ಶುಕ್ರವಾರ, ಅಕ್ಟೋಬರ್ 18, 2019
28 °C
ಯಲ್ಲಾಪುರ ತಾಲ್ಲೂಕಿನ ಕಿರವತ್ತಿ, ಮದ್ನೂರು ಭಾಗದ ಹೊಲದಲ್ಲಿ ಹೆಚ್ಚಿದ ಹಾವಳಿ

ಫಸಲು ಬೆಳೆಯುವಷ್ಟರಲ್ಲಿ ಕಾಡಾನೆ ದಾಳಿ

Published:
Updated:
Prajavani

ಯಲ್ಲಾಪುರ: ತಾಲ್ಲೂಕಿನ ಕಿರವತ್ತಿ ಹಾಗೂ ಮದ್ನೂರು ಭಾಗದಲ್ಲಿ ಒಂದು ವಾರದಿಂದ ಕಾಡಾನೆಗಳ ಹಾವಳಿ ಮಿತಿಮೀರಿದೆ. ಭತ್ತದ ತೆನೆ, ಕಬ್ಬು, ಮೆಕ್ಕೆಜೋಳದ ಹೊಲಗಳ ಮೇಲೆ ಓಡಾಡಿ ಬೆಳೆ ನಾಶ ಮಾಡುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಕಾಡಾನೆಗಳು ಎರಡು ಗುಂಪುಗಳಲ್ಲಿ ಸಂಚರಿಸುತ್ತಿವೆ. ಮರಿಯಾನೆ ಇರುವ ಎಂಟು, ಹತ್ತು ಆನೆಗಳ ಒಂದು ಗುಂಪು ಮತ್ತು ಒಂಟಿ ಸಲಗ ಈ ಭಾಗದಲ್ಲಿ ಸಂಚರಿಸುತ್ತಿವೆ ಎನ್ನುತ್ತಾರೆ ರೈತರು.

‘ಸುಮಾರು 20 ವರ್ಷಗಳಿಂದ ಅಕ್ಟೋಬರ್ ತಿಂಗಳಲ್ಲಿ ಈ ಭಾಗದ ರೈತರ ನಿದ್ದೆ ಹಾರಿ ಹೋಗುತ್ತಿದೆ. ಕಾಡಾನೆಗಳಿಂದ ಹಗಲು ರಾತ್ರಿ ಬೆಳೆ ಕಾಯ್ದುಕೊಳ್ಳುವುದೇ ಹರಸಾಹಸದ ಕೆಲಸವಾಗಿದೆ. ಇಲ್ಲಿನ ಆನೆ ಕಾರಿಡಾರ್‌ನಲ್ಲಿ ಸಂಚರಿಸುತ್ತ ದಾರಿಯಲ್ಲಿ ಸಿಕ್ಕಿದ್ದನ್ನೆಲ್ಲ ತುಳಿದು ಹಾಕುತ್ತಿವೆ’ ಎಂದು ಬೇಸರಿಸುತ್ತಾರೆ ರೈತ ವಿಠ್ಠಲ ಪಾಂಡ್ರಮೀಸೆ.

ಈ ಭಾಗದಲ್ಲಿ ಕೆಲವೆಡೆ ಆನೆ ಕಂದಕ ತೆಗೆಯದ ಕಾರಣ ಈ ಭಾಗದ ರೈತರ ಹೊಲಗಳಿಗೆ ಆನೆಗಳು ನುಗ್ಗುತ್ತಿವೆ. ಈ ಭಾಗದಲ್ಲೂ ಅದರ ಕಾಮಗಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಿರವತ್ತಿ ಅಲ್ಕೇರಿಯ ಆದಂಸಾಬ್ ಅತ್ತಾರ್, ಮೋದಿನ್ ಸಾಬ್ ಅತ್ತಾರ್ ಹಾಗೂ ಮದ್ನೂರಿನ ಮಾದೇವಕೊಪ್ಪದ ಬಾಬು ದೋಂಡು ಪಾಂಡ್ರಮೀಸೆ, ಕಾಳು ದೋಂಡು ಪಾಟೀಲ್ ಸೇರಿದಂತೆ ಹತ್ತಾರು ರೈತರ ನೂರಾರು ಎಕರೆ ಬೆಳೆ ನಾಶವಾಗಿದೆ. ಅತಿಯಾದ ಮಳೆಯಿಂದ ಹತ್ತಿ, ಗೋವಿನ ಜೋಳದ ಬೆಳೆ ನೆಲಕಚ್ಚಿವೆ. ಭತ್ತದ ಬೆಳೆ ಉತ್ತಮ ಫಸಲು ಬಂದು ಕೈ ಹಿಡಿಯುತ್ತದೆ ಎನ್ನುವಷ್ಟರಲ್ಲೇ ಆನೆಗಳ ಉಪಟಳ ಕಾಣಿಸಿಕೊಂಡಿದೆ. ಇದು ರೈತರನ್ನು ಚಿಂತೆಗೆ ದೂಡಿದೆ.

‘ಪರಿಹಾರಕ್ಕೆ ಪ್ರಯತ್ನ’: ಈ ಭಾಗದ ಬಹುತೇಕ ರೈತರು ಒತ್ತುವರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ಹಾಗಾಗಿ ಅವರಿಗೆ ಕಾಡುಪ್ರಾಣಿ ದಾಳಿಯಿಂದ ಬೆಳೆನಾಶಕ್ಕೆ ಪರಿಹಾರ ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೂ ಮಾನವೀಯ ನೆಲೆಯಲ್ಲಿ ತಮ್ಮನ್ನು ನೋಡಬೇಕು ಎಂಬುದು ಬಡ ರೈತರ ಅಳಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಹಾಯಕ ಅರಣ್ಯ ರಕ್ಷಣಾಧಿಕಾರಿ ಅಶೋಕ ಭಟ್ಟ, ‘ಆನೆ ಓಡಿಸುವ ಪ್ರಯತ್ನದಲ್ಲಿ ನಮ್ಮ ಸಿಬ್ಬಂದಿ ತೊಡಗಿದ್ದಾರೆ. ಮಾನವೀಯ ನೆಲೆಯಲ್ಲಿ ಪರಿಹಾರ ಕೊಡಿಸಲು ಮೇಲಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಇದು ಆನೆ ಕಾರಿಡಾರ್ (ಗಜಪಥ) ಆಗಿರುವುದರಿಂದ ಪ್ರತಿವರ್ಷ ಈ ಸಮಸ್ಯೆಯಿದೆ. ರೈತರ ಹೊಲಗಳಿಗೆ ನುಗ್ಗದಂತೆ ನಮ್ಮ ಇಲಾಖೆಯ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ’ ಎಂದರು.

Post Comments (+)