ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಕಾಮಗಾರಿಗೆ ವಿನಾಯಿತಿ, ಲಾಕ್‌ಡೌನ್ ಸಡಿಲಿಕೆ ಇಲ್ಲ: ಸ್ಪೀಕರ್ ವಿಶ್ವೇಶ್ವರ

Last Updated 22 ಏಪ್ರಿಲ್ 2020, 13:20 IST
ಅಕ್ಷರ ಗಾತ್ರ

ಶಿರಸಿ: ಲಾಕ್‌ಡೌನ್‌ ನಿಯಮದಲ್ಲಿ ಯಾವುದೇ ಸಡಿಲಿಕೆಯಿಲ್ಲದೇ, ತುರ್ತು ಅಗತ್ಯವಿರುವ ನಿರ್ಮಾಣ ಕಾಮಗಾರಿ, ಕೃಷಿ ಚಟುವಟಿಕೆ ನಡೆಸಬಹುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ನಡೆದ ಅಧಿಕಾರಿಗಳು, ವರ್ತಕರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೃಷಿ ಹಾಗೂ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು, ನೇರವಾಗಿ ಅಂಗಡಿಗಳಲ್ಲಿ ಮಾರಾಟ ಮಾಡಿದರೆ, ಜನದಟ್ಟಣಿಯಾಗುತ್ತದೆ. ಹೀಗಾಗಿ, ನಿರ್ದಿಷ್ಟ ವ್ಯವಸ್ಥೆ ಮೂಲಕ ಗ್ರಾಹಕರ ಮನೆ ತಲುಪಿಸಬೇಕು. ಅಗತ್ಯವಿದ್ದರೆ ಸ್ಥಳೀಯ ಪ್ರಾಥಮಿಕ ಸಹಕಾರ ಸಂಘಗಳ ನೆರವು ಪಡೆಯಬೇಕು ಎಂಬ ಸಲಹೆ ವ್ಯಕ್ತವಾಯಿತು.

ಮೇ 15ರಿಂದ ಕೃಷಿ ಚಟುವಟಿಕೆ ಬಿರುಸುಗೊಳ್ಳುವುದರಿಂದ, ಅದಕ್ಕೆ ಪೂರಕ ತಯಾರಿಯನ್ನು ರೈತರು ಮಾಡಿಕೊಳ್ಳಬೇಕಾಗಿದೆ. ಹಳ್ಳಿ, ನಗರಗಳಲ್ಲಿ ಅನೇಕರು ಅರೆಬರೆ ನಿರ್ಮಿಸಿಕೊಂಡಿರುವ ಮನೆ, ಕೊಟ್ಟಿಗೆ, ಶೌಚಾಲಯಗಳನ್ನು ಮಳೆಗಾಲಕ್ಕೆ ಮುಂಚಿತವಾಗಿ ಪೂರ್ಣಗೊಳಿಸಬೇಕಾಗಿದೆ. ಇಂತಹ ತುರ್ತು ಕೆಲಸಗಳನ್ನು ಮಾತ್ರ ಈ ಸಂದರ್ಭದಲ್ಲಿ ಕೈಗೊಳ್ಳಬೇಕು. ಉಳಿದಂತೆ ಕಿರಾಣಿ, ತರಕಾರಿ, ಹಣ್ಣು, ಮೀನು ಪೂರೈಕೆ ವ್ಯವಸ್ಥೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ಜನರು ಅನಗತ್ಯ ಸಂಚಾರ ಮಾಡಬಾರದು ಎಂದು ಕಾಗೇರಿ ತಿಳಿಸಿದರು.

ಸಾಮಗ್ರಿಗಳನ್ನು ಗ್ರಾಹಕ ಮನೆಗೆ ತಲುಪಿಸುವ ವಾಹನಗಳಿಗೆ ತಾಲ್ಲೂಕು ಆಡಳಿತದಿಂದ ಅನುಮತಿ ಪಡೆಯಬೇಕು. ಅಧಿಕೃತ ದಾಖಲೆ ನೀಡುವ ಎಲ್ಲ ವರ್ತಕರಿಗೂ ಕೃಷಿ ಹಾಗೂ ಕಟ್ಟಡ ಸಂಬಂಧಿತ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗುವುದು ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ದೀಪಕ ದೊಡ್ಡೂರು ಮಾತನಾಡಿ, ‘ಪರಿಸ್ಥಿತಿ ಆಧರಿಸಿ ಲಾಕ್‌ಡೌನ್ ಮೇ 3ರ ನಂತರವೂ ಮುಂದುವರಿಯಬಹುದು. ಈ ಸಂದರ್ಭದಲ್ಲಿ ಕೃಷಿ ಚಟುವಟಿಕೆಗೆ ಅಲ್ಪ ವಿನಾಯಿತಿ ನೀಡದಿದ್ದರೆ, ಸಹಕಾರ ಸಂಘಗಳಿಗೆ ಮಾತ್ರ ಸರ್ಕಾರಕ್ಕೂ ಭವಿಷ್ಯದಲ್ಲಿ ತೊಂದರೆಯಾಗಬಹುದು’ ಎಂದರು.

ಟಿಎಸ್‌ಎಸ್‌ ಪ್ರತಿನಿಧಿ ಅನಿಲ್ ಮುಷ್ಟಗಿ ಮಾತನಾಡಿ, ‘ಕಾನೂನು ಎಲ್ಲರಿಗೂ ಒಂದೇ ರೀತಿಯಾಗಿರಬೇಕು. ನಗರದ ಇತರ ಕೃಷಿ, ಕಟ್ಟಡ ಸಾಮಗ್ರಿ ಮಳಿಗೆಗಳಿಗೆ ಬಾಗಿಲು ತೆರೆಯಲು ಅವಕಾಶ ನೀಡಿದರೆ ಟಿಎಸ್‌ಎಸ್‌ಗೂ ಅವಕಾಶ ನೀಡಬೇಕು’ ಎಂದರು.

ಡಿವೈಎಸ್ಪಿ ಜಿ.ಟಿ.ನಾಯಕ ಮಾತನಾಡಿ, ‘ಅಂಗಡಿಗಳ ಎದುರು ಜನದಟ್ಟಣಿ ಆಗಬಾರದು. ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಕಾರ್ಮಿಕರನ್ನು ಬಳಸಬೇಕೇ ವಿನಾ ಹೊರ ಊರಿನವರಿಗೆ ಅವಕಾಶವಿಲ್ಲ’ ಎಂದರು. ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣನವರ್, ಸಿಪಿಐ ಪ್ರದೀಪ ಬಿ.ಯು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT