ಶನಿವಾರ, ಜನವರಿ 25, 2020
16 °C

ಮಿನಿ ಮ್ಯಾರಥಾನ್: ಡಿವೈಇಎಸ್ ವಿದ್ಯಾರ್ಥಿಗಳ ಪಾರಮ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಭಾರತೀಯ ನೌಕಾದಳ ಸಪ್ತಾಹ –2019’ರ ಅಂಗವಾಗಿ ಇಲ್ಲಿನ ನೌಕಾನೆಲೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಮಿನಿ ಮ್ಯಾರಥಾನ್‌ನಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಾಲೆಯ (ಡಿವೈಇಎಸ್) ವಿದ್ಯಾರ್ಥಿಗಳು ಪಾರಮ್ಯ ಮೆರೆದರು. 

16 ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ 3.5 ಕಿಲೋಮೀಟರ್ ಓಟ ಆಯೋಜಿಸಲಾಗಿತ್ತು. ಇದಕ್ಕೆ ನೌಕಾಪಡೆಯ ಕರ್ನಾಟಕ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಹಸಿರು ನಿಶಾನೆ ತೋರಿದರು. 400 ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ, ಡಿವೈಇಎಸ್‌ನವರಾದ ಶಿವಾಜಿ 9.29.49 ನಿಮಿಷಗಳಲ್ಲಿ ಗುರಿ ತಲುಪಿ ಮೊದಲಿಗರಾದರು. ಗಿಬ್ಸ್ ಎಲ್ ಸಿದ್ದಿ ದ್ವಿತೀಯ ಹಾಗೂ ನೇವಿ ಚಿಲ್ಡ್ರನ್ ಸ್ಕೂಲ್‌ನ ಸುಭಾಸ್ ತೃತೀಯ ಸ್ಥಾನ ಗೆದ್ದುಕೊಂಡರು. 

ಬಾಲಕಿಯರ ವಿಭಾಗದಲ್ಲಿ ಡಿವೈಇಎಸ್‌ನ ಫೈರೋಜಾ ಜಿ.ಅಂಗಡೀಕರ್ 12.42.74 ನಿಮಿಷಗಳಲ್ಲಿ ಗುರಿ ಮುಟ್ಟಿ ಪ್ರಥಮ ಸ್ಥಾನ ಗೆದ್ದರು. ಇದೇ ಶಾಲೆಯ ಧನ್ಯಾ ಎಸ್.ನಾಯ್ಕ ದ್ವಿತೀಯ ಹಾಗೂ ಪ್ರಿನೀತಾ ಎಂ.ಸಿದ್ದಿ ತೃತೀಯ ಸ್ಥಾನ ಜಯಿಸಿದರು. 

17ರಿಂದ 24 ವರ್ಷದ ಒಳಗಿನವರಿಗೆ 12.5 ಕಿಲೋಮೀಟರ್ ದೂರದ ಓಟವನ್ನು ನಿಗದಿ ಮಾಡಲಾಗಿತ್ತು. ಈ ಸ್ಪರ್ಧೆಗೆ ನೌಕಾನೆಲೆಯ ಯಾರ್ಡ್ ಅಡ್ಮಿರಲ್ ಸುಪರಿಂಟೆಂಡೆಂಟ್ ರಿಯರ್ ಅಡ್ಮಿರಲ್ ಎ.ಪಿ.ಕುಲಕರ್ಣಿ ಚಾಲನೆ ನೀಡಿದರು. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಪುರುಷರ ವಿಭಾಗದಲ್ಲಿ ಡಿವೈಇಎಸ್‌ ಕಾಲೇಜಿನ ಸಮೃದ್ಧ ನಾಯಕ ಮೊದಲಿಗರಾದರು. ಅವರು 46.17.34 ನಿಮಿಷಗಳಲ್ಲಿ ಗುರಿ ತಲುಪಿದರು. ಇದೇ ಕಾಲೇಜಿನ ಸತೀಶ ಜಾಧವ್ ಹಾಗೂ ನಾಗರಾಜ ಗದಗ ಅನುಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನ ಗೆದ್ದರು. 

ಮಹಿಳೆಯರ ವಿಭಾಗದಲ್ಲಿ ಡಿವೈಇಎಸ್‌ ಕಾಲೇಜಿನ ಮೇಘಾ ಪರಸೋಜಿ 1 ಗಂಟೆ 2 ನಿಮಿಷ 34 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಗೆದ್ದರು. ಇದೇ ಕಾಲೇಜಿನ ಭವಾನಿ ಕೆ.ಸಿದ್ದಿ ಹಾಗೂ ಸುಧಾ ಎಂ.ನಂದೇಲಕರ್ ದ್ವಿತೀಯ ಮತ್ತು ತೃತೀಯ ಬಹುಮಾನ ಜಯಿಸಿದರು.

ನೌಕಾದಳ ಸಿಬ್ಬಂದಿಯ ಪತ್ನಿಯರ ಸಂಘದ ಅಧ್ಯಕ್ಷೆ ಮನಿತಾ ಸಿಂಗ್ ಬಹುಮಾನ ವಿತರಿಸಿದರು. 16 ಶಿಕ್ಷಣ ಸಂಸ್ಥೆಗಳಿಂದ 550ಕ್ಕೂ ಹೆಚ್ಚಿ ವಿದ್ಯಾರ್ಥಿಗಳು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು. 

ಪ್ರತಿಕ್ರಿಯಿಸಿ (+)