ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವೈಫಲ್ಯ: ಕೊಳವೆಬಾವಿಯತ್ತ ರೈತರ ಚಿತ್ತ

Last Updated 27 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಶಿರಸಿ: ಮನೆಯೆದುರು ನಳಗಳಿದ್ದರೂ, ಅದರಲ್ಲಿ ಹನಿ ನೀರನ್ನು ಕಾಣದ ಜನರು ಕುಡಿಯುವ ನೀರಿಗಾಗಿ ಕೊಡ ಹೊತ್ತು ತಿರುಗುತ್ತಾರೆ, ಇನ್ನು ಕೆಲವರು ಕೊಳವೆಬಾವಿ ಕೊರೆಸುವತ್ತ ಚಿತ್ತ ಹರಿಸಿದ್ದಾರೆ.

ರಾಜೀವಗಾಂಧಿ ಸಬ್‌ಮಿಷನ್ ಯೋಜನೆಯಡಿ ₹ 3.45 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ಬದನಗೋಡ ಪಂಚಾಯ್ತಿ ವ್ಯಾಪ್ತಿಯ ದಾಸನಕೊಪ್ಪ, ಬೆಳ್ಳನಕೇರಿ, ಕುಪಗಡ್ಡೆ, ರಂಗಾಪುರ, ಕಾಳಂಗಿ, ವದ್ದಲ, ದನಗನಹಳ್ಳಿ ಹಾಗೂ ಸಂತೊಳ್ಳಿ ಗ್ರಾಮಗಳ ಜನರಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ 2014ರಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿತು. ಧರ್ಮಾ ಜಲಾಶಯದಿಂದ ಪ್ರತಿದಿನ 5.8 ಲಕ್ಷ ಲೀಟರ್ ನೀರನ್ನು ಎತ್ತಿ, ಸುಮಾರು 14ಸಾವಿರ ಜನರಿಗೆ ಪೂರೈಕೆ ಮಾಡುವುದು ಯೋಜನೆಯ ಉದ್ದೇಶವಾಗಿತ್ತು.

ಕೃಷಿ ಕಾರ್ಮಿಕರೇ ಅಧಿಕವಾಗಿರುವ ಈ ಹಳ್ಳಿಗಳ ಜನರು ಮನೆಯೆದುರು ಪೈಪ್‌ಲೈನ್ ಹಾಕಿ ನಳ ಜೋಡಿಸುವಾಗ, ಅಂಗಳದಲ್ಲೇ ನೀರನ್ನು ಕಾಣುವ ಖುಷಿಯಲ್ಲಿದ್ದರು. ಆದರೆ, ಯೋಜನೆ ಜಾರಿಯಾದ ಮೇಲೆ ಒಂದು ದಿನವೂ ತೊಟ್ಟು ನೀರನ್ನು ಕಾಣದ ಇವರು ಸರ್ಕಾರಿ ಯೋಜನೆಯ ಬಗ್ಗೆ ಹತಾಶರಾಗಿದ್ದಾರೆ. ನಳಗಳಲ್ಲಿ ನೀರು ಬರುವ ಭರವಸೆಯೇ ಉಳಿದಿಲ್ಲ ಇವರಿಗೆ.

‘ಆರಂಭದಿಂದಲೇ ರೋಗಗ್ರಸ್ಥವಾಗಿರುವ ಯೋಜನೆ ಸರಿಪಡಿಸುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಉದ್ಘಾಟನೆಯ ದಿನದಿಂದ ಇಂದಿನವರೆಗೂ ಹೊಸಕೊಪ್ಪ, ಸಂತೊಳ್ಳಿ ಗ್ರಾಮಗಳಿಗೆ ಒಂದು ಹನಿ ನೀರು ಬಂದಿಲ್ಲ. ಕುಡಿಯಲು ನೀರು, ಜಾನುವಾರಿಗೆ ನೀರಿಲ್ಲದೇ ಕೊಳವೆ ಬಾವಿ ಕೊರೆಸುವುದು ಅನಿವಾರ್ಯವಾಗಿದೆ’ ಎನ್ನುತ್ತಾರೆ ಸ್ಥಳೀಯರು.

‘ದಾಸನಕೊಪ್ಪದ ಜನರಿಗೆ ಮಾತ್ರ ನೀರಿನ ಭಾಗ್ಯ ದೊರೆತಿದೆ. ಬೆಳ್ಳನಕೇರಿ, ಕುಪ್ಪಗಡ್ಡೆ, ದನಗನಹಳ್ಳಿ ಭಾಗದ ಜನರು ಮೂರ್ನಾಲ್ಕು ದಿನಗಳಿಗೊಮ್ಮೆ ನೀರು ಪಡೆಯುತ್ತಿದ್ದಾರೆ. ಕಾಳಂಗಿ ಭಾಗಕ್ಕೆ ಕೆಲವಷ್ಟು ದಿನ ನೀರು ಸಿಕ್ಕಿದೆ. ಇಷ್ಟು ವರ್ಷ ಸಿಗದ ನೀರು, ಇನ್ನು ಸಿಗುತ್ತದೆಯೆಂಬ ವಿಶ್ವಾಸ ನಮಗಿಲ್ಲ. ಕಾದು ಬೇಸರವಾಗಿದೆ’ ಎನ್ನುತ್ತಾರೆ ಸಂತೊಳ್ಳಿಯ ಮಂಜುನಾಥ ಗೌಡ.

ಕೃಷಿ ಬೆಳೆ ಉಳಿಸಿಕೊಳ್ಳಲು ಹಲವಾರು ರೈತರು, ಈಗಾಗಲೇ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದಾರೆ. ಕೊಳವೆ ಬಾವಿ ತೆರೆದಲ್ಲೆಲ್ಲ ನೀರು ಬರುವುದಿಲ್ಲ. ಯಂತ್ರದ ಮಾಲೀಕರಿಗೆ ದುಡ್ಡಾಗುತ್ತಿದೆ. ರೈತರು ಕೊಳವೆ ಬಾವಿಗಾಗಿ ಕೃಷಿ ಆದಾಯವನ್ನು ಖರ್ಚು ಮಾಡುತ್ತಿದ್ದಾರೆ. ನೀರು ಸಿಕ್ಕರೆ ನಮ್ಮ ಪುಣ್ಯ’ ಎಂದು ಅವರು ಬೇಸರದಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT