ಮಂಗಳವಾರ, ಆಗಸ್ಟ್ 3, 2021
21 °C
ಕಾರವಾರದ ಕೋಡಿಬೀರ ದೇಗುಲ ಸಮೀಪ, ಸಾಯಿಕಟ್ಟಾದಲ್ಲಿ ಕಂಟೈನ್‌ಮೆಂಟ್ ವಲಯ

ಉತ್ತರ ಕನ್ನಡ | ಎಂಟು ಮಂದಿ ಗುಣಮುಖ, ಐವರಿಗೆ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯಲ್ಲಿ ಶುಕ್ರವಾರ ಐವರಿಗೆ ಕೋವಿಡ್ 19 ದೃಢಪಟ್ಟಿದ್ದರೆ, ಎಂಟು ಮಂದಿ ಗುಣಮುಖರಾಗಿ ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್ ವಾರ್ಡ್‌ನಿಂದ ಬಿಡುಗಡೆಯಾದರು.

ಹೊಸ ಸೋಂಕಿತರಲ್ಲಿ ಮುಂಡಗೋಡದ ಟಿಬೆಟನ್ ನಿರಾಶ್ರಿತರ ಶಿಬಿರದ 73 ವರ್ಷದ ಹಿರಿಯ ವ್ಯಕ್ತಿಯೊಬ್ಬರಿದ್ದಾರೆ. ಈ ಮೊದಲು ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆಗೆಂದು ಅವರು ಹುಬ್ಬಳ್ಳಿಯ ‘ಕಿಮ್ಸ್’ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಅವರ ಗಂಟಲುದ್ರವದ ಮಾದರಿಯನ್ನು ಸಂಗ್ರಹಿಸಿ ಮುಂಡಗೋಡಕ್ಕೆ ಕಳುಹಿಸಲಾಗಿತ್ತು. ಅದರ ಫಲಿತಾಂಶ ಪಾಸಿಟಿವ್ ಎಂದು ಬಂದಿದೆ. ಬಳಿಕ ಕಾರವಾರದ ‘ಕ್ರಿಮ್ಸ್‌’ಗೆ ದಾಖಲಿಸಿಕೊಳ್ಳುವ ಮೊದಲೂ ಪರೀಕ್ಷಿಸಿದಾಗ ಕೋವಿಡ್ ದೃಢಪಟ್ಟಿದೆ. 

ಭಟ್ಕಳದ 13 ವರ್ಷದ ಬಾಲಕಿ, 10 ವರ್ಷದ ಬಾಲಕ ಮತ್ತು 34 ವರ್ಷದ ಮಹಿಳೆ ಆಂಧ್ರಪ್ರದೇಶದ ವಿಜಯವಾಡಾದಿಂದ ಮರಳಿ ಕ್ವಾರಂಟೈನ್‌ನಲ್ಲಿದ್ದರು. ಅಂತೆಯೇ ಬೆಂಗಳೂರಿನಿಂದ ಮರಳಿರುವ ಶಿರಸಿಯ 40 ವರ್ಷದ ವ್ಯಕ್ತಿಯೊಬ್ಬರಿಗೂ ಸೋಂಕು ಖಚಿತವಾಗಿದೆ. 

ಕಂಟೈನ್‌ಮೆಂಟ್ ವಲಯ: ಕಾರವಾರದ ಕೋಡಿಬೀರ ದೇವಾಲಯ ಸಮೀಪ ಮತ್ತು ಸಾಯಿಕಟ್ಟಾ ಪ್ರದೇಶದ ಇಬ್ಬರು ಯುವಕರಿಗೆ ಎರಡು ದಿನಗಳ ಹಿಂದೆ ಕೋವಿಡ್ 19 ದೃಢಪಟ್ಟಿತ್ತು. ಹಾಗಾಗಿ ಈ ಎರಡೂ ಪ್ರದೇಶಗಳಲ್ಲಿ ಕಂಟೈನ್‌ಮೆಂಟ್ ವಲಯ ಗುರುತಿಸಲಾಗಿದೆ. ಅಲ್ಲಿ ರಸ್ತೆಗಳಿಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಕೋಡಿಬೀರ ರಸ್ತೆಯಲ್ಲಿ ನಗರಸಭೆಯ ಸಿಬ್ಬಂದಿ ಗುರುವಾರ ಸ್ಯಾನಿಟೈಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಸ್ಥಳೀಯ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿ ವಾಗ್ವಾದ ನಡೆಸಿದರು. ಈ ಬಗ್ಗೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಯಿಂದ ಬಿಡುಗಡೆ: ಕೋವಿಡ್‌ನಿಂದ ಗುಣಮುಖರಾದ ಎಂಟು ಮಂದಿಯನ್ನು ‘ಕ್ರಿಮ್ಸ್‌’ನ ಕೋವಿಡ್ ವಾರ್ಡ್‌ನಿಂದ ಶುಕ್ರವಾರ ಬಿಡುಗಡೆ ಮಾಡಲಾಯಿತು.

ಅವರಲ್ಲಿ ಭಟ್ಕಳದ ಮೂರು ವರ್ಷದ ಬಾಲಕಿ, 75 ವರ್ಷದ ವ್ಯಕ್ತಿ, ಚಿಕ್ಕಮಗಳೂರಿನ 25 ವರ್ಷದ ಯುವಕ, ಹೊನ್ನಾವರದ 33 ವರ್ಷದ ಮಹಿಳೆ, ದಾಂಡೇಲಿಯ 50 ವರ್ಷ, ಜೊಯಿಡಾದ 53 ವರ್ಷ ಹಾಗೂ ಶಿರಸಿಯ 55 ವರ್ಷದ ಪುರುಷರು ಹಾಗೂ ಮುಂಡಗೋಡದ 27 ವರ್ಷದ ಯುವಕ ಒಳಗೊಂಡಿದ್ದಾರೆ.

ಜಿಲ್ಲೆಯಲ್ಲಿ ಪ್ರಸ್ತುತ 298 ಜನರಿಗೆ ಕೋವಿಡ್ ದೃಢಪಟ್ಟಿದ್ದು, 170 ಮಂದಿ ಗುಣಮುಖರಾಗಿದ್ದಾರೆ. 128 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್‌ ವಾರ್ಡ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು