ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಕೃಷಿ ಹೊಂಡ; ಬೇಡಿಕೆಯಿದ್ದರೂ ಜಾರಿ ಮಾಡಲಾಗದ ಸಂದಿಗ್ಧ

ಜಿಲ್ಲೆಯ ನೂರಾರು ರೈತರಿಗೆ ಅನುಕೂಲವಾದ ಯೋಜನೆ l ತೋಟಗಾರಿಕೆ ಇಲಾಖೆಯಿಂದ ಮುಂದುವರಿಕೆ; ಕೃಷಿ ಇಲಾಖೆಯಿಂದ ಸ್ಥಗಿತ
Last Updated 21 ನವೆಂಬರ್ 2021, 15:49 IST
ಅಕ್ಷರ ಗಾತ್ರ

ಕಾರವಾರ: ಬೇಸಿಗೆ ಕಾಲದಲ್ಲಿ ಕೃಷಿಗೆ ನೀರಿನ ಕೊರತೆ ಆಗದಿರಲಿ ಎಂಬ ಉದ್ದೇಶದಿಂದ ಕೃಷಿ ಹೊಂಡ ಯೋಜನೆಯನ್ನು 2017ರಿಂದ 2019ರ ಅವಧಿಯಲ್ಲಿ ಜಾರಿ ಮಾಡಲಾಗಿತ್ತು. ನಂತರ ಕೃಷಿ ಇಲಾಖೆಯಿಂದ ಸ್ಥಗಿತಗೊಳಿಸಿದ್ದು, ತೋಟಗಾರಿಕೆ ಇಲಾಖೆ ಮುಂದುವರಿಸಿದೆ.

ಯೋಜನೆಯಿಂದ ನೂರಾರು ರೈತರಿಗೆ ಅನುಕೂಲವಾಗಿದೆ. ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕೃಷಿ ಜಮೀನುಗಳಿಗೆ ಬಯಲು ಸೀಮೆಯ ಜಿಲ್ಲೆಗಳಷ್ಟು ಸಮಸ್ಯೆ ಇರುವುದಿಲ್ಲ. ಆದರೆ, ಕರಾವಳಿಯಲ್ಲಿ ಉಪ್ಪು ನೀರಿನ ಹರಿವು ಉಂಟಾಗಿ ಜಮೀನು ಹಾಳಾಗುತ್ತವೆ. ಅಂಥ ಸಂದರ್ಭದಲ್ಲಿ ಕೃಷಿ ಹೊಂಡದ ನೀರು ಬಳಕೆಗೆ ಸಹಕಾರಿಯಾಗುತ್ತದೆ.

ಶಿರಸಿ:ಸಣ್ಣ ಹಿಡುವಳಿದಾರರೇ ಹೆಚ್ಚಿರುವ ತಾಲ್ಲೂಕಿನಲ್ಲಿ ಕೃಷಿ ಹೊಂಡ ಯೋಜನೆಯ ಉಪಯೋಗ ಪಡೆದ ರೈತರ ಸಂಖ್ಯೆ ಕಡಿಮೆ ಇದೆ.ಕೃಷಿ ಇಲಾಖೆಯಿಂದ ಯೋಜನೆ ಸ್ಥಗಿತ ಗೊಂಡು 2 ವರ್ಷ ಕಳೆದಿವೆ. 2017–18ರಲ್ಲಿ 70, 2018–19ರಲ್ಲಿ 28 ಹೊಂಡಗಳನ್ನು ನಿರ್ಮಿಸಲಾಗಿತ್ತು. ಈಗ ತೋಟಗಾರಿಕಾ ಇಲಾಖೆಯಿಂದ ಮಾತ್ರ ಹೊಂಡ ನಿರ್ಮಿಸಲು ಅವಕಾಶವಿದೆ.

ತೋಟಗಾರಿಕಾ ಇಲಾಖೆಗೆ ಪ್ರತಿ ವರ್ಷ ಬೆರಳೆಣಿಕೆಯಷ್ಟು ಸಂಖ್ಯೆಯ ಹೊಂಡ ನಿರ್ಮಿಸಲು ಗುರಿ ನೀಡಲಾಗುತ್ತಿದೆ. ಫಲಾನುಭವಿ ರೈತ ಕನಿಷ್ಠ ಎರಡೂವರೆ ಎಕರೆ ತೋಟಗಾರಿಕಾ ಭೂಮಿ ಹೊಂದಿರಬೇಕು ಎಂಬ ಗುರಿ ನೀಡಲಾಗುತ್ತದೆ. 20x20 ಅಥವಾ
40x40 ಮೀಟರ್ ಅಳತೆಯ ಹೊಂಡ ನಿರ್ಮಾಣ ಕಡ್ಡಾಯ. ಈ ನಿಯಮದಿಂದ ತೊಡಕಾಗಿದೆ.‘ಕನಿಷ್ಠ 10 ಅಡಿ ಅಳತೆಯಿಂದ 30 ಅಡಿ ಅಳತೆ ಯವರೆಗೂ ನಿಗದಿತ ಅಳತೆಗೆ ಹೊಂಡ ನಿರ್ಮಿಸಿದರೂ ಸಹಾಯಧನ ಸಿಗುತ್ತಿತ್ತು. ಆದರೆ, ಈಗ ಅದು ತಪ್ಪಿದೆ’ ಎಂದು ಬೇಸರಿಸುತ್ತಾರೆ ರೈತ ಗಂಗಾಧರ ಹೆಗಡೆ.

ಹೊನ್ನಾವರ:ಕಳೆದ ವರ್ಷ ಕೃಷಿ ಹೊಂಡ ನಿರ್ಮಾಣದ ಯಶೋಗಾಥೆಗೆ ಪ್ರಸ್ತುತ ವರ್ಷದ ಹಣಕಾಸಿನ ಕೊರತೆ ತಡೆಯೊಡ್ಡಿದೆ. ತೋಟಗಾರಿಕಾ ಇಲಾಖೆ ಯಿಂದ ಕಳೆದ ಸಾಲಿನಲ್ಲಿ ರಾಜ್ಯ ವಲಯ ಯೋಜನೆಯಡಿ ಎರಡು ಹಾಗೂ ರಾಷ್ಟ್ರೀಯ ತೋಟಗಾರಿಕಾ ಅಭಿಯಾನ
ದಲ್ಲಿ 10 ಕೆರೆಗಳನ್ನು ನಿರ್ಮಿಸಲಾಗಿತ್ತು.

ಹೊದ್ಕೆ ಶಿರೂರು ಗ್ರಾಮವೊಂದರಲ್ಲೇ ಒಟ್ಟು ಏಳು ಕೆರೆಗಳನ್ನು ನಿರ್ಮಿಸಲಾಗಿದೆ. ಉಳಿದಂತೆ ನವಿಲಗೋಣ ಮತ್ತು ಕೆಕ್ಕಾರಿನಲ್ಲಿ ತಲಾ ಎರಡು ಹಾಗೂ ಕಡ್ನೀರಿನಲ್ಲಿ ಒಂದು ಕೃಷಿ ಹೊಂಡಗಳು ನಿರ್ಮಾಣವಾಗಿವೆ. ಈ ವರ್ಷ ತಾಲ್ಲೂಕಿನಲ್ಲಿ ಕೇವಲ ಒಂದು ಕೃಷಿ ಹೊಂಡ ರಚನೆಯಾಗಿದೆ. ರೈತರಿಂದ ಬೇಡಿಕೆ ಇದ್ದರೂ ಸರ್ಕಾರದ ಸಹಾಯಧನ ಮಾತ್ರ ಮರೀಚಿಕೆಯಾಗಿದೆ.

‘ತೋಟಗಾರಿಕಾ ಇಲಾಖೆ ನೀಡಿದ ₹3 ಲಕ್ಷ ಸಹಾಯಧನದೊಟ್ಟಿಗೆ ಅಷ್ಟೇ ಸ್ವಂತದ ಹಣ ವಿನಿಯೋಗಿಸಿ ಕೃಷಿಹೊಂಡ ನಿರ್ಮಿಸಿದ್ದೇನೆ ಪ್ರಸ್ತುತ ಕೃಷಿ ಹೊಂಡದಿಂದ ಅಡಿಕೆ ತೋಟಕ್ಕೆ ನೀರುಣಿಸುತ್ತಿರುವ ಜೊತೆಗೆ ಹೊಂಡದಲ್ಲಿ ಮೀನು ಸಲಹುತ್ತಿದ್ದೇನೆ’ ಎನ್ನುತ್ತಾರೆ ಕೆಕ್ಕಾರದ ಕೃಷಿಕ ನಾಗಪ್ಪ ಕುಪ್ಪು ಗೌಡ.

ಅಂಕೋಲಾ:ತಾಲ್ಲೂಕಿನ ಬಹುತೇಕ ರೈತರು ಚಿಕ್ಕ ಭೂ ಹಿಡುವಳಿ ಹೊಂದಿದ್ದಾರೆ. ಗಂಗಾವಳಿ ನದಿ ತೀರದ ಪ್ರದೇಶದಲ್ಲಿ ಹೆಚ್ಚಿನ ಕೃಷಿ ನಡೆಯುತ್ತದೆ. ಹೀಗಾಗಿ ಕೃಷಿ ಹೊಂಡ ಯೋಜನೆ ಗಂಭೀರವಾಗಿ ಅನುಷ್ಠಾನ ಗೊಂಡಿಲ್ಲ. ಈ ಹಿಂದೆ ಕೃಷಿ ಭಾಗ್ಯ ಯೋಜನೆಯಡಿ ರೈತರು ಯಂತ್ರಗಳನ್ನು ಉಪಯೋಗಿಸಿ ಕೃಷಿ ಹೊಂಡಗಳನ್ನು ನಿರ್ಮಿಸಬಹುದಾಗಿತ್ತು. ಈ ಯೋಜನೆಯಡಿ ತಾಲ್ಲೂಕಿನ ಹಳವಳ್ಳಿ, ಡೊಂಗ್ರಿ, ಹಿಲ್ಲೂರು, ಮತ್ತು ಅಚವೆ ಭಾಗದ ರೈತರು ಪ್ರಯೋಜನ ಪಡೆದುಕೊಂಡಿದ್ದರು. ಎರಡು ವರ್ಷಗಳಿಂದ ಯೋಜನೆ ಸ್ಥಗಿತ
ಗೊಂಡಿದೆ. ನರೇಗಾ ಮೂಲಕ ಕೃಷಿ ಹೊಂಡ ನಿರ್ಮಿಸಿಕೊಳ್ಳಬಹುದು.

ಕುಮಟಾ:ತಾಲ್ಲೂಕಿನ ಎಲ್ಲ ಹೋಬಳಿಗಳಲ್ಲಿ ಇದುವರೆಗೆ ಒಟ್ಟು 65 ಕೃಷಿ ಹೊಂಡಗಳಿಗೆ ಮಂಜೂರಾತಿ ನೀಡಲಾಗುತ್ತಿದೆ. ಎರಡು ವರ್ಷಗಳಿಂದ ರೈತರಿಗೆ ಕೃಷಿ ಇಲಾಖೆಯಿಂದ ಸಹಾಯ ಧನದಲ್ಲಿ ಕೃಷಿ ಹೊಂಡ ಮಂಜೂರಾತಿ ಯೋಜನೆ ಸ್ಥಗಿತ ಗೊಂಡಿದೆ.

ತಾಲ್ಲೂಕಿನ ಶಿರಗುಂಜಿಯ ಯುವ ರೈತ ವಿಶ್ವನಾಥ ಉಮೇಶ ಭಟ್ಟ ಸುಮಾರು 10 ಲಕ್ಷ ಲೀಟರ್ ನೀರಿನ ಸಾಮರ್ಥ್ಯದ ಕೃಷಿ ಹೊಂಡ ನಿರ್ಮಿಸಿ ಕೊಂಡು ಬೇಸಿಗೆಯಲ್ಲಿ ಕೃಷಿಗೆ ಉಂಟಾಗುತ್ತಿದ್ದ ನೀರಿನ ಬರ ನೀಗಿಸಿಕೊಂಡಿದ್ದಾರೆ.

‘ಫೆಬ್ರುವರಿ ತಿಂಗಳವರೆಗೆ ತೋಟಕ್ಕೆ ಬಾವಿ ನೀರು; ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಕೃಷಿ ಹೊಂಡದ ನೀರು ಬಳಕೆ ಮಾಡಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ನಾಗೂರಿನ ರೈತ ಗಣೇಶ ಸತ್ಯನಾರಾಯಣ ಹೆಗಡೆ ಅವರು ಭತ್ತ ಕೃಷಿ, ತೋಟ, ತರಕಾರಿ ಬೆಳೆಯಲು ಕೃಷಿ ಹೊಂಡದ ನೀರು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಮಾಹಿತಿ ನೀಡಿದ ಸಹಾಯಕ ಕೃಷಿ ನಿರ್ದೇಶಕಿ ರಶ್ಮಿ ಶಹಾಪುರಮಠ, ‘ಇನ್ನು ಕೆಲವು ರೈತರು ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ ಪ್ರಯೋಗ ಕೂಡ ಮಾಡಿ ಲಾಭ ಗಳಿಸಿದ್ದಾರೆ. ಕರಾವಳಿಯಲ್ಲಿ ಬೇಸಿಗೆಯಲ್ಲಿ ನೀರಿನ ಬರ ಉಂಟಾಗುವ ತೋಟಗಳಿಗೆ, ಹಿಂಗಾರಿ ಭತ್ತದ ಬೆಳೆಗೆ ಕೃಷಿ ಹೊಂಡ ಉಪಕಾರಿಯಾಗುತ್ತಿದೆ’ ಎಂದರು.

ಮುಂಡಗೋಡ:ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ರೈತರು ಹೆಚ್ಚಿನ ಒಲವು ತೋರಿಸಿದ್ದರು. ಕೃಷಿ ಹೊಂಡಗಳು ರೈತರಿಗೆ ಉಪಯೋಗ ಆಗಿದ್ದವು. ಇದರಲ್ಲಿಯೂ ಹಣ ದುರ್ಬಳಕೆಯ ದೂರು ಕೇಳಿಬಂದಿತ್ತು. ಹಳೆಯ ಹೊಂಡಗಳಿಗೆ ಪುನಃ ಹಣ ಮಂಜೂರಿ ಮಾಡಿ, ಹೊಸ ಕಾಮಗಾರಿ ಎಂದು ತೋರಿಸುವುದು, ಅಳತೆಯಲ್ಲಿ ವ್ಯತ್ಯಾಸ ಮಾಡುವುದು ಸೇರಿದಂತೆ ಇನ್ನಿತರ ಆರೋಪಗಳಿಂದ ಮುಕ್ತವಾಗಿರಲಿಲ್ಲ. ‘ಕೃಷಿ ಹೊಂಡಗಳು ಇದ್ದರೆ ಬೇಸಾಯಕ್ಕೆ ಅನುಕೂಲವಾಗುತ್ತದೆ. ಆದರೆ,ಕೃಷಿ ಹೊಂಡಗಳ ಮಂಜೂರಿ ಮಾಡಿಸಿಕೊಳ್ಳು ವುದೇ ಕಷ್ಟದ ಕೆಲಸ. ಇಲಾಖೆಯ ಕಚೇರಿಗೆ ಅಲೆದಾಡಿದರೂ ಕೃಷಿ ಹೊಂಡ ಮಂಜೂರಾಗಲಿಲ್ಲ’ ಎಂದು ರೈತ ಪರುಶುರಾಮ ರಾಣಿಗೇರ ಹೇಳಿದರು.

‘ತಾಲ್ಲೂಕಿನಲ್ಲಿ 400ಕ್ಕೂ ಅಧಿಕ ರೈತರು ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಸದ್ಯ ಕೃಷಿ ಇಲಾಖೆಯಡಿ ಈ ಯೋಜನೆ ಸ್ಥಗಿತಗೊಂಡಿದೆ. ನರೇಗಾದಡಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಅವಕಾಶವಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ಹೇಳಿದರು.

*

3 ಮೀ. ಆಳ 20x20 ಮೀ. ಅಳತೆಯ ಹೊಂಡ ನಿರ್ಮಿಸಿ, ತಾಡಪತ್ರಿ ಅಳವಡಿಸಿ ನೀರು ಸಂಗ್ರಹಿಸಿದರೆ ₹75 ಸಾವಿರ, 40x40 ಮೀ. ಅಳತೆಯ ಹೊಂಡಕ್ಕೆ ₹3 ಲಕ್ಷ ಸಹಾಯಧನವಿದೆ.

– ಗಣೇಶ ಹೆಗಡೆ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ, ಶಿರಸಿ

*

ಕೃಷಿ ಇಲಾಖೆಯಿಂದ ಕೃಷಿಹೊಂಡ ಯೋಜನೆ ಸ್ಥಗಿತಗೊಂಡು ಎರಡು ವರ್ಷ ಕಳೆದಿವೆ. ಉದ್ಯೋಗ ಖಾತ್ರಿಯಡಿ ಹೊಂಡ ಅಥವಾ ಬಾವಿ ನಿರ್ಮಿಸಿಕೊಳ್ಳಲು ರೈತರಿಗೆ ಅವಕಾಶವಿದೆ.

– ಮಧುಕರ ನಾಯ್ಕ, ಸಹಾಯಕ ಕೃಷಿ ನಿರ್ದೇಶಕ, ಶಿರಸಿ

*

ಬಾವಿ, ಕೆರೆಗಳ ನಿರ್ಮಾಣಕ್ಕೆ ಜನರ ಬೇಡಿಕೆಯಿದೆ. ನರೇಗಾ ಯೋಜನೆಯಡಿ ಕಳೆದ ಸಾಲಿನಲ್ಲಿ 100 ಬಾವಿಗಳನ್ನು ನಿರ್ಮಿಸಲಾಗಿದೆ. ಈ ವರ್ಷವೂ 100 ಬಾವಿ ನಿರ್ಮಾಣದ ಗುರಿಯಿದೆ.

– ಕೃಷ್ಣಾನಂದ, ಸಹಾಯಕ ನಿರ್ದೇಶಕ, ನರೇಗಾ, ಹೊನ್ನಾವರ ತಾಲ್ಲೂಕು

*

ಕೃಷಿ ಹೊಂಡ ನಿರ್ಮಿಸಲು ಅಂದಾಜು ಒಂದು ಗುಂಟೆ ಜಾಗ ಬೇಕು. ಉದ್ಯೋಗ ಖಾತ್ರಿಯಡಿ ಮಾನವಶ್ರಮ ಬಳಸಬೇಕಿರುವ ಕಾರಣ ರೈತರಿಂದ ಬೇಡಿಕೆ ಬರುತ್ತಿಲ್ಲ.

– ಶ್ರೀಧರ ನಾಯ್ಕ, ಸಹಾಯಕ ನಿರ್ದೇಶಕ ಕೃಷಿ ಇಲಾಖೆ, ಅಂಕೋಲಾ.

ಪ್ರಜಾವಾಣಿ ತಂಡ: ಸದಾಶಿವ ಎಂ.ಎಸ್, ಗಣಪತಿ ಹೆಗಡೆ, ಎಂ.ಜಿ.ಹೆಗಡೆ, ಮಾರುತಿ ಹರಿಕಂತ್ರ, ಎಂ.ಜಿ.ನಾಯ್ಕ, ಶಾಂತೇಶ ಬೆನಕನಕೊಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT