ಶನಿವಾರ, ಸೆಪ್ಟೆಂಬರ್ 26, 2020
23 °C

ಅನ್ನದಾತನ ರಾಷ್ಟ್ರಪ್ರೇಮಕ್ಕೆ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: 'ಕೊರೊನಾ ಬಂದು ಸ್ವಾತಂತ್ರ್ಯ ಸಂಭ್ರಮಕ್ಕೂ ಅಡ್ಡಿಯಾಗಿದೆ. ಮಕ್ಕಳಲ್ಲಿ ದೇಶಪ್ರೇಮ ಬೆಳೆಸುವ ಕೆಲಸ ಸರಳವಾಗಿ ಆದರೂ ಮಾಡುತ್ತೇನೆ. ಈ ಬಾರಿ ಮಾಸ್ಕ್ ಧರಿಸುವುದು ಹಾಗೂ ಅಂತರ ಕಾಪಾಡಿಕೊಳ್ಳುವುದನ್ನು ತಿಳಿಸುತ್ತ ಸ್ವಾತಂತ್ರ್ಯೋತ್ಸವ ಆಚರಿಸಲಾಗುವುದು. ಎರಡೂ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಸಂಚರಿಸುತ್ತೇನೆ' ಎಂದು ತಾಲ್ಲೂಕಿನ ಸಾಲಗಾಂವ ಗ್ರಾಮದ ಈರಪ್ಪ ಸುಬ್ಬಣ್ಣವರ್ ಹೇಳಿದರು.

'ವೃತ್ತಿಯಲ್ಲಿ ಕೃಷಿಕರಾಗಿರುವ ಇವರು ಕಳೆದ ಆರೇಳು ವರ್ಷಗಳಿಂದ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬೆಳೆಸುವ ಕೆಲಸವನ್ನು ವಿಶಿಷ್ಟವಾಗಿ ಮಾಡುತ್ತಿದ್ದಾರೆ. ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವದಂದು, ತಮ್ಮ ಬೈಕಿಗೆ ತ್ರಿವರ್ಣ  ಧ್ವಜಗಳನ್ನು ಕಟ್ಟಿಕೊಂಡು ಸಂಚರಿಸುತ್ತಾರೆ. ವಿದ್ಯಾರ್ಥಿಗಳಿಗೆ ಸಿಹಿ ಹಂಚುತ್ತಾರೆ. ಕೆಲವು ವಿದ್ಯಾರ್ಥಿಗಳಿಗೆ ಬಟ್ಟೆ, ಬ್ಯಾಗ್ ಸಹ ಕೊಡಿಸುತ್ತಾರೆ' ಎಂದು ಗ್ರಾಮಸ್ಥರು ಹೇಳುತ್ತಾರೆ.

'ವಾಟರಮನ್ ಆಗಿ ಕೆಲಸ ಮಾಡುತ್ತೇನೆ. ಬರುವ ಆದಾಯದಲ್ಲಿಯೇ ಮಕ್ಕಳಿಗೆ ಏನಾದರೂ ಸಹಾಯ ಮಾಡುತ್ತೇನೆ. ರಾಷ್ಟ್ರೀಯ ಹಬ್ಬಗಳಂದು  ನನಗೆ ಹೆಚ್ಚಿನ ಸಂತಸವಾಗುತ್ತದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಧ್ವಜ ಹಾಗೂ ತ್ರಿವರ್ಣ ಬಟ್ಟೆಯಿಂದ ಬೈಕ್ ಅನ್ನು ಅಲಂಕರಿಸುತ್ತೇನೆ. ಸಾಲಗಾಂವ ಹಾಗೂ ಚಿಗಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಂಚರಿಸಿ ಶಾಲೆ, ಪಂಚಾಯ್ತಿ ಧ್ವಜಾರೋಹಣ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೇನೆ' ಎನ್ನುತ್ತಾರೆ ಈರಪ್ಪ.

'ಶಾಲೆಯಲ್ಲಿ ಕಲಿಯುವಾಗ ಶಿಕ್ಷಕರ ಮಾತುಗಳು ನನ್ನ ಈಗಿನ ಕೆಲಸಕ್ಕೆ ಸ್ಫೂರ್ತಿಯಾಗಿವೆ. ಅಗಸ್ಟ್ 14ರ ಮಧ್ಯರಾತ್ರಿಯೇ ಬೈಕಿಗೆ ಧ್ವಜ ಕಟ್ಟುತ್ತೇನೆ. ಈ ವರ್ಷ ಶಾಲೆಗಳು ಆರಂಭವಾಗಿಲ್ಲ. ಆದರೂ ಊರಲ್ಲಿ ಸಂಚರಿಸಿ ಸರಳ ರೀತಿಯಲ್ಲಾದರೂ ಧ್ವಜಾರೋಹಣದಲ್ಲಿ ಪಾಲ್ಗೊಳ್ಳುತ್ತೇನೆ' ಎಂದರು.

'ಪ್ರತಿ ವರ್ಷ ಬೈಕಿಗೆ ಸಿಂಗರಿಸಿ ಊರಲ್ಲಿ ಸಂಚರಿಸುತ್ತಾರೆ. ಮಕ್ಕಳಿಗೆ ಸಿಹಿ ಹಂಚುತ್ತಾರೆ. ವಿಶಿಷ್ಟವಾದ ರೀತಿಯಲ್ಲಿ ದೇಶಪ್ರೇಮ ಬೆಳೆಸುವ ಕೆಲಸ ಮಾಡುತ್ತಿದ್ದಾರೆ' ಎಂದು ಗ್ರಾಮಸ್ಥ ಪುಟ್ಟಪ್ಪ ಗುಲ್ಯಾನವರ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು