ಭಾನುವಾರ, ಮೇ 16, 2021
28 °C
ಸಾರಿಗೆ ಇಲಾಖೆ ಸಿಬ್ಬಂದಿಯ ಮನೆ ಮಂದಿಯಿಂದ ಪ್ರದರ್ಶನ: ಮನವಿ ಸಲ್ಲಿಕೆ

ನೌಕರರ ಮುಷ್ಕರಕ್ಕೆ ಕುಟುಂಬದ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ನಡೆಸುತ್ತಿರುವ ಮುಷ್ಕರವು ಸೋಮವಾರ ಆರನೇ ದಿನ ಪೂರೈಸಿತು. ಈ ನಡುವೆ, ಕೆಲವು ಸಿಬ್ಬಂದಿ ಕರ್ತವ್ಯಕ್ಕೆ ಮರಳಿದ್ದು, ಶಿರಸಿ ವಿಭಾಗದಲ್ಲಿ 33 ಬಸ್‌ಗಳು ಸಂಚರಿಸಿದವು.

ಯುಗಾದಿ ಸಂದರ್ಭದಲ್ಲಿ ಹೆಚ್ಚಿನ ಬಸ್‌ಗಳ ಸಂಚಾರ ಪುನಃ ಆರಂಭವಾಗುವ ನಿರೀಕ್ಷೆಯಿತ್ತು. ಈ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳೂ ಸಿದ್ಧತೆ ನಡೆಸಿಕೊಂಡಿದ್ದರು. ಆದರೆ, ಸೋಮವಾರವೂ ನೌಕರರು ಮುಷ್ಕರ ಮುಂದುವರಿಸಿದರು. ಜಿಲ್ಲೆಯಲ್ಲಿ ಭಾನುವಾರ 29 ಬಸ್‌ಗಳು ಸಂಚರಿಸಿದ್ದವು. ಮತ್ತಷ್ಟು ಬಸ್‌ಗಳ ಸಂಚಾರ ಆರಂಭವಾಗಬಹುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದರು.

ಅತ್ತ ಸಾರಿಗೆ ಇಲಾಖೆ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿ ಮುಷ್ಕರದಲ್ಲಿ ನಿರತರಾಗಿದ್ದರೆ, ಇತ್ತ ಅವರ ಕುಟುಂಬದ ಸದಸ್ಯರು ಬೆಂಬಲ ಸೂಚಿಸಿದರು. ನಗರದ ಜಿಲ್ಲಾ ರಂಗಮಂದಿರದ ಬಳಿ ಸೇರಿ ಚರ್ಚಿಸಿ, ಜಿಲ್ಲಾಧಿಕಾರಿ ಕಚೇರಿ ಸಮೀಪ ಪ್ರದರ್ಶನ ಹಮ್ಮಿಕೊಂಡರು. ಮಕ್ಕಳು, ಗೃಹಿಣಿಯರು ಹಾಜರಿದ್ದರು. ಮಕ್ಕಳು ಊಟದ ಖಾಲಿ ತಟ್ಟೆ ಮತ್ತು ಲೋಟಗಳನ್ನು ಹಿಡಿದುಕೊಂಡು ಭಾಗವಹಿಸಿದ್ದರು.

ಸಾರಿಗೆ ಇಲಾಖೆ ನೌಕರರನ್ನು ಸರ್ಕಾರಿ ನೌಕರರು ಎಂದು ಘೋಷಿಸಬೇಕು. ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಬೇಕು ಎಂಬುದೂ ಸೇರಿದಂತೆ ಲಿಖಿತವಾಗಿ ನೀಡಿದ ಭರವಸೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರವನ್ನು ರವಾನಿಸಿದರು.

ನೌಕರರ ಕುಟುಂಬದ ಸದಸ್ಯರ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮನವಿಯನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ತಿಳಿಸಿದರು. ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಇದ್ದರು.

ರಜಾ ದಿನಗಳಲ್ಲಿ ಸಮಸ್ಯೆ

ಈ ವಾರ ಸಾಲು ಸಾಲು ರಜೆಗಳಿದ್ದು, ಊರುಗಳಿಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದವರಿಗೆ ಬಹಳ ಸಮಸ್ಯೆ ಎದುರಾಯಿತು. ಏ.11ರಂದು ಭಾನುವಾರವಾಗಿದ್ದು, 13ರಂದು ಯುಗಾದಿ ಮತ್ತು 14ರಂದು ಅಂಬೇಡ್ಕರ್ ಜಯಂತಿಯಿದೆ. ಹೀಗಾಗಿ 12ರಂದು ಒಂದು ದಿನ ರಜೆ ಹಾಕಿಕೊಂಡು ಒಟ್ಟು ನಾಲ್ಕು ದಿನಗಳ ರಜೆಯಲ್ಲಿ ಊರಿಗೆ, ಪ್ರವಾಸ ಹೋಗಲು ಅವಕಾಶವಿತ್ತು.

ಸಾರಿಗೆ ಇಲಾಖೆ ನೌಕರರ ಮುಷ್ಕರದಿಂದಾಗಿ ರಾಜ್ಯದಾದ್ಯಂತ ಬಸ್‌ಗಳ ಸಂಚಾರ ಅತ್ಯಂತ ವಿರಳವಾಗಿದೆ. ಅಲ್ಲದೇ, ಕೋವಿಡ್ ಪ್ರಕರಣಗಳೂ ಭಾರಿ ಏರುಮುಖದಲ್ಲಿರುವ ಕಾರಣ, ಪ್ರಯಾಣಿಸುವ ಸಿದ್ಧತೆಯಲ್ಲಿದ್ದ ಹಲವರು ಈ ಬಾರಿ ಹಿಂದೇಟು ಹಾಕಿದ್ದಾರೆ. ತಾವು ಇರುವಲ್ಲೇ ಹೊಸ ವರ್ಷದ ಆಚರಣೆ ಮತ್ತು ರಜಾದಿನಗಳನ್ನು ಕಳೆಯಲು ನಿರ್ಧರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.