ಕಾರವಾರ: ಲಾಕ್‌ಡೌನ್‌ನಿಂದಾಗಿ ಶಾಲಾ ತರಗತಿಗಳು ನಡೆಯುತ್ತಿಲ್ಲ. ಆದರೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜ್ಞಾನದ ಹರಿವು ನಿಲ್ಲಬಾರದು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆಯು ತಂತ್ರಜ್ಞಾನದ ಬಳಕೆಗೆ ಸಿದ್ಧತೆ ನಡೆಸಿದೆ.
ವಿದ್ಯಾರ್ಥಿಗಳ ಪೋಷಕರು, ಶಿಕ್ಷಕರ ಬಳಿ ‘ಸ್ಮಾರ್ಟ್ ಮೊಬೈಲ್ ಫೋನ್’ ಇದೆಯೇ ಹಾಗೂ ಅವುಗಳಿಗೆ ಇಂಟರ್‌ನೆಟ್ ಸಂಪರ್ಕವಿದೆಯೇ ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಇದೇ ರೀತಿ, ಅವರ ಬಳಿ ಕಂಪ್ಯೂಟರ್, ಲ್ಯಾಪ್‌ಟಾಪ್ ಅಥವಾ ಟ್ಯಾಬ್ ಇವೆಯೇ ಎಂದೂ ತಿಳಿದುಕೊಳ್ಳಲಾಗುತ್ತಿದೆ. ಈ ಬಗ್ಗೆ ರಾಜ್ಯದ ಎಲ್ಲ ಶೈಕ್ಷಣಿಕ ಜಿಲ್ಲೆಗಳ ಉಪ ನಿರ್ದೇಶಕರಿಗೆ ಏ.28ರಂದು ಸುತ್ತೋಲೆ ಕಳುಹಿಸಲಾಗಿದೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕಹರೀಶ ಗಾಂವ್ಕರ್, ‘ವಿದ್ಯಾರ್ಥಿಗಳನ್ನು ಶಾಲೆಗಳಿಗೆ ದಾಖಲಾತಿ ಮಾಡಿಕೊಳ್ಳುವಾಗಲೇ ಅವರ ಪೋಷಕರ ಫೋನ್ ನಂಬರ್‌ಗಳನ್ನು ಪಡೆಯಲಾಗಿರುತ್ತದೆ. ಈಗ ಅವರ ಬಳಿಯಾವ ಮಾದರಿಯ (ಸ್ಮಾರ್ಟ್ ಅಥವಾ ಬೇಸಿಕ್) ಮೊಬೈಲ್ ಫೋನ್ ಇದೆ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ಆ ಮಾಹಿತಿಯನ್ನು ಇಲಾಖೆಯ ‘ವಿದ್ಯಾರ್ಥಿ ಸಾಧನೆಯ ದಾಖಲೆಯ ವ್ಯವಸ್ಥೆ’ (ಎಸ್.ಎ.ಟಿ.ಎಸ್)ತಂತ್ರಾಂಶಕ್ಕೆಅಪ್‌ಲೋಡ್ ಮಾಡಲಾಗುತ್ತದೆ’ ಎಂದು ತಿಳಿಸಿದರು.
‘ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯ (ಸಿ.ಆರ್.ಪಿ) ಬಳಿಅವರ ವ್ಯಾಪ್ತಿಯ ಶಿಕ್ಷಕರ ಫೋನ್ ನಂಬರ್‌ಗಳು ಸಾಮಾನ್ಯವಾಗಿರುತ್ತವೆ. ಹಾಗಾಗಿ ಶಿಕ್ಷಕರು, ಎಸ್.ಎ.ಟಿ.ಎಸ್ ತಂತ್ರಾಂಶದಮೂಲಕ ವಿದ್ಯಾರ್ಥಿಗಳ ಪಾಲಕರ ಮೊಬೈಲ್ ಫೋನ್‌ಗಳ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಈಕಾರ್ಯವು ಈಗಾಗಲೇ ಆರಂಭವಾಗಿದೆ’ ಎಂದು ಹೇಳಿದರು.
‘ರಾಜ್ಯದ ಎಲ್ಲಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳ ಪೋಷಕರ ಫೋನ್‌ಗಳ ಮಾಹಿತಿ ಸಂಗ್ರಹಿಸಲಾಗುತ್ತದೆ. ಎಲ್ಲ ಪೋಷಕರ ಬಳಿ ಸ್ಮಾರ್ಟ್ ಫೋನ್ ಇರಲಾರದು. ಆದರೆ, ಇರುವವರ ಮಕ್ಕಳ ಜೊತೆಗಾದರೂ ಸಂವಹನ ಮಾಡಲು ಇದು ಸಹಾಯಕವಾಗಲಿದೆ. ಇದರ ಸಾಧಕ ಬಾಧಕ ನೋಡಿಕೊಂಡು ಯೋಜನೆ ಜಾರಿಯಾಗಲಿದೆ’ ಎಂದು ಅವರು ತಿಳಿಸಿದರು.
ಮನೆಯಿಂದಲೇ ಕಲಿಕೆ!: ಲಾಕ್‌ಡೌನ್ ಅವಧಿಯಲ್ಲಿ ಮನೆಯಿಂದಲೇ ಕೆಲಸ ಮಾಡುವ ಮಾದರಿಯಲ್ಲಿ ಕಲಿಕೆಯೂ ಸಾಧ್ಯವೇ ಎಂದು ಪರಿಶೀಲಿಸಲಾಗುತ್ತದೆ. ಒಂದುವೇಳೆ ಸಾಧ್ಯವಾದರೆ, ಸ್ಮಾರ್ಟ್ ಫೋನ್ ಹೊಂದಿರುವ ಮಕ್ಕಳ ಜೊತೆ ವಾಟ್ಸ್‌ಆ್ಯಪ್, ಟೆಲಿಗ್ರಾಂ, ಯೂಟ್ಯೂಬ್ ಅಥವಾ ಲೈವ್ ವಿಡಿಯೊದ ಮೂಲಕ ಶೈಕ್ಷಣಿಕ ಸಂವಹನ ನಡೆಸಲು ಚಿಂತಿಸಲಾಗಿದೆ. ಮಾಹಿತಿ ಆಧಾರಿತ ಶಿಕ್ಷಣದ ಭಾಗವಾಗಿ ಈ ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.