ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಮೇವಿನ ಕೊರತೆಯ ಚಿಂತೆ ಸದ್ಯಕ್ಕಿಲ್ಲ

ಈಗಾಗಲೇ ಸರಾಸರಿ 17 ದಿನಗಳಿಗೆ ಬೇಕಾಗುವಷ್ಟು ಸಂಗ್ರಹ: ಮುಂದುವರಿದ ಭತ್ತದ ಕಟಾವು
Last Updated 6 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಈವರ್ಷ ಉಂಟಾದ ಪ್ರವಾಹದಿಂದ ಭತ್ತದ ಬೆಳೆ ನಾಶವಾದರೂ ಜಾನುವಾರಿಗೆ ಅಗತ್ಯ ಮೇವಿನ ಸಂಗ್ರಹವಿದೆ. ಎಲ್ಲ ತಾಲ್ಲೂಕುಗಳಲ್ಲಿ ಸರಾಸರಿ 17 ವಾರಗಳಿಗೆ ಬೇಕಾಗುವಷ್ಟು ಮೇವು ಲಭ್ಯವಿದೆ.

ಪ್ರವಾಹದಿಂದಾಗಿ ಮುಂಗಾರು ಹಂಗಾಮಿನ ಭತ್ತ ಹಾಗೂ ಮೆಕ್ಕೆಜೋಳದ ಬೆಳೆ ಬಹುತೇಕ ನಾಶವಾಗಿತ್ತು. ಭತ್ತದ ಒಣಹುಲ್ಲನ್ನು (ಬಿಳಿಹುಲ್ಲು) ಜಾನುವಾರಿಗೆ ಆಹಾರವನ್ನಾಗಿ ನೀಡಲಾಗುತ್ತದೆ. ನೆರೆಯ ನೀರಿನಲ್ಲಿ ಭತ್ತದ ಸಸಿಗಳು ಕೊಳೆತ ಕಾರಣಈ ಬಾರಿ ಬೇಸಿಗೆಯಲ್ಲಿ ಮೇವಿನ ಕೊರತೆ ಕಾಣಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಹೈನುಗಾರರು ಚಿಂತೆ ವ್ಯಕ್ತಪಡಿಸಿದ್ದರು. ಆದರೆ, ಸದ್ಯಕ್ಕೆ ಅಂತಹ ಪರಿಸ್ಥಿತಿಯಿಲ್ಲ ಎಂದು ಪಶುಪಾಲನೆ ಮತ್ತು ಪಶುವೈದ್ಯ ಸೇವೆ ಇಲಾಖೆಯ ಉಪ ನಿರ್ದೇಶಕ ಡಾ.ಸುಬ್ರಾಯ ಭಟ್ ಸ್ಪಷ್ಟಪಡಿಸಿದ್ದಾರೆ.

‘ಪ್ರವಾಹದಿಂದಾಗಿ ಮೇವಿಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದ್ದು ನಿಜ. ಆದರೆ, ಬಳಿಕವೂ ರೈತರು ಬಿತ್ತನೆ ಮಾಡಿ ಬೇಸಾಯ ಮಾಡಿದ್ದಾರೆ. ಹಲವು ಕಡೆಗಳಲ್ಲಿ ಈಗ ಭತ್ತದ ಫಸಲಿನ ಕಟಾವು ಮಾಡಲಾಗುತ್ತಿದೆ. ಸಾಮಾನ್ಯವಾಗಿ ಕರಾವಳಿ ಭಾಗದ ಹೈನುಗಾರರು ಬೇರೆ ಜಿಲ್ಲೆಗಳಿಂದ ಹಾಗೂ ಮಲೆನಾಡು ಭಾಗದ ತಾಲ್ಲೂಕುಗಳಿಂದ ಮೇವನ್ನು ತರಿಸುತ್ತಾರೆ.ಈ ಬಾರಿ ಅತಿವೃಷ್ಟಿಯ ಕಾರಣದಿಂದಾಗಿಯೇ ಜಿಲ್ಲೆಯಲ್ಲಿಮೇವಿನ ಕೊರತೆ ಆಗದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ಯಲ್ಲಾಪುರ, ಸಿದ್ದಾಪುರ ಹಾಗೂ ಶಿರಸಿ ತಾಲ್ಲೂಕುಗಳಲ್ಲಿ ಹೈನುಗಾರಿಕೆಯ ಪ್ರಮಾಣ ಹೆಚ್ಚಿದೆ. ಇಲ್ಲಿನ ಅಡಿಕೆ ತೋಟಗಳಲ್ಲಿ ಬೇಸಿಗೆಯಲ್ಲೂ ಹಸಿರು ಹುಲ್ಲು ಬೆಳೆಯುತ್ತದೆ. ಜೊತೆಗೇ ಹಲವು ರೈತರು ಹೈಬ್ರಿಡ್ ನೇಪಿಯರ್ ಹುಲ್ಲನ್ನು ಬೆಳೆಸಿ ಜಾನುವಾರಿ ಮೇವನ್ನಾಗಿ ನೀಡುತ್ತಾರೆ. ಅಲ್ಲದೇ ಅಡಿಕೆ ಮರದ ಹಾಳೆ, ಬಾಳೆದಿಂಡನ್ನೂ ಆಕಳಿಗೆ ಕೊಡಲಾಗುತ್ತದೆ. ಹಾಗಾಗಿಬಯಲುಸೀಮೆಯಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡದಲ್ಲಿ ಮೇವಿನ ಸಮಸ್ಯೆ ಅಷ್ಟಾಗಿ ಕಂಡುಬರುವುದಿಲ್ಲ.

ದರ ಏರಿಕೆ ಸಾಧ್ಯತೆ:‘ಕಳೆದ ವರ್ಷ ಬಿಳಿ ಹುಲ್ಲಿನ ಒಂದು ಹೊರೆಗೆ ₹25ರಿಂದ ₹30ರಂತೆವ್ಯಾಪಾರಸ್ಥರು ಖರೀದಿಸಿದ್ದಾರೆ. ಹಾವೇರಿ, ಗದಗ, ಬೆಳಗಾವಿ, ಧಾರವಾಡದ ಭಾಗಕ್ಕೂ ತೆಗೆದುಕೊಂಡು ಹೋಗಿದ್ದರು. ಈ ಭತ್ತದ ಬಾರಿ ಕಟಾವು ತಡವಾಗಿದ್ದು, ಹುಲ್ಲಿನ ಹೊರೆ ಈಗ ₹15ರಿಂದ ₹20ರಂತೆ ಮಾರಾಟವಾಗುತ್ತಿದೆ. ಜನವರಿಯಿಂದ ಬೇಡಿಕೆ ಹೆಚ್ಚಾಗಿ ದರ ಏರಿಕೆಯಾಗಬಹುದು’ ಎಂದು ಮುಂಡಗೋಡದ ರೈತ ಬಾಬು ವಾಲ್ಮೀಕಿ ತಿಳಿಸಿದರು.

‘ಮಳೆಗಾಲ ಭತ್ತದ ಸಸಿಗಳೆಲ್ಲ ಕೊಳೆತು ನಷ್ಟವಾಯಿತು. ನಂತರ ಪುನಃ ಒಂದಷ್ಟು ಸಾವಿರ ರೂಪಾಯಿ ಖರ್ಚಿನಲ್ಲಿ ರೈತರುಬಿತ್ತನೆ ಮಾಡಿದ್ದಾರೆ. ಬಿಳಿಹುಲ್ಲಿಗೆ ದರ ಹೆಚ್ಚಾದರೆ ಹೈನುಗಾರರಿಗೆ ಹೊರೆಯಾಗುತ್ತದೆ. ಆದರೆ, ರೈತರಿಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

ಮೇವು ಸಂಗ್ರಹ: ಅಂಕಿ ಅಂಶ

ತಾಲ್ಲೂಕು; ಜಾನುವಾರು ಸಂಖ್ಯೆ; ಸಂಗ್ರಹವಿರುವ ಮೇವು (ಟನ್‌)

ಅಂಕೋಲಾ; 31,323; 20,532

ಭಟ್ಕಳ; 24,723; 14,863

ಹಳಿಯಾಳ; 48,823; 28,732

ಹೊನ್ನಾವರ; 46,100; 26,875

ಕಾರವಾರ; 19,128; 12,499

ಕುಮಟಾ; 38,100; 23,128

ಮುಂಡಗೋಡ; 36,955; 22,423

ಸಿದ್ದಾಪುರ; 56,217; 35,345

ಶಿರಸಿ; 63,138; 34,828

ಜೊಯಿಡಾ; 23,959; 15,635

ಯಲ್ಲಾಪುರ; 38,763; 23,733

ಒಟ್ಟು; 4,27,229; 2,58,593

* ನ.29ರ ಮಾಹಿತಿಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT