ಶಿರಸಿ: ನೇತ್ರದಾನದಿಂದ ಸಾವಿನಲ್ಲಿ ಸಾರ್ಥಕತೆ: ರಾಜು

ಶಿರಸಿ: ಸಾವಿನಲ್ಲಿ ಸಾರ್ಥಕತೆ ಕಾಣಬೇಕಾದರೆ ಪ್ರತಿಯೊಬ್ಬರೂ ನೇತ್ರದಾನ ಮಾಡಬೇಕು ಎಂದು ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಹೇಳಿದರು.
ಲಯನ್ಸ್ ನಯನ ನೇತ್ರ ಭಂಡಾರವು ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಇಲ್ಲಿ ಆಯೋಜಿಸಿದ್ದ ನೇತ್ರದಾನ ಜಾಗೃತಿ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿರುವ ಧಾರ್ಮಿಕ ಕಟ್ಟುಪಾಡುಗಳು, ಭಯ ಹಾಗೂ ಅಜ್ಞಾನದ ಕಾರಣ ನೇತ್ರದಾನ ಮಾಡುವವರ ಪ್ರಮಾಣ ಏರಿಕೆಯಾಗುತ್ತಿಲ್ಲ. ನೇತ್ರದಾನದ ಬಗೆಗಿನ ಅಜ್ಞಾನ ದೂರಗೊಳಿಸಿ, ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ಆಯುಷ್ಯ ಅಲ್ಪವಾಗಿದ್ದು, ಸಾವಿನ ನಂತರವೂ ಬದುಕನ್ನು ಸಾರ್ಥಕ ಮಾಡಿಕೊಳ್ಳಲು ನೇತ್ರದಾನದಂತಹ ಪವಿತ್ರ ಕಾರ್ಯ ಮಾಡಬೇಕು ಎಂದರು.
ನೇತ್ರತಜ್ಞ ಕೆ.ವಿ.ಶಿವರಾಮ ಮಾತನಾಡಿ, ‘ಒಬ್ಬರ ನೇತ್ರದಾನ ಮಾಡಿದರೆ ಇಬ್ಬರ ಅಂಧಕಾರದ ಬಾಳಿನಲ್ಲಿ ಬೆಳಕು ಮೂಡಲು ಸಾಧ್ಯ. ಮರಣಾನಂತರ ದೇಹದ ಜೊತೆ ಕಣ್ಣನ್ನು ಸುಡುವ, ಮಣ್ಣು ಮಾಡುವ ಬದಲು ದಾನ ಮಾಡಬೇಕು. ದಾನಗಳಲ್ಲಿಯೇ ನೇತ್ರದಾನ ಪ್ರಧಾನವಾಗಿದೆ’ ಎಂದರು.
ಲಯನೆಸ್ ಸದಸ್ಯೆಯರು ನೇತ್ರದಾನ ಜಾಗೃತಿ ಕುರಿತು ಕಿರು ನಾಟಕ ಪ್ರದರ್ಶಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿತು. ಭಾರತೀಯ ವೈದ್ಯಕೀಯ ಸಂಘದ ಘಟಕ, ಲಯನ್ಸ್, ಲಯನೆಸ್, ಪತಂಜಲಿ, ಎಲ್ಐಸಿ ಘಟಕ, ಸ್ಕೊಡ್ವೆಸ್, ರೋಟರಿ, ಇನ್ನರ್ವೀಲ್, ಆರೋಗ್ಯ ಇಲಾಖೆ, ಗಣೇಶ ನೇತ್ರಾಲಯ, ಮೀಯಾರ್ಡ್ಸ್ ಚಂದನ ಶಾಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.