ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರ ಕೈಗೊಂಡರೆ ಎಸ್ಮಾ: ಎಚ್ಚರಿಕೆ

‘ನಮ್ಮ ಮೆಟ್ರೊ’ ಪ್ರಯಾಣಿಕರಿಗೆ ತೊಂದರೆ ಆಗಲು ಅವಕಾಶ ನೀಡೆವು’
Last Updated 8 ಮಾರ್ಚ್ 2018, 19:56 IST
ಅಕ್ಷರ ಗಾತ್ರ

ಬೆಂಗಳೂರು: ಮುಷ್ಕರದಲ್ಲಿ ಭಾಗವಹಿಸುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ ಎಚ್ಚರಿಕೆ ನೀಡಿದೆ.

ವೇತನ ಪರಿಷ್ಕರಣೆಯೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಬಿಎಂಆರ್‌ಸಿಎಲ್‌ ಕಾರ್ಮಿಕರ ಸಂಘಟನೆ ಬುಧವಾರ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಲಿಖಿತ ಮನವಿ ಸಲ್ಲಿಸಿತ್ತು. ಬೇಡಿಕೆ ಈಡೇರಿಸದ್ದರೆ ಇದೇ 21ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ನಿಗಮವು, ‘ಸರ್ಕಾರವು ಮೆಟ್ರೊ ಸೇವೆಯನ್ನು ಅಗತ್ಯ ಸೇವೆ ಎಂದು ಪರಿಗಣಿಸಿದೆ. ಸೇವೆಗೆ ಅಡ್ಡಿಪಡಿಸುವವರ ವಿರುದ್ಧ ಅಗತ್ಯ ಸೇವೆ ನಿರ್ವಹಣಾ ಕಾಯ್ದೆ (ಎಸ್ಮಾ) ಅಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 21 ಮತ್ತು ಸೆಕ್ಷನ್‌ 90 ಹಾಗೂ ಮೆಟ್ರೊ ರೈಲು ಕಾರ್ಯಾಚರಣೆ ಹಾಗೂ ನಿರ್ವಹಣೆ ಕಾಯ್ದೆ 2002ರ ಪ್ರಕಾರ ನಿಗಮದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳೆಲ್ಲರೂ ಸಾರ್ವಜನಿಕ ಸೇವಕರು. ಇವರು ಮೆಟ್ರೊ ಸೇವೆಗೆ ಅಡ್ಡಿಪಡಿಸುವ ಅಥವಾ ಸಾರ್ವಜನಿಕರಿಗೆ ಅನನುಕೂಲ ಉಂಟು
ಮಾಡುವ ಯಾವುದೇ ಕೃತ್ಯ ನಡೆಸುವುದಕ್ಕೆ ಅವಕಾಶ ಇಲ್ಲ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ಸ್ಪಷ್ಟಪಡಿಸಿದ್ದಾರೆ.

ಮುಗ್ಧ ನೌಕರರನ್ನು ತಪ್ಪುದಾರಿಗೆ ಎಳೆಯಲು ಕೆಲವರು ಯತ್ನಿಸುತ್ತಿದ್ದಾರೆ. ಸಂಸ್ಥೆಯ ಉದ್ಯೋಗಿಗಳು ಅಂಥವರಿಂದ ದೂರವಿರಬೇಕು. ಮುಷ್ಕರದಲ್ಲಿ ಭಾಗವಹಿಸಬಾರದು ಎಂದು ಅವರು ಸಲಹೆ ನೀಡಿದ್ದಾರೆ.

‘ಉದ್ಯೊಗಿಗಳು ಮುಷ್ಕರ ನಡೆಸಿದರೂ ಪ್ರಯಾಣಿಕರಿಗೆ ತೊಂದರೆ ಆಗದಂತೆ ಮೆಟ್ರೊ ಸೇವೆ ಮುಂದುವರಿಸುತ್ತೇವೆ. ಇದಕ್ಕೆ ಅಗತ್ಯವಾದ ಎಲ್ಲ ಸಿದ್ಧತೆ ಮಾಡಲಾಗುತ್ತದೆ. ಪ್ರಯಾಣಿಕರಿಗೆ ಭದ್ರತೆಯನ್ನೂ ಒದಗಿಸಲಾಗುತ್ತದೆ’ ಎಂದು ಅವರು ಭರವಸೆ ನೀಡಿದ್ದಾರೆ.

ಉದ್ಯೋಗಿಗಳ ಕುಂದುಕೊರತೆ ಆಲಿಸಲು ನಿಗಮದಲ್ಲಿ ವ್ಯವಸ್ಥೆ ಇದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್ಮಾಗೆ ತಡೆ ನೀಡಿದ್ದ ಹೈಕೋರ್ಟ್‌
ಬಿಎಂಆರ್‌ಸಿಎಲ್‌ ಕಾರ್ಯಚರಣೆ ವಿಭಾಗದ ಸಿಬ್ಬಂದಿ 2017ರ ಜುಲೈ 7ರಂದು ದಿಢೀರ್‌ ಮುಷ್ಕರ ನಡೆಸಿದಾಗ ರಾಜ್ಯ ಸರ್ಕಾರ ಅಗತ್ಯ ಸೇವೆ ನಿರ್ವಹಣಾ ಕಾಯ್ದೆಯನ್ನು(ಎಸ್ಮಾ) ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮೆಟ್ರೊ ಕಾರ್ಮಿಕರ ಸಂಘಟನೆ ಹೈಕೋರ್ಟ್‌ ಮೊರೆ ಹೋಗಿತ್ತು. ಹೈಕೋರ್ಟ್‌ 2017ರ ಅಕ್ಟೋಬರ್‌ 7ರಂದು ಇದಕ್ಕೆ ಮಧ್ಯಂತರ ತಡೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT