ಸೋಮವಾರ, ಮೇ 23, 2022
30 °C
ಸೌಹಾರ್ದ ಸಮಾವೇಶ

ಕುಟುಂಬ ಸಂಸ್ಕಾರ ಸೌಹಾರ್ದತೆಯ ಬೇರು: ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಮನೆಯೊಳಗಿನ ಸಂಬಂಧ, ಸಹಬಾಳ್ವೆಯ ಸೌಹಾರ್ದ ವಾತಾವರಣ ಸಮಾಜಕ್ಕೂ ಅನ್ವಯಿಸಬೇಕು. ಧರ್ಮ ಬೇಧವಿಲ್ಲದೆ ಒಗ್ಗೂಡಿ ಬಾಳುವುದು ಇಂದಿನ ಅಗತ್ಯ ಎಂದು ಮುಂಡರಗಿಯ ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಅಂಬೇಡ್ಕರ ಭವನದಲ್ಲಿ ಮಂಗಳವಾರ ಹಿಂದುಳಿದ ಹಿಂದುಗಳ ಜಾಗೃತ ವೇದಿಕೆ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಸೌಹಾರ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಸೌಹಾರ್ದತೆ ಎಲ್ಲರಿಗೂ ಅಗತ್ಯವಿದೆ. ಕುಟುಂಬವೇ ಸೌಹಾರ್ದತೆಗೆ ಬೇರು. ಸಮಾಜವನ್ನೇ ಒಂದು ಕುಟುಂಬ ಎಂದು ಭಾವಿಸುವವರು ಸೌಹಾರ್ದಯುತವಾಗಿ ಬಾಳುವರು ಎಂದರು.

ಕುಟುಂಬ ಧರ್ಮ ಬೇಕೆ ಹೊರತು ಧರ್ಮ ರಾಜಕಾರಣ, ಮತೀಯ ಧರ್ಮದ ಬೋಧನೆಯ ಅಗತ್ಯವಿಲ್ಲ. ಇಂದು ಮನೆಗಳಲ್ಲೂ ಸಂಸ್ಕೃತಿಯ ವಿಚಾರಕ್ಕಿಂತ ಸಂಘರ್ಷದ ವಿಚಾರಧಾರೆ ಹೆಚ್ಚುತ್ತಿದೆ. ರಾಜಕಾರಣ, ಧರ್ಮ ಸಂಘರ್ಷದ ಚರ್ಚೆ ಹೆಚ್ಚುತ್ತಿದೆ. ಇದು ಸಮಾಜದಲ್ಲಿ ಒಡಕು ಮೂಡಲು ಕಾರಣವಾಗಿದೆ ಎಂದರು.

ಸಮಾಜದಲ್ಲಿ ಕೆಳಸ್ತರದ ಜನರನ್ನು ಸ್ವತಂತ್ರರಾಗಿ ಬದುಕಲು ಬಿಡಬೇಕಿದೆ. ಜಾತಿ, ಧರ್ಮಗಳು ತಿಕ್ಕಾಟ ನಡೆಸದೆ ಸಹೋದರತ್ವದ ಭಾವನೆಯೊಂದಿಗೆ ಜೀವನ ಸಾಗಿಸಬೇಕು. ದೇಶದ ಕಾನೂನಿಗೆ ಪ್ರತಿಯೊಬ್ಬರೂ ತಲೆಬಾಗಬೇಕು ಎಂದರು.

ಗ್ರೀನ್ ಇಂಡಿಯಾ ಸಂಸ್ಥೆಯ ಮಹೇಂದ್ರಕುಮಾರ್ ಮಾತನಾಡಿ, ನಾವೆಲ್ಲ ಒಂದು ಎಂದು ಗಟ್ಟಿಧ್ವನಿ ಎತ್ತುವುದೇ ಈಚೆಗೆ ಕಷ್ಟವಾಗುತ್ತಿದೆ. ಭ್ರಾತೃತ್ವ, ಸಹಬಾಳ್ವೆ, ಸಮಾನತೆ ಈಗಿನ ಸ್ಥಿತಿಯಲ್ಲಿ ಅತ್ಯಗತ್ಯವಾಗಿದೆ ಎಂದರು. ಪತ್ರಕರ್ತ ಕನ್ನೇಶ್ ಕೋಲಸಿರ್ಸಿ ಮಾತನಾಡಿ, ಸಮಾಜದಲ್ಲಿ ಅಶಾಂತಿ ವಾತಾವರಣ ಮೂಡದಂತೆ ನಿಯಂತ್ರಿಸುವ ಸರ್ಕಾರ ನಿಷ್ಕ್ರಿಯವಾದಾಗ ಸೌಹಾರ್ದ ಸಮಾವೇಶದ ಅಗತ್ಯತೆ ಮುನ್ನೆಲೆಗೆ ಬಂದಿದೆ ಎಂದರು. ಮಂಜುನಾಥ ನಾಯ್ಕ ಸ್ವಾಗತಿಸಿದರು. ಡಾ.ಮೆಹಬೂಬ ಅಲಿ ಕಾರ್ಯಕ್ರಮ ನಿರೂಪಣೆ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು