ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮೂಲವಿಲ್ಲದೇ ನೀರಿನ ಯೋಜನೆ ಅನುಷ್ಠಾನ !

ಯಲ್ಲಾಪುರ ಪಟ್ಟಣದಲ್ಲಿ ತಪ್ಪನ ಕುಡಿಯುವ ನೀರಿನ ಗೋಳು
Last Updated 12 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಯಲ್ಲಾಪುರ: ಒಂದೂವರೆ ದಶಕದಲ್ಲಿ ಹಲವಾರು ಕುಡಿಯುವ ನೀರಿನ ಯೋಜನೆಗಳು ಬಂದು, ಕೋಟ್ಯಂತರ ರೂಪಾಯಿ ವೆಚ್ಚವಾಗಿದ್ದರೂ, ಪಟ್ಟಣದ ಜನರಿಗೆ ಮಾತ್ರ ನೀರಿಗಾಗಿ ಪರದಾಡುವ ಗೋಳು ತಪ್ಪಿಲ್ಲ. ಮೂರು ದಿನಕ್ಕೊಮ್ಮೆ ನೀರಿಗಾಗಿ ಕಾಯುವ ಸಂದರ್ಭ ಇಂದಿಗೂ ಮುಂದುವರಿದಿದೆ.

ಬೆಳೆಯುತ್ತಿರುವ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವುದೇ ಪಟ್ಟಣ ಪಂಚಾಯ್ತಿಗೆ ಸವಾಲಾಗಿದೆ. ವಿವಿಧೆಡೆಗಳಲ್ಲಿರುವ 55 ಕೊಳವೆಬಾವಿಗಳೇ ಪ್ರಸ್ತುತ ಜಲಮೂಲಗಳಾಗಿವೆ.

ದಿವಂಗತ ಅನಂತಕುಮಾರ್ ನಗರಾಭಿವೃದ್ಧಿ ಸಚಿವರಾಗಿದ್ದಾಗ, ವಿಶ್ವೇಶ್ವರ ಹೆಗಡೆ ಕಾಗೇರಿ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಸಂದರ್ಭದಲ್ಲಿ ಬೇಡ್ತಿ ನದಿಗೆ ಕಿಂಡಿ ಆಣೆಕಟ್ಟು ನಿರ್ಮಿಸಿ ನೀರು ಪೂರೈಕೆಗಾಗಿ ₹ 13 ಕೋಟಿ ಮಂಜೂರು ಮಾಡಿತ್ತು. 2004ರಲ್ಲಿ ಆರಂಭವಾಗಿ ಕುಂಟುತ್ತ ಸಾಗಿದ ಯೋಜನೆ, ಪಟ್ಟಣದ ಎಲ್ಲೆಡೆ ಪೈಪ್‌ಲೈನ್ ಹಾಕಿ ಪೂರ್ಣಗೊಂಡಿದ್ದು 2011ರ ವೇಳೆಗೆ. ಆಗ ಯೋಜನೆಯ ವೆಚ್ಚ ₹ 23 ಕೋಟಿ ತಲುಪಿತ್ತು. ಐದು ವರ್ಷ ನೀರು ಪೂರೈಕೆ ಮಾಡಿದ ಯೋಜನೆ, ಬೇಡ್ತಿ ನೀರು ಕುಡಿಯುವ ಯೋಗ್ಯವಿಲ್ಲವೆಂಬ ಕೂಗು, ಸೇತುವೆಯಲ್ಲಿ ನೀರಿನ ಹರಿವನ್ನು ತಡೆಯಲಾಗದ ಪರಿಣಾಮ ಸಮರ್ಪಕ ನೀರು ಪೂರೈಕೆಗೆ ಸಾಕಷ್ಟು ನೀರು ಲಭ್ಯವಾಗಲಿಲ್ಲ. ನೀರು ಪೂರೈಕೆಗೆ ಅಗತ್ಯವಾದ ವಿದ್ಯುತ್ ಲೈನ್‌ಗಳ ಮೇಲೆ ಮರಗಳು ಬೀಳುವುದರಿಂದ ಪದೇ ಪದೇ ವಿದ್ಯುತ್ ವ್ಯತ್ಯಯವಾಗತೊಡಗಿತ್ತು. ಪರಿಣಾಮ ಕಳೆದ ಮೂರು ವರ್ಷಗಳಿಂದ ಒಂದು ತೊಟ್ಟು ನೀರು ಪಟ್ಟಣಕ್ಕೆ ಪೂರೈಕೆಯಾಗಿಲ್ಲ. ಹಾಳಾಗಿರುವ ಜಾಕ್‌ವೆಲ್‌, ಕಿಂಡಿ ಅಣೆಕಟ್ಟಿನಲ್ಲಿ ತುಂಬಿರುವ ಪ್ರವಾಹದ ತ್ಯಾಜ್ಯಗಳು ಇವೆಲ್ಲವೂ ಉಪಯೋಗಕ್ಕೆ ಬಾರದಂತಾಗಿವೆ.

ಬೇಡ್ತಿ ಅಣೆಕಟ್ಟು ದುರಸ್ತಿಗೆ ಕೋಟ್ಯಂತರ ರೂಪಾಯಿ ಹಣ ಬೇಕು. ಬೇಡ್ತಿ ನೀರನ್ನು ಬಳಸುವ ಮನಃಸ್ಥಿತಿ ಜನರಿಗಿಲ್ಲ. ಹೀಗಾಗಿ ಬದಲಿ ಕುಡಿಯುವ ನೀರಿನ ಯೋಜನೆ ಬೇಕು ಎಂಬುದು ಸಾರ್ವಜನಿಕರ ಆಗ್ರಹ.

ನೀರಿನ ಮೂಲವಿಲ್ಲದೇ 24X7 ನೀರು ಪೂರೈಕೆ ಯೋಜನೆ:

ನೀರಿನ ಮೂಲವಿಲ್ಲದೇ 24 ಗಂಟೆ ನೀರು ಪೂರೈಕೆಗಾಗಿ ಸುಮಾರು ₹ 8 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿ ಪಟ್ಟಣದಲ್ಲಿ ಪೈಪ್‌ಲೈನ್ ಅಳವಡಿಸಲಾಗಿದೆ. ಎಲ್ಲ ಕಡೆ ರಸ್ತೆ ಅಗೆದು ಪೈಪ್ ಹಾಕಿರುವುದು ಬಿಟ್ಟರೆ ನೀರು ಪೂರೈಕೆ ಸರಿಯಾಗಿಲ್ಲ. ಈಗಲೂ ಮೂರು ದಿನಕ್ಕೊಮ್ಮೆ ಸಾರ್ವಜನಿಕರು ನೀರು ಪಡೆಯುತ್ತಿದ್ದಾರೆ. ಬೇಡ್ತಿ ಕುಡಿಯುವ ನೀರಿನ ಯೋಜನೆಗೆ ಕೊನೆಯ ಮೊಳೆ ಹೊಡೆಯುವುದೊಂದೆ ಬಾಕಿ ಇರುವ ಕಾರಣಕ್ಕೆ ತಟ್ಟಿಹಳ್ಳ ಡ್ಯಾಂನಿಂದ ನೀರು ತರುವ ಯೋಜನೆ ರೂಪಿಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT