಯಂತ್ರಿಸಲು ಇಲ್ಲಿನ ಪೊಲೀಸರು ಸೋಮವಾರ ಹೊಸ ತಂತ್ರ ರೂಪಿಸಿದರು. ಬೈಕ್ ಹಿಡಿದು ಬಂದವರನ್ನು ನಿಲ್ಲಿಸಿ, ಅವರ ಕೈಯಲ್ಲಿ ‘ನನ್ನನ್ನು ಕ್ಷಮಿಸಿ, ನಾನು ಕರೊನಾ ವಿರುದ್ಧ ಹೊರಡಿಸಿದ ಲಾಕ್‌ಡೌನ್ ಆದೇಶವನ್ನು ಉಲ್ಲಂಘಿಸಿದ್ದೇನೆ' ಫಲಕವನ್ನು ಹಿಡಿಸಿ, ಅವರಲ್ಲಿ ತಪ್ಪಿನ ಪ್ರಜ್ಞೆ ಮೂಡಿಸಿದರು.

ಪೇಟೆ ಬಂದಿದ್ದ ಹಲವಾರು ಜನರ ಕೈಯಲ್ಲಿ ಸಾರ್ವಜನಿಕವಾಗಿ ಈ ಫಲಕ ಹಿಡಿಸುವ ಮೂಲಕ, ಅವರು ಇನ್ನು ಸುಖಾಸುಮ್ಮನೆ ಪೇಟೆಗೆ ಬರದಂತೆ ತಡೆಯುವ ಪೊಲೀಸರ ಪ್ರಯತ್ನ ಯಶಸ್ವಿಯಾಯಿತು.

‘ಅನಗತ್ಯವಾಗಿ ಬೀದಿಗಿಳಿಯುವವರ ಮೇಲೆ ಡ್ರೋನ್ ಕ್ಯಾಮೆರಾ ನಿಗಾವಹಿಸಲಿದೆ. ಕಸ್ತೂರಬಾ ನಗರ, ಹಳೆ ಬಸ್ ನಿಲ್ದಾಣ, ನಿಲೇಕಣಿ ಮೀನು ಮಾರುಕಟ್ಟೆ, ವಿಕಾಸಾಶ್ರಮ ಮೈದಾನದ ಬಳಿ ಡ್ರೋನ್ ಕ್ಯಾಮೆರಾ ಅಳವಡಿಸಲಾಗಿದೆ. ಜನರು ಅನಾವಶ್ಯಕವಾಗಿ ತಿರುಗುವುದು ಕಂಡುಬಂದಲ್ಲಿ, ಡ್ರೋನ್‌ನಲ್ಲಿ ಸೆರೆಯಾಗುವ ಚಿತ್ರ ಆಧರಿಸಿ, ಅಂತಹವರ ಮೇಲೆ ಪ್ರಕರಣ ದಾಖಲಿಸಲಾಗುವುದು. ಜಿಲ್ಲೆಯ ಹಲವೆಡೆಗಳಲ್ಲಿ ಇದೇ ರೀತಿ ಕಾರ್ಯ ಚಟುವಟಿಕೆ ನಡೆಯುತ್ತಿದೆ’ ಎಂದು ಡಿವೈಎಸ್ಪಿ ಜಿ.ಟಿ.ನಾಯಕ ತಿಳಿಸಿದ್ದಾರೆ.

ಮುಖ್ಯ ರಸ್ತೆ, ಗಲ್ಲಿಗಳಲ್ಲಿ ಜನರು ತಿರುಗುವುದನ್ನು ನಿಯಂತ್ರಿಸಲು ಇನ್ನೊಂದು ತಂತ್ರ ರೂಪಿಸಿದ ಪೊಲೀಸರು, ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡಿಂಗ್ ಮಾಡಿ ವಾಹನಗಳ ತಪಾಸಣೆ ಮಾಡಿದರು. ವಾಹನಗಳ ದಾಖಲೆ ಸರಿಯಿಲ್ಲದ, ವಿಮೆ ತುಂಬದ ವಾಹನ ಸವಾರರ ಮೇಲೆ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿದರು. ದಾಖಲೆಯಿಲ್ಲದ ಅನಧಿಕೃತ ವಾಹನಗಳ ಮುಟ್ಟುಗೋಲು ಹಾಕಿರುವ ಪೊಲೀಸರು, ಲಾಕ್‌ಡೌನ್ ಮುಗಿದ ನಂತರ ಬಿಟ್ಟುಕೊಡುವುದಾಗಿ ತಿಳಿಸಿದ್ದಾರೆ.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತರಕಾರಿ, ಹಣ್ಣು, ದಿನಸಿ ಪೂರೈಕೆ ಆರಂಭವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಟಿಎಸ್‌ಎಸ್ ಈ ಕಾರ್ಯ ನಿರ್ವಹಿಸುತ್ತಿದೆ. ನಗರದಲ್ಲಿ ಆಯಾ ವಾರ್ಡ್‌ಗಳ ನಿವಾಸಿಗಳು ಇದರ ಹೊಣೆ ವಹಿಸಿಕೊಂಡಿದ್ದಾರೆ.

ಎಲ್ಲ ತರಕಾರಿಗಳ ಸಂಗ್ರಹವನ್ನು ವಿಕಾಸಾಶ್ರಮ ಮೈದಾನದಲ್ಲಿಯೇ ಮಾಡಬೇಕು. ಅಲ್ಲಿಂದಲೇ ವಿವಿಧ ವಾರ್ಡ್‌ಗಳಿಗೆ ಹೊರಡಬೇಕು ಎಂದು ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಆದೇಶ ಹೊರಡಿಸಿದ್ದಾರೆ. ಅಂತೆಯೇ ಸೋಮವಾರ ಎಲ್ಲ ತರಕಾರಿ ಕೊಂಡೊಯ್ಯುವ ವಾಹನಗಳು ಇಲ್ಲಿಂದಲೇ ಹೊರಟವು.

ಕಾರ್ಯಪಡೆಯ ಕಾರ್ಯಕ್ಕೆ ಶ್ಲಾಘನೆ

ಸುಭಾಸ್‌ಚಂದ್ರ ಭೋಸ್ ಕಾರ್ಯಪಡೆಯು ಕಳೆದ ನಾಲ್ಕೈದು ದಿನಗಳಿಂದ ಸಾರ್ವಜನಿಕರಿಗೆ ಕಿರಾಣಿ, ದಿನಸಿ ಸಾಮಗ್ರಿಗಳನ್ನು ತಲುಪಿಸುವ ಕಾರ್ಯವನ್ನು ಸೇವೆಯ ರೂಪದಲ್ಲಿ ಮಾಡುತ್ತಿದೆ. ಕರೆ ಮಾಡಿ ತಿಳಿಸಿದವರಿಗೆ, ಅವರ ಮನೆ ಬಾಗಿಲಿಗೆ ಅಗತ್ಯ ಸಾಮಗ್ರಿಗಳನ್ನು ಉಚಿತವಾಗಿ ತಲುಪಿಸುವ ಕಾರ್ಯವನ್ನು ಈ ತಂಡದ ಸದಸ್ಯರು ಮಾಡುತ್ತಿದ್ದಾರೆ. ಮುಖಗವಸು, ಗ್ಲೌಸ್ ತೊಟ್ಟು ವ್ಯವಸ್ಥಿತವಾಗಿ ಹೋಗುವ ಇವರು, ಅಂಗಡಿ ಮಾಲೀಕ ನೀಡುವ ಬಿಲ್ ಸಹಿತ ಸಾಮಗ್ರಿಗಳನ್ನು ಜನರಿಗೆ ತಲುಪಿಸುವ ಮೂಲಕ, ವ್ಯಾಪಾರಸ್ಥರ ಮತ್ತು ಗ್ರಾಹಕರ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ನಗರದಲ್ಲಿ ಮೂರ್ನಾಲ್ಕು ತಂಡಗಳು ಇದೇ ರೀತಿ ಕಾರ್ಯನಿರ್ವಹಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT