ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕುಸಿತ ಪ್ರದೇಶಗಳ ಪುನರುಜ್ಜೀವನಕ್ಕೆ ತಂತ್ರ ರೂಪಿಸಲು ಶಿಫಾರಸು

Last Updated 14 ಸೆಪ್ಟೆಂಬರ್ 2022, 16:30 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಮಲೆನಾಡು ಮತ್ತು ಕರಾವಳಿಯ ವಿವಿಧೆಡೆ ಭೂಕುಸಿತವಾದ ಪ್ರದೇಶಗಳಿಗೆ,ವೃಕ್ಷಲಕ್ಷ ಆಂದೋಲನವೂ ಸೇರಿದಂತೆ ವಿವಿಧ ತಜ್ಞರ ನಿಯೋಗವು ಈಚೆಗೆ ಭೇಟಿ ನೀಡಿ ಪರಿಶೀಲಿಸಿದೆ. ಅಧ್ಯಯನದ ಸಂದರ್ಭದಲ್ಲಿ ಗಮನಿಸಿದ ಅಂಶಗಳನ್ನು ಆಧರಿಸಿ, ಸರ್ಕಾರಕ್ಕೆ ವಿವಿಧ ಶಿಫಾರಸುಗಳನ್ನು ಮಾಡಿದೆ.

ಮಾಹಿತಿ ನೀಡಿದ ಆಂದೋಲನದ ಅಧ್ಯಕ್ಷ ಅನಂತ ಅಶೀಸರ, ‘ಭೂ ಕುಸಿತಗಳ ಅಧ್ಯಯನಕ್ಕಾಗಿ ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರ ನೇತೃತ್ವದಲ್ಲಿ ರಾಜ್ಯ ಸರ್ಕಾರವು 2021ರಲ್ಲಿ ರಚಿಸಿದ್ದ ತಜ್ಞರ ಸಮಿತಿಯ ವರದಿ ಹಾಗೂ ಶಿಫಾರಸುಗಳನ್ನು ಅನುಷ್ಠಾನ ಮಾಡಬೇಕು’ ಎಂದು ಒತ್ತಾಯಿಸಿದರು.

‘ಭೂಕುಸಿತದ ಪ್ರದೇಶಗಳ ಪುನರುಜ್ಜೀವನ ಕಾರ್ಯಕ್ರಮಕ್ಕೆ ಹುಲ್ಲು ಬೆಳೆಸುವ ಹಾಗೂ ಕಲ್ಲಿನ ಪಿಚಿಂಗ್ ಮಾಡುವುದೂ ಸೇರಿದಂತೆ ವಿವಿಧ ಸೂಕ್ತ ತಂತ್ರಗಳನ್ನು ಅನುಸರಿಸಬೇಕು. ರಾಷ್ಟ್ರೀಯ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಲ್ಲಿ ಲಭ್ಯವಿರುವ ನಿಧಿಯನ್ನು ಬಳಸಿಕೊಂಡು ಈ ಬಗೆಯ ಮಾದರಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಕಳಚೆ, ಅಪ್ಸರಕೊಂಡ ಹಾಗೂ ಮುಟ್ಟಳ್ಳಿ ಗ್ರಾಮಗಳ ಭೂಕುಸಿತ ಪ್ರದೇಶಗಳನ್ನು ಇದಕ್ಕೆ ಆಯ್ಕೆ ಮಾಡಿಕೊಳ್ಳಬಹುದು’ ಎಂದು ಶಿಫಾರಸು ಮಾಡಿದ್ದಾಗಿ ತಿಳಿಸಿದರು.

ಇತರ ಶಿಫಾರಸುಗಳು:

‘ವಜ್ರಳ್ಳಿ– ಕಳಚೆ ಗ್ರಾಮಗಳಲ್ಲಿ ಕಳೆದ ವರ್ಷ ಉಂಟಾದ ಭೂ ಕುಸಿತವಾಗಿ ಹಾನಿಗೀಡಾದ ಕುಟುಂಬಗಳಿಗೆ ಇನ್ನೂ ಪರಿಹಾರ ಬರಬೇಕಿದೆ. ಇದರ ಪ್ರಸ್ತಾವವು ಈಗಲೂ ಕಂದಾಯ ಇಲಾಖೆಯ ಪರಿಶೀಲನೆಯಲ್ಲಿದೆ. ಈ ಕುಟುಂಬಗಳಿಗೆ ನ್ಯಾಯುತವಾದ ಪರಿಹಾರವನ್ನು ವಿತರಿಸಬೇಕು’ ಎಂದು ಶಿಫಾರಸು ಮಾಡಲಾಗಿದೆ.

‘ಭೂ ಕುಸಿತ ಹಾಗೂ ನೆರೆಯಿಂದಾಗಿ ನಷ್ಟವಾದ ಮೀನುಗಾರರು, ರೈತರು, ಕೂಲಿಕಾರರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಸುರಕ್ಷಿತವಾದ ಬೇರೆ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಸ್ವತಃ ಬಯಸುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಸಮೀಕ್ಷೆ ನಡೆಸಬೇಕು’ ಎಂದು ಶಿಫಾರಸು ಮಾಡಲಾಗಿದೆ.

‘ಭಟ್ಕಳದ ಮುಟ್ಟಳ್ಳಿ ಗ್ರಾಮದಲ್ಲಿ ಭೂಕುಸಿತದಿಂದ ಹಾನಿಯಾದ ಕುಟುಂಬಗಳಿಗೆ ನ್ಯಾಯುತವಾದ ಪರಿಹಾರ ಬರಬೇಕಿದೆ. ದುರಂತ ನಡೆದ ಗುಡ್ಡದ ಬುಡವು ಈಗಲೂ ಅಪಾಯಕಾರಿಯಾಗಿದೆ. ಅಲ್ಲಿನ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಿ, ಸಮೀಪ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಿ ಮನೆ ನಿರ್ಮಾಣಕ್ಕೆ ನೆರವು ನೀಡಬೇಕು’ ಎಂದು ವರದಿ ತಿಳಿಸಿದೆ.

‘ಯಂತ್ರ ಬಳಕೆ ನಿಯಂತ್ರಿಸಿ’:

‘ಹೊನ್ನಾವರ ತಾಲ್ಲೂಕಿನ ಶರಾವತಿ ನದಿ ಕಣಿವೆಯ ಅಪ್ಸರಕೊಂಡ ಪ್ರದೇಶದಲ್ಲಿ ಭೂಮಿ ಬಿರುಕು ಬಿಟ್ಟಿದೆ. ಇಲ್ಲಿನ ಗುಡ್ಡ, ಹುಲ್ಲುಗಾವಲು ಹಾಗೂ ಜನ ವಸತಿಯಿರುವ ಗುಡ್ಡದ ತಪ್ಪಲಿನ ಪ್ರದೇಶದಲ್ಲಿ, ಮೇಲ್ಮಣ್ಣನ್ನು ನಾಶಮಾಡುವ ಯಾವುದೇ ಯಂತ್ರಾಧಾರಿತ (ಜೆ.ಸಿ.ಬಿ) ಕಾಮಗಾರಿ ಕೈಗೊಳ್ಳಬಾರದು. ಕೆರೆ ತೋಡುವುದು, ವಾಣಿಜ್ಯ ಉದ್ದೇಶಕ್ಕಾಗಿ ಮಣ್ಣು ತೆಗೆಯುವುದು ಮುಂತಾದ ಕಾಮಗಾರಿಗಳನ್ನು ನಿಯಂತ್ರಿಸಬೇಕು’ ಎಂದು ಶಿಫಾರಸು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT