ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಡಿಗರ ಮತದ ಮೇಲೆ ಕಣ್ಣು ?

ಪೈಪೋಟಿಯಲ್ಲಿ ಪ್ರಚಾರಕ್ಕಿಳಿದಿರುವ ಬಿಜೆಪಿ–ಕಾಂಗ್ರೆಸ್‌ನ ನಾಮಧಾರಿ ನಾಯಕರು
Last Updated 30 ನವೆಂಬರ್ 2019, 10:22 IST
ಅಕ್ಷರ ಗಾತ್ರ

ಶಿರಸಿ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಚಾರ ರಂಗೇರುತ್ತಿದೆ. ಗ್ರಾಮೀಣ ಪ್ರದೇಶಗಳನ್ನೇ ಹೆಚ್ಚು ಕೇಂದ್ರೀಕರಿಸಿರುವ ಪಕ್ಷಗಳು ಈ ಬಾರಿ ಮನೆ–ಮನೆ ಪ್ರಚಾರಕ್ಕೆ ವಿಶೇಷ ಒತ್ತು ನೀಡಿವೆ.

ಕ್ಷೇತ್ರದಲ್ಲಿ ಹವ್ಯಕರು, ಲಿಂಗಾಯತರು, ಮರಾಠರು, ನಾಮಧಾರಿಗಳು, ಪರಿಶಿಷ್ಟರು, ಅಲ್ಪಸಂಖ್ಯಾತ ಮತದಾರರು ಬಹುತೇಕ ಸಮಾನ ಪ್ರಮಾಣದಲ್ಲಿದ್ದಾರೆ. ಆದರೆ, ಬನವಾಸಿ ಹೋಬಳಿಯಲ್ಲಿ ಅತ್ಯಧಿಕ ಇರುವ ನಾಮಧಾರಿ ಸಮುದಾಯದ ಮತಗಳ ಮೇಲೆ ಎರಡೂ ಪಕ್ಷಗಳು ದೃಷ್ಟಿನೆಟ್ಟಿವೆ.

ಕಾಂಗ್ರೆಸ್‌ನ ಗಟ್ಟಿನೆಲೆಯಾಗಿರುವ ಬನವಾಸಿ ಹೋಬಳಿಯಲ್ಲಿ, ಹೆಬ್ಬಾರ್ ಜನರ ಪ್ರೀತಿ ಗಳಿಸಿದ್ದಾರೆ. ಹೆಬ್ಬಾರ್ ಕಾಂಗ್ರೆಸ್‌ನಲ್ಲಿದ್ದಾಗ ‘ನಮ್ಮ ಸಾಹೇಬ್ರು’ ಎನ್ನುತ್ತಿದ್ದ ನಿಷ್ಠಾವಂತ ಕಾರ್ಯಕರ್ತರಿಗೆ ಅವರ ಪಕ್ಷಾಂತರ ಬೇಸರತಂದಿದೆ. ಕೆಲವರು ಮಾನಸಿಕವಾಗಿ ಕಾಂಗ್ರೆಸ್‌ನಲ್ಲಿದ್ದರೂ, ಹೆಬ್ಬಾರರ ಜೊತೆಗಿನ ಒಡನಾಟದಿಂದ ಅವರನ್ನು ಬೆಂಬಲಿಸುತ್ತಿದ್ದಾರೆ.

ಆದರೆ, ತಮ್ಮ ಸಮುದಾಯದವರೇ ಆದ ಭೀಮಣ್ಣ ನಾಯ್ಕ ಕಣಕ್ಕಿಳಿದಿರುವುದು ನಾಮಧಾರಿಗಳನ್ನು ಒಗ್ಗೂಡಿಸಿದೆ. ಕಳೆದ ಚುನಾವಣೆಯಲ್ಲಿ ಗೆಲುವು ತಂದುಕೊಟ್ಟಿದ್ದ ಬನವಾಸಿ ಹೋಬಳಿಯ ಮತ ಕಾಂಗ್ರೆಸ್‌ ಪಾಲಾಗಬಾರದೆಂದು ಹೆಬ್ಬಾರ್ ತಂತ್ರ ಹೆಣೆದರೆ, ಕಾಂಗ್ರೆಸ್‌ ನೆಲೆಯನ್ನು ಉಳಿಸಿಕೊಳ್ಳಲೇಬೇಕೆಂದು ಕಾಂಗ್ರೆಸ್ಸಿಗರು ಪಣತೊಟ್ಟಿದ್ದಾರೆ.

ಹೀಗಾಗಿ, ಎರಡೂ ಪಕ್ಷಗಳ ನಾಮಧಾರಿ ಸಮುದಾಯದ ನಾಯಕರು ಕ್ಷೇತ್ರದ ಬೀಡುಬಿಟ್ಟಿದ್ದಾರೆ. ಬಿಜೆಪಿಯಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ್‌ಕುಮಾರ್ ಕಾರ್ಕಳ 8–10 ದಿನಗಳಿಂದ ಕ್ಷೇತ್ರದಲ್ಲೇ ಉಳಿದು, ಚುನಾವಣೆ ಉಸ್ತುವಾರಿ ನೋಡಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅಭಿಮಾನಿಗಳನ್ನು ಸೆಳೆಯಲು ಶಿವಮೊಗ್ಗ ಜಿಲ್ಲೆ ಶಾಸಕರಾದ ಹರತಾಳು ಹಾಲಪ್ಪ, ಕುಮಾರ ಬಂಗಾರಪ್ಪ, ಬನವಾಸಿ ಸುತ್ತಮುತ್ತಲಿನ ಹಳ್ಳಿಗರ ಮನವೊಲಿಸಲು ಪ್ರಯತ್ನಿಸಿದ್ದಾರೆ.

ಇತ್ತ ಕಾಂಗ್ರೆಸ್‌ನಲ್ಲಿ ಹಿರಿಯ ಮುಖಂಡ ವಿನಯಕುಮಾರ ಸೊರಕೆ ವಾರದಿಂದ ಕ್ಷೇತ್ರದ ಓಡಾಟ ನಡೆಸಿದ್ದಾರೆ. ಮಾಜಿ ಸಚಿವೆ ಜಯಮಾಲಾ ಮೂರು ದಿನ ಇಲ್ಲೇ ಉಳಿದು, ಮಹಿಳಾ ಮತದಾರರನ್ನು ಮೋಡಿಮಾಡಲು ಯತ್ನಿಸಿದ್ದಾರೆ. ಜಿಲ್ಲಾ ಪಂಚಾಯ್ತಿ ಸದಸ್ಯ ಕಲಗೋಡು ರತ್ನಾಕರ ಅವರು ನಾಮಧಾರಿಗಳ ಮನೆಗೆ ಭೇಟಿ ನೀಡುತ್ತಿದ್ದಾರೆ. ಒಟ್ಟಿನಲ್ಲಿ, ಬನವಾಸಿ ಗೆದ್ದವರಿಗೆ ಶಾಸಕತ್ವದ ಗದ್ದುಗೆ ಎಂದು ಎರಡೂ ಅಭ್ಯರ್ಥಿಗಳು ಈ ಭಾಗವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT