ಗುರುವಾರ , ಆಗಸ್ಟ್ 11, 2022
27 °C
ಕಾರವಾರ ನಗರಸಭೆ ಕಚೇರಿಯಲ್ಲಿ ಮಾಜಿ ಶಾಸಕ ಸತೀಶ ಸೈಲ್ ಧರಣಿ

ಪೂರ್ಣಗೊಂಡ ಕೆಲಸಕ್ಕೆ ಟೆಂಡರ್ ಆರೋಪ: ಮಾಜಿ ಶಾಸಕ ಸತೀಶ ಸೈಲ್ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಇಲ್ಲಿನ ನಗರ ಸಭೆಯಲ್ಲಿ ಈಗಾಗಲೇ ಕೈಗೊಳ್ಳಲಾಗಿರುವ 179 ಕಾಮಗಾರಿಗಳಿಗೆ ಏ.5ರಂದು ಟೆಂಡರ್ ಕರೆಯಲಾಗಿದೆ. ಕೋಟ್ಯಂತರ ರೂಪಾಯಿಗಳ ಅವ್ಯವಹಾರವಾಗಿದ್ದು, ಸರ್ಕಾರಕ್ಕೆ ವಂಚಿಸಲಾಗುತ್ತಿದೆ‌’ ಎಂದು ಮಾಜಿ ಶಾಸಕ ಸತೀಶ ಸೈಲ್ ಆರೋಪಿಸಿದ್ದಾರೆ.

ನಗರಸಭೆ ಕಚೇರಿಗೆ ಬುಧವಾರ ಭೇಟಿ ನೀಡಿದ ಅವರು, ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಕರೆದಿರುವ ಗುತ್ತಿಗೆ ಪಟ್ಟಿಯನ್ನು ನೀಡುವಂತೆ ಒತ್ತಾಯಿಸಿ ಆಯುಕ್ತರ ಕಚೇರಿಯಲ್ಲಿ ಧರಣಿ ಕುಳಿತರು. ಈ ಸಂದರ್ಭದಲ್ಲಿ ಅವರು ಮತ್ತು ನಗರಸಭೆ ಆಯುಕ್ತ ಆರ್.ಪಿ.ನಾಯ್ಕ ನಡುವೆ ವಾಗ್ವಾದವೂ ನಡೆಯಿತು.

‘ಈ ಪ್ರಕರಣದಲ್ಲಿ ಟೆಂಡರ್ ಚೀಟಿಗಳಿರುವ ಪೆಟ್ಟಿಗೆಯನ್ನು ಜಪ್ತಿ ಮಾಡಬೇಕು. ಇ ಪ್ರೊಕ್ಯೂರ್‌ಮೆಂಟ್ ತನಿಖೆಯಾಗಬೇಕು’ ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

‘33 ಕೆಲಸಗಳು ₹ 5 ಲಕ್ಷಕ್ಕಿಂತ ಹೆಚ್ಚು ಹಾಗೂ ಉಳಿದವು ಅದಕ್ಕಿಂತ ಕಡಿಮೆ ಮೊತ್ತ ಹೊಂದಿವೆ. ₹ 5 ಲಕ್ಷಕ್ಕಿಂತ ಮೇಲಿನದ್ದನ್ನು ಇ ಪ್ರೊಕ್ಯೂರ್‌ಮೆಂಟ್ ಮೂಲಕವೂ ಉಳಿದವುಗಳಿಗೆ ಲಿಖಿತವಾಗಿ ಟೆಂಡರ್ ಆಹ್ವಾನಿಸಿದ್ದಾರೆ. ಆದರೆ, ಟೆಂಡರ್ ಅರ್ಜಿಗಳಿರುವ ಪೆಟ್ಟಿಗೆಯನ್ನು ಇನ್ನೂ ತೆರೆದಿಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಒಂದೆರಡು ಸಲ ಯಾರ‍್ಯಾರು ಅರ್ಜಿ ಸಲ್ಲಿಸಿದ್ದಾರೋ ಅವರಿಗೆ ಮಾತ್ರ ಇ ಪ್ರೊಕ್ಯೂರ್‌ಮೆಂಟ್ ಕೊಟ್ಟಿದ್ದಾರೆ’ ಎಂದು ದೂರಿದರು.

‘ತುರ್ತು ಸಂದರ್ಭಗಳಲ್ಲಿ ಟೆಂಡರ್ ಕರೆಯದೇ ಒಂದೆರಡು ಕೆಲಸಗಳನ್ನು ಮಾಡುವುದು ಸಾಮಾನ್ಯ. ಆದರೆ, ಇಲ್ಲಿ 179 ಕಾಮಗಾರಿಗಳನ್ನು ಮಾಡಲಾಗಿದೆ. ಹಾಗಾಗಿ ನಗರಸಭೆ ಆಯುಕ್ತ ಆರ್.ಪಿ ನಾಯ್ಕ ಅವರ ವಿರುದ್ಧ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗೂ ಮಾಹಿತಿ ನೀಡಿದ್ದೇನೆ’ ಎಂದು ಹೇಳಿದರು.

‘ದಾಖಲೆಗಳಲ್ಲಿ ‘ಅನುಷ್ಠಾನಗೊಂಡ ಕಾಮಗಾರಿಗಳಿಗೆ ಮಂಜೂರು ಮಾಡುವುದು’ ಎಂದು ಸ್ಪಷ್ಟವಾಗಿ ಬರೆದಿದೆ. ಈ ಪತ್ರಕ್ಕೆ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಅವರೂ ಓದದೇ ಸಹಿ ಮಾಡಿದ್ದಾರೆ. ಈಗ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಬಿಲ್ ಪಾವತಿಯಲ್ಲಿ ವ್ಯತ್ಯಾಸವಾದರೆ ನಾವು ಸುಮ್ಮನಿರುವುದಿಲ್ಲ. ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಯಾವುದೇ ಅವ್ಯವಹಾರ ಆಗಿಲ್ಲ’:

‘ಸರ್ಕಾರದ ನಿಯಮದ ಪ್ರಕಾರವೇ ನಗರಸಭೆಯು ಕಾರ್ಯ ನಿರ್ವಹಿಸುತ್ತಿದೆ. ತುರ್ತು ಕಾಮಗಾರಿ ಟೆಂಡರ್ ವಿಚಾರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅವ್ಯವಹಾರವಾಗಿದ್ದರೆ ತನಿಖೆ ಎದುರಿಸಲು ಸಿದ್ಧನಿದ್ದೇನೆ’ ಎಂದು ನಗರಸಭೆ ಆಯುಕ್ತ ಆರ್.ಪಿ.ನಾಯ್ಕ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗುತ್ತಿರುವ ಕಾಮಗಾರಿಗಳೆಲ್ಲವೂ ಈಗಾಗಲೇ ಪೂರ್ಣಗೊಂಡಿವೆ. ಆದರೆ, ಅವುಗಳ ಹೆಚ್ಚುವರಿ ಕೆಲಸ ಮಾಡಿದ್ದಕ್ಕೆ ಟೆಂಡರ್ ಕರೆಯಲಾಗಿದೆ. ಅದು ನಿಯಮದಂತೆಯೇ ಆಗಿದೆ’ ಎಂದು ತಿಳಿಸಿದ್ದಾರೆ.

‘ಈ ಮೊದಲು, ಪೂರ್ಣಗೊಂಡ ಕಾಮಗಾರಿಗಳಲ್ಲಿ ಹೆಚ್ಚುವರಿ ಕೆಲಸಗಳಿಗೆ ‘ವರ್ಕ್ ಸ್ಲಿಪ್’ ನೀಡಲಾಗುತ್ತಿತ್ತು. ಆದರೆ, ಸುಮಾರು ಎರಡು ವರ್ಷಗಳಿಂದ ಅದು ರದ್ದಾಗಿದ್ದು, ಹೊಸ ಟೆಂಡರ್ ಕರೆದೇ ಮಾಡಬೇಕಾಗಿದೆ. ಅದರಂತೆ ನಗರಸಭೆಯಲ್ಲಿ ಕೆಲಸ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು