ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಭಾರಂಭದ ನಿರೀಕ್ಷೆಯಲ್ಲಿ ಭಾರತ

ಇಂಟರ್‌ ಕಾಂಟಿನೆಂಟಲ್‌ ಕಪ್‌ ಫುಟ್‌ಬಾಲ್‌ ಟೂರ್ನಿ: ಇಂದು ಚೀನಾ ತೈಪೆ ವಿರುದ್ಧ ಪಂದ್ಯ: ಚೆಟ್ರಿ ಆಕರ್ಷಣೆ
Last Updated 31 ಮೇ 2018, 19:30 IST
ಅಕ್ಷರ ಗಾತ್ರ

ಮುಂಬೈ: ಮುಂದಿನ ವರ್ಷ ನಡೆಯುವ ಏಷ್ಯಾಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿರುವ ಭಾರತ ಫುಟ್‌ಬಾಲ್‌ ತಂಡದವರು ಈಗ ಹೊಸ ಸವಾಲು ಎದುರಿಸಲು ಸಜ್ಜಾಗಿದ್ದಾರೆ.

ಶುಕ್ರವಾರದಿಂದ ನಡೆಯುವ ಇಂಟರ್‌ ಕಾಂಟಿನೆಂಟಲ್‌ ಕಪ್‌ ಟೂರ್ನಿಯ ತನ್ನ ಮೊದಲ ಹಣಾಹಣಿಯಲ್ಲಿ ಸುನಿಲ್‌ ಚೆಟ್ರಿ ಬಳಗ ಚೀನಾ ತೈಪೆ ವಿರುದ್ಧ ಸೆಣಸಲಿದೆ. ಈ ಟೂರ್ನಿಯಲ್ಲಿ ಕೀನ್ಯಾ ಮತ್ತು ನ್ಯೂಜಿಲೆಂಡ್‌ ತಂಡಗಳೂ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಸ್ಟೀಫನ್‌ ಕಾನ್‌ಸ್ಟೆಂಟೈನ್‌ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಭಾರತ ತಂಡ 2016ರಿಂದ ಈ ವರ್ಷದ ಮಾರ್ಚ್‌ ತಿಂಗಳ ಅವಧಿಯಲ್ಲಿ ಸತತ 13 ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿತ್ತು.

ಫಿಫಾ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 97ನೇ ಸ್ಥಾನ ಹೊಂದಿರುವ ಆತಿಥೇಯರು ಮುಂಬೈ ಫುಟ್‌ಬಾಲ್‌ ಅರೆನಾದಲ್ಲಿ ಜಯದ ತೋರಣ ಕಟ್ಟಲು ಉತ್ಸುಕರಾಗಿದ್ದಾರೆ.

ತವರಿನ ಅಭಿಮಾನಿಗಳ ಎದುರು ಕಣಕ್ಕಿಳಿಯುತ್ತಿರುವ ಭಾರತ ತಂಡ ಎಲ್ಲಾ ವಿಭಾಗಗಳಲ್ಲೂ ಬಲಯುತವಾಗಿದೆ.

ಚೆಟ್ರಿ, ಬಲವಂತ್‌ ಸಿಂಗ್‌ ಮತ್ತು ಜೆಜೆ ಲಾಲ್‌ಪೆಕ್ಲುವಾ ಅವರು ಮುಂಚೂಣಿ ವಿಭಾಗದಲ್ಲಿ ತಂಡದ ಶಕ್ತಿಯಾಗಿದ್ದಾರೆ.

ಮಿಡ್‌ಫೀಲ್ಡರ್‌ಗಳಾದ ಹಾಲಿಚರಣ್‌ ನರ್ಜರಿ, ಉದಾಂತ್‌ ಸಿಂಗ್‌, ಬಿಕೆಷ್‌ ಜೈರು ಮತ್ತು ಮಹಮ್ಮದ್‌ ರಫೀಕ್‌ ಅವರು ಚೀನಾ ತೈಪೆಯ ರಕ್ಷಣಾ ಕೋಟೆಯನ್ನು ಭೇದಿಸಿ ತವರಿನ ತಂಡಕ್ಕೆ ಗೆಲುವಿನ ಸಿಹಿ ಉಣಬಡಿಸಲು ಕಾತರರಾಗಿದ್ದಾರೆ.

ರಕ್ಷಣಾ ವಿಭಾಗದ ಆಟಗಾರರಾದ ಸಂದೇಶ್‌ ಜಿಂಗಾನ್‌, ಪ್ರೀತಮ್‌ ಕೋಟಾಲ್‌, ಸೌವಿಕ್‌ ಚಕ್ರವರ್ತಿ ಮತ್ತು ಅನಾಸ್‌ ಎಡತೋಡಿಕಾ ಅವರೂ ಕಾಲ್ಚಳಕ ತೋರುವ ಹುಮ್ಮಸ್ಸಿನಲ್ಲಿದ್ದಾರೆ. ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಅವರ ಮೇಲೂ ಭರವಸೆ ಇಡಬಹುದಾಗಿದೆ.

‘ಚೀನಾ ತೈಪೆ ತಂಡದ ವಿರುದ್ಧ ನಾವು ಉತ್ತಮ ಗೆಲುವಿನ ದಾಖಲೆ ಹೊಂದಿದ್ದೇವೆ. ಆ ತಂಡದಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ. ಅವರು ನಮ್ಮನ್ನು ಮಣಿಸಲು ಹವಣಿಸುತ್ತಿದ್ದಾರೆ. ಹೀಗಾಗಿ ಎದುರಾಳಿಗಳನ್ನು ಹಗುರವಾಗಿ ಪರಿಗಣಿಸುವುದಿಲ್ಲ’ ಎಂದು ಭಾರತ ತಂಡದ ಮುಖ್ಯ ಕೋಚ್‌ ಸ್ಟೀಫನ್‌ ಕಾನ್ಸ್‌ಟೆಂಟೈನ್‌ ನುಡಿದಿದ್ದಾರೆ.

ಗ್ಯಾರಿ ವೈಟ್‌ ಅವರ ಗರಡಿಯಲ್ಲಿ ಪಳಗಿರುವ ಚೀನಾ ತೈಪೆ ತಂಡ ಕೂಡಾ ಶುಭಾರಂಭದ ನಿರೀಕ್ಷೆಯಲ್ಲಿದೆ.

ಚೆನ್‌ ಪೊ ಲಿಯಾಂಗ್‌ ಸಾರಥ್ಯದ ತಂಡ ಫಿಫಾ ರ‍್ಯಾಂಕಿಂಗ್‌ನಲ್ಲಿ 121ನೇ ಸ್ಥಾನ ಹೊಂದಿದೆ.

ಏಷ್ಯಾಕಪ್‌ ಸೇರಿದಂತೆ ವಿವಿಧ ಟೂರ್ನಿಗಳಲ್ಲಿ ಆಡಿದ ಅನುಭವಿಗಳು ಈ ತಂಡದಲ್ಲಿದ್ದಾರೆ.

ಯಾಕಿ ಯೆನ್‌, ಲಿನ್‌ ಯುಹೆ ಹಾನ್‌, ವೆಂಗ್‌ ವೀ ಪಿನ್‌ ಅವರು ಭಾರತದ ರಕ್ಷಣಾ ವಿಭಾಗಕ್ಕೆ ಸವಾಲಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಪಂದ್ಯದ ಆರಂಭ: ರಾತ್ರಿ 8.
ಸ್ಥಳ: ಮುಂಬೈ ಫುಟ್‌ಬಾಲ್‌ ಅರೆನಾ.

‘ಭಾರತದಲ್ಲಿ ಫುಟ್‌ಬಾಲ್‌ ಜನಪ್ರಿಯವಾಗುತ್ತಿದೆ’
‘ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರದಲ್ಲಿ ಫುಟ್‌ಬಾಲ್‌ ಹೆಚ್ಚು ಜನಪ್ರಿಯವಾಗುತ್ತಿದೆ’ ಎಂದು ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಹೇಳಿದ್ದಾರೆ.

‘ನಮ್ಮ ದೇಶದ ಜನರಲ್ಲಿ ಫುಟ್‌ಬಾಲ್‌ ಕ್ರೀಡೆಯ ಬಗ್ಗೆ ಹೆಚ್ಚಿನ ಜಾಗೃತಿ ಬೆಳೆಯುತ್ತಿದೆ. ಹೆಚ್ಚು ಹೆಚ್ಚು ಜನರು ಈ ಕ್ರೀಡೆಯಡೆಗೆ ಆಕರ್ಷಿತರಾಗುತ್ತಿದ್ಧಾರೆ. ಇದರಿಂದ ಫುಟ್‌ಬಾಲ್‌ ಹಿಂದೆಂದಿಗಿಂತಲೂ ಇಂದು ಹೆಚ್ಚು ಜನಪ್ರಿಯ. ಫುಟ್‌ಬಾಲ್‌ ಆಡಲು ಬೇಕಾದ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯದ ಬಗ್ಗೆಯೂ ಯುವಕರಲ್ಲಿ ಹೆಚ್ಚಿನ ತಿಳಿವಳಿಕೆ ಇದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT