ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

86 ಮಕ್ಕಳಿಗೆ ಏಕ ಪಾಲಕರ ಆಸರೆ

ಕೋವಿಡ್‌ 19ನಿಂದ ಹಲವು ಕುಟುಂಬಗಳಿಗೆ ಎದುರಾದ ಸಂಕಷ್ಟದ ಸರಮಾಲೆ
Last Updated 14 ಜನವರಿ 2022, 20:30 IST
ಅಕ್ಷರ ಗಾತ್ರ

ಕಾರವಾರ: ಕೋವಿಡ್ ಮೊದಲನೇ ಅಲೆ ಆರಂಭವಾದ ಬಳಿಕ ಜಿಲ್ಲೆಯಲ್ಲಿ ಹಲವಾರು ಕುಟುಂಬಗಳಿಗೆ ದುಃಖದ ಸರಮಾಲೆಯೇ ಎದುರಾಗಿದೆ. 86 ಮಕ್ಕಳಿಗೆ ಏಕ ಪಾಲಕರೇ ಆಧಾರವಾಗಿದ್ದು, ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ದುಃಖದಲ್ಲೇ ದಿನ ದೂಡುವಂತಾಗಿದೆ.

ಈ ಮಕ್ಕಳಲ್ಲಿ ಹಲವರನ್ನು ಅವರ ತಾಯಂದಿರೇ ಆರೈಕೆ ಮಾಡುತ್ತ ಬೆಳೆಸುತ್ತಿದ್ದಾರೆ. ಕುಟುಂಬ ನಿರ್ವಹಣೆಗೆ ಶ್ರಮಿಸುತ್ತಿದ್ದ ಗಂಡನನ್ನು ಕಳೆದುಕೊಂಡ ದುಃಖದೊಂದಿಗೆ, ಕರುಳಕುಡಿಯ ವಿದ್ಯಾಭ್ಯಾಸಕ್ಕೆ ಕೊರತೆಯಾಗದಂತೆ ನೋಡಿಕೊಳ್ಳುವ ಮತ್ತಷ್ಟು ಜವಾಬ್ದಾರಿ ಹೆಗಲೇರಿದೆ.

ದುಡಿಮೆಗೆಂದು ಗೋವಾಕ್ಕೆ ತೆರಳಿದ್ದ ಕಾರವಾರದ ಕುಟುಂಬವೊಂದು ಮನೆಯ ಯಜಮಾನನ್ನು ಕಳೆದುಕೊಂಡು ಒಂದೂವರೆ ವರ್ಷವಾಯಿತು. ಗಂಡನಿದ್ದಾಗ ನಿಶ್ಚಿಂತೆಯಿಂದ ಇದ್ದ ಅವರ ಪತ್ನಿ, ಈಗ ಜೀವನೋಪಾಯಕ್ಕಾಗಿ ಕೂಲಿ ಕೆಲಸ ಆರಂಭಿಸಿದ್ದಾರೆ. ದಂಪತಿಗೆ ಎಂಟು ವರ್ಷದ ಒಬ್ಬ ಮಗನಿದ್ದಾನೆ. ಅವನ ವಿದ್ಯಾಭ್ಯಾಸ ಮಾಡಿಸುತ್ತ, ಕುಟುಂಬವನ್ನೂ ನಿರ್ವಹಿಸಬೇಕಾದ ಅನಿವಾರ್ಯತೆ ಅವರದ್ದಾಗಿದೆ. ಈ ರೀತಿ ಹಲವು ಉದಾಹರಣೆಗಳು ಇತರ ತಾಲ್ಲೂಕುಗಳಲ್ಲೂ ಕಂಡುಬರುತ್ತವೆ.

ದೈನಂದಿನ ಜೀವನೋಪಾಯಕ್ಕೆ ಆದಾಯ ಸಿಗುತ್ತದೆ. ಆದರೆ, ಕುಟುಂಬದ ಅವಶ್ಯಕತೆಗಳಿಗೆ ಗಂಡನ ಉದ್ಯೋಗದ ವೇತನವನ್ನು ನೆಚ್ಚಿಕೊಂಡು ಮಾಡಿದ್ದ ಸಾಲವನ್ನು ತೀರಿಸುವುದು ಹೇಗೆ ಎಂಬ ಆತಂಕವೂ ಹಲವರದ್ದಾಗಿದೆ. ಹಲವರು ಫೈನಾನ್ಸ್‌ಗಳಲ್ಲಿ, ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದಾರೆ. ಆಸ್ತಿ, ಮನೆ ಅಡವಿಟ್ಟು ಬ್ಯಾಂಕ್‌ನಿಂದ ಹಣ ಪಡೆದಿದ್ದಾರೆ. ಕೆಲವರು ವಾಹನಗಳನ್ನು ಖರೀದಿಸಿದ್ದಾರೆ. ಆದರೆ, ಇವುಗಳ ಸಾಲದ ಕಂತನ್ನು ಭರಿಸುವ ಮನೆಯ ಏಕೈಕ ಸದಸ್ಯನನ್ನು ಕೋವಿಡ್ ಬಲಿ ಪಡೆದಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿರುವ ದುಃಖ ಮಕ್ಕಳನ್ನು ಸದಾ ಕಾಡುತ್ತಿದೆ.

‘ತಿಂಗಳಿಗೆ ₹2 ಸಾವಿರ’:

‘ಉತ್ತರ ಕನ್ನಡದಲ್ಲಿ ಕೋವಿಡ್‌ ಕಾರಣದಿಂದ ತಂದೆ ಹಾಗೂ ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿಲ್ಲ. ಕೋವಿಡ್ ಶುರುವಾದ ಬಳಿಕ ಇತರ ಆರೋಗ್ಯ ಸಮಸ್ಯೆಗಳಿಂದ, ಆರು ಪ್ರಕರಣಗಳಲ್ಲಿ ಇಬ್ಬರೂ ಪಾಲಕರು ಮೃತಪಟ್ಟಿದ್ದಾರೆ. ಅವರ ಮಕ್ಕಳಿಗೂ ಸಹಾಯಧನ ಸಿಗುವಂತೆ ಸರ್ಕಾರದ ಪೋರ್ಟಲ್‌ನಲ್ಲಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೋನಲ್ ಐಗಳ್ ತಿಳಿಸಿದ್ದಾರೆ.

‘ಕೋವಿಡ್‌ನಿಂದ ಜಿಲ್ಲೆಯಲ್ಲಿ ಪಾಲಕರನ್ನು ಕಳೆದುಕೊಂಡಿರುವ ಮಕ್ಕಳನ್ನು ಬಾಲ ಸ್ವರಾಜ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಲಾಗಿದೆ. ಅವರಿಗೆ 18 ವರ್ಷ ಆಗುವ ತನಕ ಸರ್ಕಾರವು ಪ್ರಾಯೋಜಕತ್ವ ವಹಿಸಿಕೊಳ್ಳಲಿದೆ. ಪ್ರತಿ ತಿಂಗಳು ₹2 ಸಾವಿರದಂತೆ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಿದೆ. ಮಕ್ಕಳಭವಿಷ್ಯಕ್ಕೆ ನೆರವಾಗಲು ಇಲಾಖೆಯಿಂದ ಜಾರಿಯಲ್ಲಿರುವ ಎಲ್ಲ ಸೌಲಭ್ಯಗಳನ್ನು ತಲುಪಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ಕೋವಿಡ್ ಕಾರಣದಿಂದ ಏಕ ಪಾಲಕರ ಆರೈಕೆಯಲ್ಲಿರುವ ಮಕ್ಕಳ ಮಾಹಿತಿಯನ್ನು ಸರ್ಕಾರಕ್ಕೆ ರವಾನಿಸಲಾಗಿದೆ. ಮಕ್ಕಳಿಗೆ ಸಂಬಂಧಿಸಿದಂತೆ ದಿನವೂ ವರದಿ ಪಡೆಯಲಾಗುತ್ತಿದೆ.

- ಸೋನಲ್ ಐಗಳ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT