ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಪಾರಂಪರಿಕ ಬೇಸಾಯಕ್ಕೆ ಸೆಡ್ಡು: ಬಹುಬೆಳೆಗೆ ಒತ್ತು ನೀಡಿದ ಭಾರ್ಗವ

ಸಾವಿರ ಅಪ್ಪೆಮಿಡಿ ಸಸಿಗೆ ಒಡೆಯ
Last Updated 5 ಮೇ 2022, 19:30 IST
ಅಕ್ಷರ ಗಾತ್ರ

ಶಿರಸಿ: ಮಲೆನಾಡಿನ ಜನರಿಗೆ ಅಪ್ಯಾಯಮಾನ ಎನಿಸಿದ ಅಪ್ಪೆಮಿಡಿಯ ಮರಗಳು ಬೆಟ್ಟ, ಹೊಳೆಯಂಚಿನಲ್ಲಿ ಸಹಜವಾಗಿ ಬೆಳೆದು ನಿಲ್ಲುತ್ತವೆ. ಆದರೆ, ಅವುಗಳನ್ನು ನೂರಾರು ಸಂಖ್ಯೆಯಲ್ಲಿ ಸ್ವಂತ ಜಮೀನಿನಲ್ಲಿ ಬೆಳೆಸಿರುವ ಅಪರೂದ ಸಾಧನೆ ತಾಲ್ಲೂಕಿನ ಶೀಗೆಹಳ್ಳಿಯ ಭಾರ್ಗವ ಹೆಗಡೆ ಅವರದ್ದು.

ಪಾರಂಪರಿಕವಾಗಿ ಅಡಿಕೆ ಕೃಷಿಯನ್ನಷ್ಟೆ ನೆಚ್ಚಿಕೊಂಡು ಜೀವನ ಸಾಗಿಸುತ್ತಿರುವ ರೈತರ ಮಧ್ಯೆ ‘ಬಹುಬೆಳೆಯ ಯಶಸ್ವಿ ಕೃಷಿ’ ಮಾಡುತ್ತಿರುವ ಭಾರ್ಗವ ವಿಭಿನ್ನವಾಗಿದ್ದಾರೆ. ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕ ಪದವಿ ಪಡೆದರೂ ಉದ್ಯೋಗಕ್ಕೆ ಪ್ರಯತ್ನಿಸದೆ ಕೃಷಿಯ ಸೆಳೆತಕ್ಕೆ ಒಳಗಾದವರು.

‘ಬಾಲ್ಯದಿಂದಲೂ ಸೆಳೆತವಿದ್ದ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ನೆಮ್ಮದಿಯ ಜೀವನಕ್ಕೆ ಕಾರಣವಾಗಿದೆ. ಹೀಗಾಗಿ ಸ್ನಾತಕ ಪದವಿ ಪಡೆದರೂ ಉದ್ಯೋಗಕ್ಕಾಗಿ ಎಂದೂ ಅರ್ಜಿ ಹಾಕಿಲ್ಲ. ಕೃಷಿಯಲ್ಲೇ ಹೊಸ ಪ್ರಯೋಗ ನಡೆಸುತ್ತ ಖುಷಿಯಾಗಿದ್ದೇನೆ’ ಎನ್ನುತ್ತಾರೆ ಭಾರ್ಗವ ಹೆಗಡೆ.

‘ಹತ್ತು ಎಕರೆ ಪ್ರದೇಶದಲ್ಲಿ ಸಾವಿರ ಅಪ್ಪೆಮಿಡಿ ಗಿಡಗಳನ್ನು ಹನ್ನೆರಡು ವರ್ಷಗಳ ಹಿಂದೆ ಬೆಳೆಸಿದ್ದೆ. ಅವು ಈಗ ಫಲ ಕೊಡುವ ಹಂತಕ್ಕೆ ಬೆಳೆದು ನಿಂತಿವೆ. ಮಾಳಂಜಿ, ನಂದಗಾರ, ಹಳದೋಟ ತಳಿಯ ತಲಾ 300 ಸಸಿಗಳು, ಇನ್ನುಳಿದಂತೆ ಮೂವತ್ತಕ್ಕೂ ಹೆಚ್ಚು ತಳಿಯ ಸಸಿಗಳು ತೋಟದಲ್ಲಿವೆ. ಲಕ್ಷಕ್ಕೂ ಹೆಚ್ಚು ಕಾಯಿಗಳನ್ನು ಈ ಬರಿ ಕೊಯ್ಲು ಮಾಡಿ ಮಾರಾಟ ಮಾಡಿದ್ದೇನೆ’ ಎನ್ನುತ್ತಾರೆ ಅವರು.

‘ಕಾಳುಮೆಣಸಿನ ಬಗೆ ಬಗೆಯ ತಳಿಗಳನ್ನೂ ಬೆಳೆಯಲಾಗಿದೆ. ವಾಣಿಜ್ಯ ಉದ್ದೇಶದಿಂದ ನಾಲ್ಕು ವರ್ಷಗಳ ಹಿಂದೆ ಮಾಡಹಾಗಲವನ್ನೂ ಬೆಳೆಯಲಾರಂಭಿಸಿದೆ. ಅಗರವುಡ್ ಕೂಡ ಬೆಳೆದಿದ್ದು ಅದು ಕೂಡ ಕಟಾವಿನ ಹಂತಕ್ಕೆ ಬಂದಿದೆ’ ಎಂದು ಸಮಗ್ರ ಕೃಷಿ ಚಟುವಟಿಕೆಯ ಕುರಿತು ವಿವರಿಸಿದರು.

ಭೇಟಿ ನೀಡಿದ ಸ್ಥಳಗಳಲ್ಲಿನ ಕೃಷಿ ಚಟುವಟಿಕೆ ಗಮನಿಸಿ ಅಲ್ಲಿನ ಬೆಳೆಗಳನ್ನೂ ಬೆಳೆಯುವ ರೂಢಿಯನ್ನೂ ಇಟ್ಟುಕೊಂಡಿದ್ದಾರೆ. ಮಿಸರಿ ಜೇನು ಸಾಕಣೆಯಲ್ಲೂ ಕ್ರಿಯಾಶೀಲ ಎನಿಸಿಕೊಂಡಿರುವ ಭಾರ್ಗವ 30ಕ್ಕೂ ಹೆಚ್ಚು ಮಿಸರಿ ಜೇನು ಪೆಟ್ಟಿಗೆ ಇಟ್ಟಿದ್ದಾರೆ.

ಮನೆಯೇ ಮಾರುಕಟ್ಟೆ:ಅಪ್ಪೆಮಿಡಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ರಾಜ್ಯದ ಕೆಲವೇ ರೈತರಲ್ಲಿ ಭಾರ್ಗವ ಹೆಗಡೆ ಓರ್ವರು. ಜೀರಿಗೆ ಮಿಡಿ ಸೇರಿದಂತೆ ಹಲವು ತಳಿಯ ಲಕ್ಷಾಂತರ ಕಾಯಿಗಳನ್ನು ಅವರು ವಾರ್ಷಿಕವಾಗಿ ಮಾರಾಟ ಮಾಡುತ್ತಿದ್ದಾರೆ. ಜತೆಗೆ ಮಾಡಹಾಗಲ, ಮಿಸರಿ ಜೇನುತುಪ್ಪ ವಹಿವಾಟು ನಡೆಸುತ್ತಾರೆ.

‘ಸಮಗ್ರ ಕೃಷಿಯ ಬಗ್ಗೆ ಅರಿತುಕೊಂಡ ರೈತರೇ ದೊಡ್ಡಮಟ್ಟದ ಗ್ರಾಹಕರಾಗಿದ್ದಾರೆ. ಅವರು ಮನೆಗೆ ಭೇಟಿ ನೀಡಿ ಕೃಷಿ ಚಟುವಟಿಕೆ ವೀಕ್ಷಿಸಿ, ನಂತರ ಬೆಳೆಗಳನ್ನು ಖರೀದಿಸುತ್ತಿದ್ದಾರೆ’ ಎಂದು ಭಾರ್ಗವ ಹೇಳಿದರು.

***

ಅಪ್ಪೆಮಿಡಿ ಸಸಿಗಳು ಉತ್ತಮ ಬೆಳೆವಣಿಗೆ ಕಾಣುತ್ತಿವೆ. ಹವಾಮಾನದಲ್ಲಿ ವ್ಯತ್ಯಾಸ ಉಂಟಾಗದಿದ್ದರೆ ವರ್ಷಕ್ಕೆ 12 ರಿಂದ 15 ಲಕ್ಷ ಅಪ್ಪೆಮಿಡಿ ಮಾರಾಟ ಮಾಡುತ್ತೇನೆ.
-ಭಾರ್ಗವ ಹೆಗಡೆ,ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT