ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನು ಸಾಗಣೆ ವಾಹನದಲ್ಲಿ ಮದ್ಯ ರವಾನೆ!

Last Updated 15 ಮೇ 2019, 13:55 IST
ಅಕ್ಷರ ಗಾತ್ರ

ಕಾರವಾರ:ಮೀನುಸಾಗಣೆ ವಾಹನದಲ್ಲಿ ಅಕ್ರಮವಾಗಿ ಸಾಗಿಸಲು ತುಂಬಿಡಲಾಗಿದ್ದ 833 ಲೀಟರ್ ಗೋವಾ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳುಮಂಗಳವಾರ ರಾತ್ರಿ ಶಿರವಾಡದಲ್ಲಿ ಪತ್ತೆ ಹಚ್ಚಿದ್ದಾರೆ. ಅವುಗಳ ಮೌಲ್ಯ ₹ 2.16 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಹನಗಳಲ್ಲಿ ಚಾಲಕನ ಹಿಂಭಾಗ ಪ್ರತ್ಯೇಕವಾಗಿ ಕೋಣೆಯಂತಹ ರಚನೆ ಮಾಡಿ ಅವುಗಳಲ್ಲಿ ಮದ್ಯದ ಬಾಟಲಿಗಳನ್ನು ಚೀಲಗಳಲ್ಲಿ ಇಡಲಾಗಿತ್ತು. ಅದಕ್ಕೆ ಕಬ್ಬಿಣದ ತಗಡನ್ನು ಅಳವಡಿಸಿ ಸ್ಕ್ರೂ ಹಾಕಲಾಗಿತ್ತು. ಬಳಿಕ ಮೀನು ತುಂಬುವ ಫೈಬರ್ ಬುಟ್ಟಿಗಳನ್ನು ಜೋಡಿಸಲಾಗಿತ್ತು. ಮೇಲ್ನೋಟಕ್ಕೆ ಯಾರಿಗೂ ಅಕ್ರಮದ ಸುಳಿವು ಸಿಗದಂತೆ ಮಾಡಲಾಗಿತ್ತು.

ಶಿರವಾಡದಲ್ಲಿ ನಿಲ್ಲಿಸಲಾಗಿದ್ದ ಈ ಎರಡು ವಾಹನಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅಕ್ರಮ ಬಯಲಾಯಿತು. 138 ಬಾಕ್ಸ್‌ಗಳಷ್ಟು ಗೋವಾ ಬ್ರಾಂಡಿ, ವಿಸ್ಕಿ ಹಾಗೂ ಫೆನ್ನಿಗಳನ್ನು ಸಾಗಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ವಾಹನದ ಮೌಲ್ಯವೂ ಸೇರಿ ಒಟ್ಟು ₹ 11 ಲಕ್ಷದ ವಸ್ತುಗಳನ್ನು ಜಪ್ತಿ ಮಾಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ವಾಹನಗಳು ಶಿರವಾಡದ ದೀಪಕ್ ಮಹಾನಂದ ನಾಯಕ ಹಾಗೂ ಹೊನ್ನಾವರದ ಸುರೇಶ ರಾಮ ಪಟಗಾರ್ ಅವರಿಗೆ ಸೇರಿವೆ.

ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಅಬಕಾರಿ ಇಲಾಖೆ ಸಹಾಯಕ ಆಯುಕ್ತ ಎಲ್.ಎ.ಮಂಜುನಾಥ ತಿಳಿಸಿದ್ದಾರೆ. ಅಬಕಾರಿ ಇಲಾಖೆ ಡಿವೈಎಸ್‌ಪಿ ಮಿಲ್ಲರ್ ಡಿಸೋಜಾ ಮತ್ತು ಅವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT