ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈವೋಲ್ಟೇಜ್‌ನಿಂದ ಉಪಕರಣಗಳಿಗೆ ಹಾನಿ

33 ಕೆ.ವಿ ವಿದ್ಯುತ್ ತಂತಿಯಿಂದ ಸಮಸ್ಯೆ: ಸ್ಥಳೀಯರ ಆರೋಪ
Last Updated 13 ಫೆಬ್ರುವರಿ 2019, 12:51 IST
ಅಕ್ಷರ ಗಾತ್ರ

ಕಾರವಾರ:ಸಮೀಪದ ಶೇಜವಾಡದಲ್ಲಿ ಮಂಗಳವಾರ ಕೆಲವು ಮನೆಗಳಿಗೆ ಹೈವೋಲ್ಟೇಜ್ ವಿದ್ಯುತ್‍ಪ್ರವಹಿಸಿ ವಿವಿಧ ವಿದ್ಯುತ್ ಉಪಕರಣಗಳು ಸುಟ್ಟಿವೆ. 33 ಕೆ.ವಿ. ಉಪಕೇಂದ್ರಕ್ಕೆ ಅಳವಡಿಸಿರುವ ಗ್ರಿಡ್‌ನಿಂದ ಈ ರೀತಿಯ ತೊಂದರೆಯಾಗುತ್ತಿದೆ ಎಂದುಸ್ಥಳೀಯರು ದೂರಿದ್ದಾರೆ.

‘ಬುಧವಾರ ಬೆಳಿಗ್ಗೆ 8.30ರ ಸುಮಾರಿಗೆ ತಂತಿಯಿಂದ ದೊಡ್ಡ ಶಬ್ದದೊಂದಿಗೆ ಬೆಂಕಿಯುಂಡೆ ಕೆಳಗೆ ಬಿತ್ತು. ಆಗ ಕಬ್ಬಿಣದ ಗೇಟನ್ನು ಹಿಡಿದು ನಿಂತಿದ್ದ ನನಗೆ ವಿದ್ಯುತ್ ಆಘಾತ ಆದಂತಾಯಿತು. ತಕ್ಷಣ ಮನೆಯೊಳಗೆ ಬಂದು ನೋಡಿದಾಗ ಟಿ.ವಿ, ಸೆಟ್‌ಟಾಪ್ ಬಾಕ್ಸ್ ಮತ್ತು ಕೇಬಲ್ ಸುಟ್ಟುಹೋಗಿತ್ತು’ ಎಂದು ಗೃಹಿಣಿ ಕೃಪಾಲಿ ಹೇಳಿದರು.

‘ಪಕ್ಕದ ಮನೆಯಲ್ಲಿ ಸ್ನಾನ ಮಾಡುತ್ತಿದ್ದವರಿಗೆ ಕೂಡ ವಿದ್ಯುದಾಘಾತದ ಅನುಭವವಾಗಿದೆ. ಸಮೀಪದ ಒಂದೆರಡು ಮನೆಗಳಲ್ಲಿ ಮಿಕ್ಸರ್‌ಗಳೂ ಸುಟ್ಟಿವೆ. ಹೆಸ್ಕಾಂನವರು ಅರ್ಥಿಂಗ್ ಸರಿಯಾಗಿ ಮಾಡಿಲ್ಲ. ಇದರಿಂದಲೇ ಸಮಸ್ಯೆಯಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಡಿ.ಆರ್.ಶೇಜವಾಡ್ಕರ್ ಆರೋಪಿಸಿದರು.

‘ಒಂದೂವರೆ ವರ್ಷದ ಹಿಂದೆ ಇಲ್ಲಿ ಗ್ರಿಡ್ ಅಳವಡಿಸುವಾಗಲೇ ನಾವು ಆಕ್ಷೇಪ ವ್ಯಕ್ತಪಡಿಸಿದ್ದೆವು.ಅದಕ್ಕೆ ಹೆಸ್ಕಾಂ ಅಧಿಕಾರಿಗಳು ಏನೇ ಸಮಸ್ಯೆಯಾದರೂ ನಾವು ಬಗೆಹರಿಸುತ್ತೇವೆ ಎಂದಿದ್ದರು. ಅದಾದ ಬಳಿಕ ಮೂರು ಸಲ ತಂತಿ ತುಂಡಾಗಿ ಬಿದ್ದಿದೆ. ಅದೃಷ್ಟವಶಾತ್ ಅದರ ಕೆಳಗೆ ಯಾರೂ ಇರಲಿಲ್ಲ. ಒಂದುವೇಳೆ, ಏನಾದರೂ ಅಪಾಯವಾದರೆ ಯಾರು ಹೊಣೆಯಾಗುತ್ತಾರೆ? ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

33 ಕೆ.ವಿ. ತಂತಿಗಳನ್ನು ಅಳವಡಿಸಿರುವ ಕಂಬಗಳನ್ನು ಕೆಲವೆಡೆ ಮನೆಗಳ ಕಾಂಪೌಂಡ್‌ನಲ್ಲೇ ಅಳವಡಿಸಲಾಗಿದೆ. ಆದರೆ, ತಂತಿಗಳ ಕೆಳಗೆ ಕಬ್ಬಿಣದ ಬಲೆಗಳನ್ನು ಜೋಡಿಸಿಲ್ಲ. ಹೀಗಾಗಿ ತಂತಿ ತುಂಡಾದರೆ ಮನೆಗಳ ಎದುರೇ ಬೀಳುತ್ತವೆ ಎಂದು ಸಮಸ್ಯೆಯನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT