ಮತದಾನ ಜಾಗೃತಿಗೆ ‘ಚುನಾವಣಾ ಸಾಕ್ಷರತಾ ಕ್ಲಬ್’

ಶುಕ್ರವಾರ, ಮಾರ್ಚ್ 22, 2019
28 °C
ಜಿಲ್ಲೆಯ 275 ಶಾಲೆಗಳು, 116 ಕಾಲೇಜುಗಳ 20 ಸಾವಿರ ವಿದ್ಯಾರ್ಥಿಗಳು ಸದಸ್ಯರು

ಮತದಾನ ಜಾಗೃತಿಗೆ ‘ಚುನಾವಣಾ ಸಾಕ್ಷರತಾ ಕ್ಲಬ್’

Published:
Updated:
Prajavani

ಕಾರವಾರ: ಚುನಾವಣೆಯಲ್ಲಿ ಮತದಾನದ ಹಕ್ಕಿನಿಂದ ಯಾರೂ ವಂಚಿತರಾಗಬಾರದು. ಜನಪ್ರತಿನಿಧಿಯ ಆಯ್ಕೆ ಪ್ರಕ್ರಿಯೆ ನೈತಿಕವಾಗಿರಬೇಕು ಎಂಬ ಅರಿವು ಮೂಡಿಸಲು ಚುನಾವಣಾ ಆಯೋಗ ಯೋಜನೆ ಹಮ್ಮಿಕೊಂಡಿದೆ. ಇದರ ಅಂಗವಾಗಿ ಜಿಲ್ಲೆಯ ಶಾಲಾ, ಕಾಲೇಜುಗಳಲ್ಲಿ ‘ಚುನಾವಣಾ ಸಾಕ್ಷರತಾ ಕ್ಲಬ್‌’ಗಳು ಮಂಗಳವಾರದಿಂದ ಕಾರ್ಯಾರಂಭ ಮಾಡಿವೆ.

ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ಪಿಯು ಕಾಲೇಜುಗಳು, ಐಟಿಐ, ಡಿಪ್ಲೊಮಾ ಮುಂತಾದ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಈ ಕ್ಲಬ್‌ಗಳು ಚಟುವಟಿಕೆಗಳನ್ನು ನಡೆಸಲಿವೆ. ಜಿಲ್ಲೆಯ ಸುಮಾರು 275 ಶಾಲೆಗಳು ಹಾಗೂ 116 ಕಾಲೇಜುಗಳ ಅಂದಾಜು 20 ಸಾವಿರ ವಿದ್ಯಾರ್ಥಿಗಳು ಇದರಿಂದ ಮಾಹಿತಿ ಪಡೆದುಕೊಳ್ಳಲಿದ್ದಾರೆ. 

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ‘ಸ್ವೀಪ್’ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೊಹಮ್ಮದ್ ರೋಶನ್, ‘ಮತದಾನದಿಂದ ದೂರ ಉಳಿಯುತ್ತಿರುವ ಯುವ ಮತದಾರರೇ ಚುನಾವಣಾ ಆಯೋಗದ ಮುಖ್ಯ ಗುರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮಹತ್ವ, ನೈತಿಕ ಮತದಾನ, ಹಣಕ್ಕಾಗಿ ಮತವನ್ನು ಮಾರಾಟ ಮಾಡಿಕೊಳ್ಳದಿರುವುದು, ವಿದ್ಯುನ್ಮಾನ ಮತಯಂತ್ರದ ಕಾರ್ಯ, ಅದರ ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತದೆ’ ಎಂದು ಹೇಳಿದರು.

‘ವಿದ್ಯಾರ್ಥಿಗಳು 18 ವರ್ಷಕ್ಕೆ ಕಾಲಿಟ್ಟ ಬಳಿಕ ತಾವು ಮತದಾನ ಯಾಕೆ ಮಾಡಬೇಕು ಎಂಬ ಅರಿವು ಅವರಿಗೆ ಇರಬೇಕು. ಮೊದಲ ಬಾರಿಗೆ ಮತದಾನ ಮಾಡುವ ಸಂಭ್ರಮವನ್ನು ಅವರು ಅನುಭವಿಸಬೇಕು. ಇದಕ್ಕಾಗಿ ಚುನಾವಣಾ ಆಯೋಗವು ಜಿಲ್ಲಾಡಳಿತದ ಮೂಲಕ ಎಲ್ಲ ಶಾಲಾ ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ 100 ಆನ್‌ಲೈನ್ ನೋಂದಣಿ ಆಗಿದೆ’ ಎಂದು ತಿಳಿಸಿದರು. 

ಕ್ಲಬ್ ಕಾರ್ಯ ಹೇಗಿರುತ್ತದೆ?: ಶಿಕ್ಷಣ ಸಂಸ್ಥೆಗಳಲ್ಲಿ ಇಡೀ ಶೈಕ್ಷಣಿಕ ವರ್ಷದಲ್ಲಿ ಎಂಟು ತಾಸಿನ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಬೋರ್ಡ್ ಗೇಮ್‌ಗಳು, ಕಾರ್ಡ್ ಗೇಮ್‌ಗಳ ಮೂಲಕ ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಮಕ್ಕಳಿಗೆ ತಿಳಿಸಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡುವುದರಿಂದ ಮೊದಲಾಗಿ ಇವಿಎಂನಲ್ಲಿ ಮತ ಚಲಾವಣೆಯವರೆಗೂ ತರಬೇತಿ ನೀಡಲಾಗುತ್ತದೆ. 

ಕಾಲೇಜುಗಳಲ್ಲಿ ಒಬ್ಬರು ಉಪನ್ಯಾಸಕ ಹಾಗೂ ಶಾಲೆಗಳಲ್ಲಿ ಇಬ್ಬರು ಶಿಕ್ಷಕರು ಇದರಲ್ಲಿ ತೊಡಗಿಕೊಳ್ಳಲಿದ್ದಾರೆ. ಸಮಾಜ ವಿಜ್ಞಾನದ ಬೋಧಕರನ್ನೇ ಇದಕ್ಕೆ ಆಯ್ಕೆ ಮಾಡಲಾಗಿದೆ. ಅವರು ಯಾವುದೇ ಕಾರಣಕ್ಕೂ ರಾಜಕೀಯ ನಿಲುವುಗಳನ್ನು ಅಲ್ಲಿ ವ್ಯಕ್ತಪಡಿಸುವಂತಿಲ್ಲ. ವಿದ್ಯಾರ್ಥಿಗಳಿಗೆ ತಟಸ್ಥ ಮನೋಭಾವದಿಂದ ಹೇಳಿಕೊಡಬೇಕು ಎಂದು ಆಯೋಗವು ಸೂಚನೆ ನೀಡಿದೆ.

ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿ: ವಿದ್ಯಾರ್ಥಿಗಳೇ ಮುನ್ನಡೆಸುವ ‘ಚುನಾವಣಾ ಸಾಕ್ಷರತಾ ಕ್ಲಬ್‌’ಗಳಿಗೆ ವಿದ್ಯಾರ್ಥಿಗಳೇ ಪದಾಧಿಕಾರಿಗಳಾಗಿರುತ್ತಾರೆ. ಅವರನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಮತದಾನದ ಮೂಲಕ ಆಯ್ಕೆ ಮಾಡಬೇಕು. ಗೆದ್ದು ಬಂದ ಇಬ್ಬರಲ್ಲಿ ಒಬ್ಬ ಅಧ್ಯಕ್ಷ ಹಾಗೂ ಒಬ್ಬ ಉಪಾಧ್ಯಕ್ಷರನ್ನು ನೇಮಕ ಮಾಡಬೇಕು.

ಆಯಾ ಶಾಲಾ ಕಾಲೇಜುಗಳಲ್ಲಿ ತರಬೇತಿ ಪಡೆದ ಶಿಕ್ಷಕರು ಅಥವಾ ಉಪನ್ಯಾಸಕರು ಕ್ಲಬ್‌ನ ನೋಡಲ್ ಅಧಿಕಾರಿಗಳಾಗಿ ಕೆಲಸ ನಿರ್ವಹಿಸಬೇಕು. ಕ್ಲಬ್‌ನ ಅಧ್ಯಕ್ಷ ಇವರೊಂದಿಗೆ ಸಮನ್ವಯ ಅಧಿಕಾರಿಯಾಗಿ ಕೆಲಸ ನಿರ್ವಹಿಸಿ ವಿವಿಧ ಚಟುವಟಿಕೆಗಳನ್ನು ನಿಭಾಯಿಸಬೇಕು ಎಂದು ಚುನಾವಣಾ ಆಯೋಗ ಸುತ್ತೋಲೆಯಲ್ಲಿ ವಿವರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !