ಆರೋಗ್ಯ ತಪಾಸಣೆ ಹೆಸರಿನಲ್ಲಿ ವಂಚನೆ

7
ಗ್ರಾಮೀಣ ಜನರಿಂದ ಹಣ ದೋಚಿದ ನಕಲಿ ತಪಾಸಕರ ತಂಡ

ಆರೋಗ್ಯ ತಪಾಸಣೆ ಹೆಸರಿನಲ್ಲಿ ವಂಚನೆ

Published:
Updated:
Deccan Herald

ಶಿರಸಿ: ಕೇವಲ ನೂರು ರೂಪಾಯಿಯಲ್ಲಿ ಆರೋಗ್ಯ ಸಂಬಂಧಿ 36 ರೀತಿಯ ತಪಾಸಣೆ ಮಾಡುವುದಾಗಿ ಜನರನ್ನು ನಂಬಿಸಿದ ಸಂಸ್ಥೆಯೊಂದು, ವಿವಿಧೆಡೆ ಆರೋಗ್ಯ ಶಿಬಿರದ ಹೆಸರಿನಲ್ಲಿ ಜನರನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

₹ 4000ದಿಂದ ₹ 6000 ವೆಚ್ಚ ತಗಲುವ ಆರೋಗ್ಯ ತಪಾಸಣೆಯನ್ನು ಕೇವಲ ₹ 100ಕ್ಕೆ ಮಾಡುವುದಾಗಿ ಕರಪತ್ರ ಮುದ್ರಿಸಿ, ಪಂಚಾಯ್ತಿಯ ಸಹಕಾರ ಪಡೆದಂತೆ ನಟಿಸಿರುವ ಸಂಸ್ಥೆ, ತಾಲ್ಲೂಕಿನ ಇಟಗುಳಿ, ಬಿಸಲಕೊಪ್ಪ ಪಂಚಾಯ್ತಿ ವ್ಯಾಪ್ತಿಯಲ್ಲಿ ಶಿಬಿರಗಳನ್ನು ನಡೆಸಿದೆ. ಆರೋಗ್ಯ ಇಲಾಖೆಯ ಗಮನಕ್ಕಿಲ್ಲದೇ ಈ ಶಿಬಿರಗಳು ನಡೆದಿವೆ. ಇಸಳೂರು ಪಂಚಾಯ್ತಿಯಲ್ಲಿ ಶಿಬಿರ ನಡೆಸುವುದಾಗಿ ಬಂದಿದ್ದ, ಈ ಸಂಸ್ಥೆಗೆ ಸಂಬಂಧಿಸಿದ ವ್ಯಕ್ತಿಯನ್ನು ಅಲ್ಲಿನ ಪ್ರಮುಖರು ವಾಪಸ್ ಕಳುಹಿಸಿದ್ದಾರೆ.

ಕಾನಗೋಡ ಪಂಚಾಯ್ತಿಯಲ್ಲಿ ಗುರುವಾರ ಶಿಬಿರ ನಡೆಸಲು ಕರಪತ್ರ ಮುದ್ರಿಸಲಾಗಿತ್ತು. ನಕಲಿ ಆರೋಗ್ಯ ತಪಾಸಕರನ್ನು ಹಿಡಿಯಲು ಸ್ಥಳೀಯರು ಸಿದ್ಧವಾಗಿರುವ ಸಂಗತಿಯನ್ನು ತಿಳಿದ, ಸಂಸ್ಥೆಯವರು ಶಿಬಿರಕ್ಕೆ ಗೈರಾಗಿದ್ದರು. ಕರಪತ್ರದಲ್ಲಿರುವ ನೀಡಿರುವ ಮೊಬೈಲ್‌ ಸಂಖ್ಯೆಗೆ ಸ್ಥಳೀಯರು ಕರೆ ಮಾಡಿ ವಿಚಾರಿಸಿದಾಗ, ‘ಶಿಬಿರ ನಡೆಸಲು ಅಧಿಕೃತ ಅನುಮತಿ ಸಿಗದ ಕಾರಣ ರದ್ದಾಗಿದೆ’ ಎಂದು ಹೇಳಿ ತಪ್ಪಿಸಿಕೊಂಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿನಾಯಕ ಭಟ್ ಅವರು, ‘2–3 ಕಡೆಗಳಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಸಿರುವ ಮಾಹಿತಿ ನಮಗೆ ಅಧಿಕೃತವಾಗಿ ಬಂದಿರಲಿಲ್ಲ. ಸಾರ್ವಜನಿಕರಿಂದ ಬಂದ ದೂರನ್ನು ಆಧರಿಸಿ, ಪರಿಶೀಲಿಸಿದಾಗ ಇದು ನಕಲಿ ತಪಾಸಕರ ಸಂಸ್ಥೆ ಎಂಬುದು ಗಮನಕ್ಕೆ ಬಂದಿದೆ. ಬಿಸಲಕೊಪ್ಪದಲ್ಲಿ ‘ಹ್ಯೂಮನ್ ಕೇರ್ ಮಿಷನ್’ ಹೆಸರಿನಲ್ಲಿ ಶಿಬಿರ ನಡೆಸಿದ್ದರೆ, ಕಾನಗೋಡಿನ ಶಿಬಿರಕ್ಕೆ ಆಯೋಜಕರ ಹೆಸರನ್ನು ‘ವಿ ಫಾರ್ ಯು’ ಎಂದು ಹಾಕಲಾಗಿತ್ತು. ಶಿಬಿರದ ಸಂಘಟಕ ಹುಬ್ಬಳ್ಳಿಯ ಸತೀಶ ತಿವಾರಿ ಎಂದು ಪತ್ತೆ ಹಚ್ಚಲಾಗಿದೆ’ ಎಂದರು.

‘ಊರಿನ ಗಣ್ಯ ವ್ಯಕ್ತಿಗಳನ್ನು ಶಿಬಿರದ ಉದ್ಘಾಟನೆ ಆಹ್ವಾನಿಸುತ್ತಿದ್ದ ಇವರು, ಸಾವಿರಾರು ರೂಪಾಯಿ ಸಂಗ್ರಹಿಸಿಕೊಂಡು ಪರಾರಿಯಾಗುತ್ತಿದ್ದರು. ಕೇವಲ ₹ 100ಕ್ಕೆ ಎಲ್ಲ ರೀತಿಯ ತಪಾಸಣೆ ಸಿಗುತ್ತದೆಯೆಂಬ ಖುಷಿಗೆ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಪರೀಕ್ಷಾ ವರದಿಯ ಮಾದರಿಯು ಇವರು ನಕಲಿ ತಪಾಸಕರು ಎಂಬುದಕ್ಕೆ ಸಾಕ್ಷಿಯಾಗಿದೆ. ಈ ತಂಡ ಹಾವೇರಿ, ಹಾನಗಲ್ ಭಾಗದಲ್ಲಿಯೂ ಅನೇಕ ಶಿಬಿರಗಳನ್ನು ನಡೆಸಿ, ಹಣ ದೋಚಿದೆ ಎಂಬ ಮಾಹಿತಿ ಲಭ್ಯವಾಗಿದೆ’ ಎಂದು ಅವರು ತಿಳಿಸಿದರು.

’ನಾಲ್ಕಾರು ದಿನಗಳ ಹಿಂದೆ ನಮ್ಮ ಪಂಚಾಯ್ತಿಗೆ ಬಂದ ಕೆಲವರು, ಆರೋಗ್ಯ ಶಿಬಿರ ನಡೆಸುವುದಾಗಿ ತಿಳಿಸಿದರು. ಅವರ ಬಳಿ, ಮಾಹಿತಿ ಕೇಳಿದಾಗ ಸರಿಯಾದ ಉತ್ತರ ಸಿಗಲಿಲ್ಲ. ಹೀಗಾಗಿ ಅನುಮಾನ ಬಂದು ನಾವು ಅವರನ್ನು ವಾಪಸ್ ಕಳುಹಿಸಿದೆವು’ ಎನ್ನುತ್ತಾರೆ ಇಸಳೂರು ಪಂಚಾಯ್ತಿ ಸದಸ್ಯ ಆರ್.ವಿ.ಹೆಗಡೆ.

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !