ಇವಿಎಂ ಕಾರ್ಯದ ಬಗ್ಗೆ ಅನುಮಾನ ಬೇಡ

ಭಾನುವಾರ, ಮಾರ್ಚ್ 24, 2019
31 °C
ಯಂತ್ರದ ತಂತ್ರಜ್ಞಾನವನ್ನು ಭೇದಿಸಲು ಸಾಧ್ಯವೇ ಇಲ್ಲ: ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್

ಇವಿಎಂ ಕಾರ್ಯದ ಬಗ್ಗೆ ಅನುಮಾನ ಬೇಡ

Published:
Updated:
Prajavani

ಕಾರವಾರ: ‘ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕಾರ್ಯದಕ್ಷತೆ ಬಗ್ಗೆ ಅನುಮಾನ ಪಡಬೇಕಿಲ್ಲ. ಒಮ್ಮೆ ಮಾತ್ರ ಪ್ರೋಗ್ರಾಂ ಮಾಡಲು ಸಾಧ್ಯವಿರುವ ಈ ತಂತ್ರಜ್ಞಾನವನ್ನು ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ. ಈ ಬಗ್ಗೆ ಚುನಾವಣಾ ಆಯೋಗವೂ ಹ್ಯಾಕರ್‌ಗಳಿಗೆ ಸವಾಲು ಎಸೆದಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ವಿದ್ಯುನ್ಮಾನ ಮತಯಂತ್ರಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಬೆಂಗಳೂರಿನಲ್ಲಿ ಈ ಬಾರಿ ಚುನಾವಣೆಗೆ ‘ಎಂ 3’ ಮತಯಂತ್ರಗಳನ್ನು ಪರಿಚಯಿಸಲಾಗಿದೆ. ಹೊರಗಿನ ಯಾವುದೇ ಕೇಂದ್ರಗಳಿಗೂ ಸಂಪರ್ಕವಿಲ್ಲದ ಇವುಗಳನ್ನು ಎಲ್ಲಿ ತಯಾರಿಸಲಾಗುತ್ತದೆ, ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತದೆ ಎಂಬ ಮಾಹಿತಿ ಯಾರಿಗೂ ತಿಳಿದಿರುವುದಿಲ್ಲ. ಇಷ್ಟೊಂದು ಆಡಳಿತಾತ್ಮಕ ಕಟ್ಟೆಚ್ಚರ ಬೇರೆ ಯಾವುದೇ ದೇಶದಲ್ಲೂ ಇಲ್ಲ. ಮತಯಂತ್ರಗಳಿಗೆ ಜಿಪಿಎಸ್ ಅಳವಡಿಸಲಾಗಿರುತ್ತದೆ. ಅವುಗಳನ್ನು ಸಿಸಿಟಿವಿ ಕ್ಯಾಮೆರಾಗಳ ಕಾವಲಿನಲ್ಲಿ ಇಡಲಾಗಿರುತ್ತದೆ. ಯಾರೂ ಇಲ್ಲದ ಸಂದರ್ಭದಲ್ಲಿ ಅವುಗಳನ್ನು ಮುಟ್ಟಲೂ ಸಾಧ್ಯವಿಲ್ಲ. ಒಂದು ಸ್ಕ್ರೂ ತೆಗೆದರೂ ಇಡೀ ಯಂತ್ರ ನಿಷ್ಕ್ರಿಯವಾಗುತ್ತದೆ’ ಎಂದರು. 

‘ಮತದಾರರು ತಮ್ಮ ಆಯ್ಕೆಯ ಚಿಹ್ನೆಗೆ ಮತ ಚಲಾಯಿಸಿದಾಗ ಒಂದು ಚೀಟಿ ವಿ.ವಿ.ಪ್ಯಾಟ್ (VV PAT) ಯಂತ್ರಕ್ಕೆ ಸೇರುತ್ತದೆ. ಮತದಾರನ ಆಯ್ಕೆಯ ಚಿಹ್ನೆಯ ಬದಲು ಬೇರೆ ಬಂದರೆ ನಿಯಮದ ಪ್ರಕಾರ ಪುನಃ ಮತ ಚಲಾವಣೆಗೆ ಅವಕಾಶವಿದೆ. ಆದರೆ, ಒಂದುವೇಳೆ ಸುಳ್ಳು ಹೇಳಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಮತದಾರರು ಯಂತ್ರದಲ್ಲಿ ಸ್ವಿಚ್ ಒತ್ತಿದ ಏಳು ಸೆಕೆಂಡ್‌ಗಳ ಒಳಗೆ ವಿ.ವಿ.ಪ್ಯಾಟ್‌ನಲ್ಲಿ ದೃಢೀಕರಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಮಾತನಾಡಿ, ‘ಜಿಲ್ಲೆಯಲ್ಲಿ 14,210 ಅಂಗವಿಕಲ ಮತದಾರರನ್ನು ಗುರುತಿಸಲಾಗಿದೆ. ಅವರಿಗೆ ಮನೆಗಳಿಂದ ಮತಗಟ್ಟೆಗಳಿಗೆ ಸಾರಿಗೆಯೂ ಸೇರಿದಂತೆ ಇತರ ಅಗತ್ಯ ಸಹಕಾರ ವ್ಯವಸ್ಥೆ ಮಾಡುವ ಬಗ್ಗೆಯೂ ಚುನಾವಣಾ ಆಯೋಗಕ್ಕೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದರು.

ಮಾದರಿ ನೀತಿ ಸಂಹಿತೆ ಜಾರಿಯಾದ 24 ಗಂಟೆಗಳಲ್ಲಿ ಸರ್ಕಾರಿ ಕಟ್ಟಡಗಳು, ಸಾರ್ವಜನಿಕ ಸ್ಥಳಗಳಲ್ಲಿರುವ ಜನಪ್ರತಿನಿಧಿಗಳ ಪೋಸ್ಟರ್, ಬಂಟಿಂಗ್ಸ್ ತೆರವು ಮಾಡಬೇಕು. 72 ಗಂಟೆಗಳಲ್ಲಿ ಖಾಸಗಿ ಕಟ್ಟಡಗಳಿಂದ ತೆಗಯಬೇಕು ಎಂದು ತಿಳಿಸಿದರು.

ಪ್ರಾಯೋಗಿಕ ಮತದಾನ: ‘ಸ್ವೀಪ್’ ಕಾರ್ಯಕ್ರಮದಡಿ ಜಿಲ್ಲೆಯ ಮತದಾರರಿಗೆ ಮತಯಂತ್ರದ ಬಗ್ಗೆ ಮಾಹಿತಿ ಹಾಗೂ ಮತ ಚಲಾವಣೆ ಕುರಿತು ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 72 ಯಂತ್ರಗಳಲ್ಲಿ ಈಗಾಗಲೇ 2.70 ಲಕ್ಷ ಜನರು ಪ್ರಾಯೋಗಿಕವಾಗಿ ಮತದಾನ ಮಾಡಿದ್ದಾರೆ ಎಂದು ಮೊಹಮ್ಮದ್ ರೋಶನ್ ತಿಳಿಸಿದರು. 

ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಮದ್ಯ, ಹಣದ ಹರಿವಿನ ತಡೆಗೆ ತಡೆಗೆ ಅಬಕಾರಿ ಇಲಾಖೆಯಿಂದ ದಾಳಿ ಮಾಡಲಾಗುತ್ತಿದೆ. ಇದು ಮುಂದುವರಿಯಲಿದೆ. ಪ್ರಜೆಗಳು ಪ್ರಭುಗಳು ಆಗುವುದು ಮತದಾನ ಮಾಡಿದಾಗ. ಹಾಗಾಗಿ ಮತದಾನದ ಬಹಿಷ್ಕಾರದ ಮಾತುಗಳು ಸರಿಯಲ್ಲ ಎಂದು ಡಾ.ಕೆ.ಹರೀಶ್ ಕುಮಾರ್ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !