ಭಾನುವಾರ, ಏಪ್ರಿಲ್ 18, 2021
24 °C
ಜಾಗ ಮಂಜೂರು ಅರ್ಜಿಗೆ ಮತ್ತೆ ಸ್ಪಷ್ಟನೆ ಕೇಳಿರುವ ಕೇಂದ್ರ ಅರಣ್ಯ ಪರಿಸರ ಮಂತ್ರಾಲಯ

ಬನವಾಸಿ ಗ್ರಿಡ್ ನಿರ್ಮಾಣ ಮತ್ತೆ ವಿಳಂಬ

ಸಂಧ್ಯಾ ಹೆಗಡೆ ಆಲ್ಮನೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನ ಬನವಾಸಿ ಹಾಗೂ ಸುತ್ತಮುತ್ತಲಿನ ಹಳ್ಳಿಗರು ನಿರಂತರವಾಗಿ ಎದುರಿಸುತ್ತಿರುವ ವಿದ್ಯುತ್ ವೋಲ್ಟೇಜ್ ಸಮಸ್ಯೆ ನಿವಾರಿಸಲು ರೂಪಿಸಿರುವ ಹೊಸ ಉಪ ಕೇಂದ್ರ ಸ್ಥಾಪನೆ ಯೋಜನೆಯ ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಉಪ ಕೇಂದ್ರ ನಿರ್ಮಾಣಕ್ಕೆ ನಿವೇಶನ ಮಂಜೂರು ನೀಡುವಂತೆ ಕೋರಿ, ಕೆಪಿಟಿಸಿಎಲ್ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಅರಣ್ಯ ಪರಿಸರ ಮಂತ್ರಾಲಯ ಮತ್ತೊಮ್ಮೆ ತಿರಸ್ಕರಿಸಿದ್ದು, ಮತ್ತಷ್ಟು ಮಾಹಿತಿ ನೀಡುವಂತೆ ಸೂಚಿಸಿದೆ.

ಬನವಾಸಿ ಹೋಬಳಿಯ ಜನಸಂಖ್ಯೆ ಸುಮಾರು 50ಸಾವಿರ. ಹೋಬಳಿಯ ಅರ್ಧದಷ್ಟು ಭಾಗಕ್ಕೆ ಶಿರಸಿ ಹಾಗೂ ಎಸಳೆ ಗ್ರಿಡ್‌ನಿಂದ ವಿದ್ಯುತ್‌ ಪೂರೈಕೆಯಾಗುತ್ತದೆ. 33 ಕಿ.ಮೀ ದೂರದಿಂದ ವಿದ್ಯುತ್‌ ಹೋಗುವುದರಿಂದ ಅಲ್ಲಿನ ಜನರಿಗೆ ಪ್ರತಿದಿನವೂ ಲೋ ವೋಲ್ಟೇಜ್ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ, ಹೊಸ ಗ್ರಿಡ್ ನಿರ್ಮಿಸಬೇಕೆಂಬುದು ಅಲ್ಲಿನ ಜನರ ದಶಕದ ಹಿಂದಿನ ಬೇಡಿಕೆ.

ಬನವಾಸಿಯಲ್ಲಿ ಹೊಸ ಉಪಕೇಂದ್ರ ನಿರ್ಮಿಸಿರುವ ಸಂಬಂಧ ಸರ್ಕಾರದಿಂದ ಅನುಮತಿ ದೊರೆತು, 2012ರಲ್ಲಿ ರಾಜ್ಯ ಅರಣ್ಯ ಇಲಾಖೆ ಕಡಕೋಡದಲ್ಲಿ ಒಂದು ಹೆಕ್ಟೇರ್ ಅರಣ್ಯ ಭೂಮಿ ಮಂಜೂರು ಮಾಡಿತ್ತು. ಆ ಸಂದರ್ಭದಲ್ಲಿ ಚಂದ್ರಗುತ್ತಿಯಿಂದ ಯೋಜಿತ ಉಪಕೇಂದ್ರಕ್ಕೆ ಲೈನ್ ಎಳೆಯುವ ಯೋಜನೆ ರೂಪಿಸಲಾಗಿತ್ತು. ಆದರೆ, ಕಾಮಗಾರಿ ಆರಂಭಿಸುವಲ್ಲಿ ವಿಳಂಬವಾಯಿತು. ಇದೇ ಸಂದರ್ಭದಲ್ಲಿ ಉಪ ಕೇಂದ್ರ ನಿರ್ಮಾಣಕ್ಕೆ ಒಂದು ಹೆಕ್ಟೇರ್ ಹಾಗೂ ಲೈನ್‌ ಎಳೆಯಲು ಹೆಚ್ಚುವರಿ ಜಾಗ ಬೇಕಾಗಿರುವ ಕಾರಣ, ಕೇಂದ್ರ ಅರಣ್ಯ ಪರಿಸರ ಮಂತ್ರಾಲಯವು, ರಾಜ್ಯ ಅರಣ್ಯ ಇಲಾಖೆಗೆ ಜಾಗ ಮಂಜೂರು ಅಧಿಕಾರ ಇಲ್ಲವೆಂದು ಹೇಳಿ, ವಾಪಸ್ ಪಡೆಯುವಂತೆ ಆದೇಶಿಸಿತು. 2018 ಜನವರಿಯಲ್ಲಿ ಅರಣ್ಯ ಇಲಾಖೆ ಜಾಗ ವಾಪಸ್‌ ಪಡೆದ ಮೇಲೆ, ₹ 10.29 ಕೋಟಿ ವೆಚ್ಚದ ಉಪ ಕೇಂದ್ರ ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿದೆ.

‘ಚಂದ್ರಗುತ್ತಿ ಮಾರ್ಗದ ಬದಲಾಗಿ, ಜಡೆ ಕೇಂದ್ರದಿಂದ ವಿದ್ಯುತ್ ಲೈನ್ ಎಳೆಯುವ ಹೊಸ ಪ್ರಸ್ತಾವ ಸಿದ್ಧಪಡಿಸಿ, ಜಾಗ ಮಂಜೂರುಗೊಳಿಸುವಂತೆ ಕೇಂದ್ರ ಅರಣ್ಯ ಕೇಂದ್ರ ಅರಣ್ಯ ಪರಿಸರ ಮಂತ್ರಾಲಯಕ್ಕೆ ಆನ್‌ಲೈನ್ ಅರ್ಜಿ ಸಲ್ಲಿಸಲಾಗಿದೆ. 9.5 ಕಿ.ಮೀ ದೂರದ ಈ ಮಾರ್ಗವು ಕೃಷಿಭೂಮಿ ಮೂಲಕ ಬರುವುದರಿಂದ ಕಾಡಿನ ಮರಗಳು ನಾಶವಾಗುವುದಿಲ್ಲ. ಸ್ಥಳನಕ್ಷೆ, ಜಾಗದ ಸ್ಪಷ್ಟನೆಗೆ ಸಂಬಂಧಿಸಿ ಪರಿಸರ ಮಂತ್ರಾಲಯವು ಜೂನ್ 17ರಂದು ಮಾಹಿತಿ ಕೇಳಿದ್ದು, ರಾಜ್ಯ ಸರ್ಕಾರದ ಮೂಲಕ ಸಲ್ಲಿಸಲಾಗಿದೆ’ ಎನ್ನುತ್ತಾರೆ ಹೆಸ್ಕಾಂ ಶಿರಸಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ದೀಪಕ ಕಾಮತ್.

‘ಬನವಾಸಿಯಲ್ಲಿ 110/11 ಕೆ.ವಿ ಉಪಕೇಂದ್ರ ನಿರ್ಮಾಣವಾದರೆ, ಬನವಾಸಿ ಸುತ್ತಲಿನ ಜನರ ವಿದ್ಯುತ್ ಸಮಸ್ಯೆ ಮುಕ್ತಾಯವಾಗುತ್ತದೆ. ಹೀಗಾಗಿ ನಾವು ಕೂಡ ಅನುಮತಿ ಬರುವುದನ್ನೇ ಕಾಯುತ್ತಿದ್ದೇವೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು