ಶನಿವಾರ, ಜುಲೈ 24, 2021
23 °C
ನಾಲ್ವರ ಸೋಂಕಿನ ಮೂಲದ ಹುಡುಕಾಟ: ಗುಣಮುಖರಾದ ಆರು ಮಂದಿ ಬಿಡುಗಡೆ

11 ಮಂದಿಗೆ ಕೋವಿಡ್ 19 ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯಲ್ಲಿ ಭಾನುವಾರ 11 ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಅವರಲ್ಲಿ ಕಾರವಾರದ ಐವರು, ಸಿದ್ದಾಪುರ, ಭಟ್ಕಳದ ತಲಾ ಇಬ್ಬರು, ಹಳಿಯಾಳ ಮತ್ತು ದಾಂಡೇಲಿಯ ತಲಾ ಒಬ್ಬರು ಸೇರಿದ್ದಾರೆ.

ಇದೇರೀತಿ ಜಿಲ್ಲೆಯ ಇಬ್ಬರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮಾಹಿತಿಯನ್ನು ದಕ್ಷಿಣ ಕನ್ನಡದ ಪಟ್ಟಿಯಲ್ಲಿ ಸೇರಿಸಲಾಗಿದೆ. ಹೊಸದಾಗಿ ಸೋಂಕಿತರಾದವರ ಪೈಕಿ ನಾಲ್ವರ ಸೋಂಕಿನ ಮೂಲವನ್ನು ಹುಡುಕಲಾಗುತ್ತಿದೆ. ಅವರಲ್ಲಿ ಹಳಿಯಾಳದ 53 ವರ್ಷದ ವ್ಯಕ್ತಿ, ಭಟ್ಕಳದ 17 ವರ್ಷದ ಬಾಲಕ ಹಾಗೂ ಕಾರವಾರದ ಇಬ್ಬರು ಒಳಗೊಂಡಿದ್ದಾರೆ.

ಸಿದ್ದಾಪುರದ ತಾಲ್ಲೂಕು ಆಸ್ಪತ್ರೆಯ 44 ವರ್ಷದ ಪುರುಷ ಸಿಬ್ಬಂದಿ ಕಾರವಾರದ ‘ಕ್ರಿಮ್ಸ್‌’ನ 25 ವರ್ಷದ ಮಹಿಳಾ ಸಿಬ್ಬಂದಿಗೂ ಕೋವಿಡ್ ದೃಢಪಟ್ಟಿದೆ. ಉಳಿದಂತೆ, ಕಾರವಾರದ 22 ವರ್ಷದ ಯುವಕ, ಸಿದ್ದಾಪುರದ 73 ವರ್ಷದ ಮಹಿಳೆ, ದಾಂಡೇಲಿಯ 80 ವರ್ಷದ ವ್ಯಕ್ತಿ ಮೂವರು ಪ್ರತ್ಯೇಕವಾಗಿ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಕಾರವಾರದ 16 ವರ್ಷದ ಬಾಲಕ, ಭಟ್ಕಳದ 25 ವರ್ಷದ ಯುವಕ ಬೆಂಗಳೂರಿನಿಂದ ಮರಳಿದವರಾಗಿದ್ದಾರೆ. 

ಆರು ಮಂದಿ ಗುಣಮುಖ: ಕೋವಿಡ್ 19ನಿಂದ ಗುಣಮುಖರಾದ ಆರು ಮಂದಿಯನ್ನು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್ ವಾರ್ಡ್‌ನಿಂದ ಭಾನುವಾರ ಬಿಡುಗಡೆ ಮಾಡಲಾಯಿತು. ಹಳಿಯಾಳದವರಾದ 12 ವರ್ಷದ ಬಾಲಕಿ, 78 ವರ್ಷದ ಹಿರಿಯ ವ್ಯಕ್ತಿ ಹಾಗೂ 72 ವರ್ಷದ ಹಿರಿಯ ಮಹಿಳೆ, ಅಂಕೋಲಾದ 27 ವರ್ಷದ ಯುವಕ, ಶಿರಸಿಯ 28 ಹಾಗೂ 35 ವರ್ಷದ ಯುವಕರು ಗುಣಮುಖರಾಗಿದ್ದಾರೆ.

ಅವರಿಗೆ ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತರಕರ್, ಡಾ.ಮಂಜುನಾಥ ಭಟ್, ಡಾ.ಸಂದೇಶ್, ಡಾ.ಶರತ್, ಡಾ.ಹಿತೇಶ್ ಹಾಗೂ ಸಿಬ್ಬಂದಿ ಶುಭ ಹಾರೈಸಿ ಬೀಳ್ಕೊಟ್ಟರು.

ಲಾಕ್‌ಡೌನ್‌ಗೆ ಬೆಂಬಲ: ಭಾನುವಾರದ ಲಾಕ್‌ಡೌನ್‌ಗೆ ಕಾರವಾರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸದಾ ವಾಹನಗಳ ಸಂಚಾರವಿರುವ ರಾಷ್ಟ್ರೀಯ ಹೆದ್ದಾರಿ 66 ಖಾಲಿಯಾಗಿತ್ತು. ನಗರದ ಅಂಗಡಿ, ಮುಂಗಟ್ಟುಗಳು ಬಾಗಿಲು ಹಾಕಿದ್ದವು. ಆಟೊರಿಕ್ಷಾ, ಟೆಂಪೊ, ಬಸ್‌ಗಳ ಸಂಚಾರ ಇರಲಿಲ್ಲ. ಮಧ್ಯಾಹ್ನದ ವೇಳೆಗೆ ಜಿಟಿಜಿಟಿ ಮಳೆಯೂ ಬಂದ ಕಾರಣ ನಗರದಲ್ಲಿ ಜನಸಂಚಾರ ವಿರಳವಾಗಿತ್ತು.

ಜಿಲ್ಲೆಯಲ್ಲಿ ಕೊರೊನಾ: ಅಂಕಿ ಅಂಶ

ಒಟ್ಟು ಸೋಂಕಿತರು: 596 
ಸಕ್ರಿಯ ಪ್ರಕರಣಗಳು: 364
ಗುಣಮುಖರಾದವರು: 227
ಮೃತಪಟ್ಟವರು: 4

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು