ದೋಣಿ ಮುಳುಗಿ ಎಂಟು ಮಂದಿ ಸಾವು

7
ಕಾರವಾರದ ಕೂರ್ಮಗಡ ದ್ವೀಪದ ಸಮೀಪ ಅರಬ್ಬಿ ಸಮುದ್ರದಲ್ಲಿ ದುರಂತ

ದೋಣಿ ಮುಳುಗಿ ಎಂಟು ಮಂದಿ ಸಾವು

Published:
Updated:
Prajavani

ಕಾರವಾರ: ಸಮೀಪದ ಕೂರ್ಮಗಡ ದ್ವೀಪದ ಬಳಿ ಅರಬ್ಬಿ ಸಮುದ್ರದಲ್ಲಿ ಸೋಮವಾರ ಒಂದೇ ಜಾಗದಲ್ಲಿ ಎರಡು ಪಾತಿ ದೋಣಿಗಳು ಮುಳುಗಿವೆ. ಮೊದಲ ದೋಣಿಯಲ್ಲಿದ್ದ ಒಂದೇ ಕುಟುಂಬದ ಮೂವರು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ. ಏಳು ಮಂದಿ ನಾಪತ್ತೆಯಾಗಿದ್ದಾರೆ.

ಮೃತರಲ್ಲಿ ಮೂರು ವರ್ಷದ ಒಬ್ಬ ಬಾಲಕ, ಐವರು ಮಹಿಳೆಯರು, ಇಬ್ಬರು ಪುರುಷರು ಸೇರಿದ್ದಾರೆ. 

ಮೃತರನ್ನು ಹಾವೇರಿ ಜಿಲ್ಲೆ ಶಿಗ್ಗಾವಿಯ ಬಾಲಕ ಅರುಣ್, ಮಂಜವ್ವ, ಭಾರತಿ, ಕಾರವಾರ ಸಮೀಪದ ಕಡವಾಡದ ಗಣಪತಿ ಕೊಠಾರಕರ್, ಮೀನಾಕ್ಷಿ ಗಣಪತಿ ಕೊಠಾರಕರ್, ರಾಮನಗುಳಿಯ ನೀಲೇಶ್ ರೋಹಿದಾಸ್ ಪೆಡ್ನೇಕರ್, ಕೆಎಚ್‌ಬಿ ಕಾಲೊನಿಯ ಅಣ್ಣಪ್ಪ ಮಲ್ಲಪ್ಪ ಇಂಗಳದಾಳ್, ಗೋವಾ ಪೋಂಡಾದ ಗೀತಾ ಜನ್ಮೋಜಯ ತಳೇಕರ್ ಎಂದು ಗುರುತಿಸಲಾಗಿದೆ.

ಎರಡನೇ ದೋಣಿಯಲ್ಲಿ ನಾಲ್ವರಿದ್ದು, ಎಲ್ಲರನ್ನೂ ರಕ್ಷಿಸಲಾಗಿದೆ. ಸಮುದ್ರದ ಆ ಜಾಗದಲ್ಲಿ ಸುಳಿ ಇರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಮುಳುಗುತ್ತಿದ್ದವರನ್ನು ರಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದೋಣಿಯಲ್ಲಿ 33 ಜನರಿದ್ದರು ಎಂದು ತಿಳಿದುಬಂದಿದೆ. 18 ಮಂದಿಯನ್ನು ರಕ್ಷಿಸಲಾಗಿದ್ದು, ಏಳು ಜನರು ನಾಪತ್ತೆಯಾಗಿದ್ದಾರೆ. ಮೃತರ ಕುಟುಂಬ ಸದಸ್ಯರಿಗೆ ತಲಾ ₹ 2 ಲಕ್ಷ ಪರಿಹಾರ ನೀಡಲಾಗುವುದು’ ಎಂದು ಹೇಳಿದರು.

ದುರಂತ ಹೇಗಾಯಿತು?:

ಕಡಲತೀರದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ನರಸಿಂಹ ದೇವರ ವಾರ್ಷಿಕ ಜಾತ್ರೆ ನಡೆಯುತ್ತಿತ್ತು. ಅಲ್ಲಿಗೆ ತೆರಳಿ ದೇವರ ದರ್ಶನ ಪಡೆದ ಭಕ್ತರು ಮಧ್ಯಾಹ್ನ 1.30ರ ಸುಮಾರಿಗೆ ವಾಪಸಾಗುತ್ತಿದ್ದ ವೇಳೆ ದುರಂತ ಸಂಭವಿಸಿದೆ. ದೊಡ್ಡ ಅಲೆಯೊಂದು ಅಡ್ಡಲಾಗಿ ಅಪ್ಪಳಿಸಿದಾಗ ದೋಣಿ ಬುಡಮೇಲಾಗಿದೆ. ಆಗ ಮಹಿಳೆಯರು ಮತ್ತು ಮಕ್ಕಳು ಮುಳುಗಿದರು. ಈಜು ಬಲ್ಲವರು ಸಮೀಪದಲ್ಲೇ ಇದ್ದ ದೋಣಿಗಳನ್ನೇರಿದರು.

ಜಾತ್ರೆಗೆ ತೆರಳಿದ್ದ ಕಾರವಾರ ಶಾಸಕಿ ರೂಪಾಲಿ ನಾಯ್ಕ ಕೂಡ ಅಲ್ಲೇ ಸಮೀಪದಲ್ಲೇ ದೋಣಿಯೊಂದರಲ್ಲಿ ವಾಪಸಾಗುತ್ತಿದ್ದರು. ಅವರು ಪ್ರಯಾಣಿಸುತ್ತಿದ್ದ ದೋಣಿಯನ್ನೂ ಒಂದಷ್ಟು ಮಂದಿ ಏರಿ ಜೀವ ಉಳಿಸಿಕೊಂಡರು. ಕರಾವಳಿ ಕಾವಲು ಪೊಲೀಸ್‌ ಹಾಗೂ ಕರಾವಳಿ ಕಾವಲು ಪಡೆಯ ತಲಾ ಎರಡು ದೋಣಿಗಳು, ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !