ಬುಧವಾರ, ಸೆಪ್ಟೆಂಬರ್ 22, 2021
29 °C

ಒಂದೇ ವರ್ಷದಲ್ಲಿ ಒಡೆದ ಒಡ್ಡು: ರೈತರಿಗೆ ತೊಂದರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ತಾಲ್ಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರ್ವೆ ಗ್ರಾಮದ ಹಳ್ಳಕ್ಕೆ ಒಂದು ವರ್ಷದ ಹಿಂದೆ ನಿರ್ಮಿಸಲಾಗಿದ್ದ ಒಡ್ಡು ಸಂಪೂರ್ಣ ಹಾನಿಗೀಡಾಗಿದೆ. ಇದರಿಂದ ಕೃಷಿ ಭೂಮಿಗೆ ಸಕಾಲಕ್ಕೆ ನೀರು ಸಿಗದಂತಾಗಿದೆ.

ಜಲಾನಯನ ಅಭಿವೃದ್ಧಿ ಇಲಾಖೆಯು ಒಡ್ಡು ನಿರ್ಮಿಸಿದ್ದು, ರೈತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ರೈತರು ಸಂತಸ ವ್ಯಕ್ತಪಡಿಸಿದ್ದರು. ಆದರೆ, ಒಂದೇ ವರ್ಷದಲ್ಲಿ ಒಡೆದು ಹೋಗಿರುವ ಕಾರಣ ಕಾಮಗಾರಿಯ ಗುಣಮಟ್ಟ, ವಿನ್ಯಾಸದ ಬಗ್ಗೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮಳೆಗಾಲ ಶುರುವಾದ ಕಾರಣ ಈ ಭಾಗದ ಅನೇಕ ಗದ್ದೆಗಳಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಮಣ್ಣು ಹದಗೊಳಿಸುತ್ತಿದ್ದಾರೆ. ಆದರೆ, ಸಮರ್ಪಕವಾಗಿ ನೀರು ಪೂರೈಕೆಯಿಲ್ಲದ ಕಾರಣ ಬಿತ್ತನೆ ಸೇರಿದಂತೆ ಮುಂದಿನ ಕಾರ್ಯಗಳಿಗೆ ತೊಂದರೆಯಾಗಿದೆ ಎನ್ನುತ್ತಾರೆ ರೈತರು.

‘ಮಳೆಗಾಲದಲ್ಲಿಯೂ ಈ ಭಾಗದ ಗದ್ದೆಗಳಲ್ಲಿ ನೀರಿಲ್ಲದೇ ಬೇಸಾಯ ನಡೆಸುವುದು ಕಷ್ಟವಾಗಿದೆ. ಅನೇಕ ರೈತರು ಹಳ್ಳಕ್ಕೆ ನಿರ್ಮಿಸಿದ ಒಡ್ಡನ್ನೇ ನಂಬಿ ಭತ್ತ ಬೆಳೆಯುತ್ತಿದ್ದಾರೆ. ಒಡ್ಡು ಕೊಚ್ಚಿಹೋದ್ದರಿಂದ ನಮ್ಮ ಗದ್ದೆ ಹಾಗೂ ಕೃಷಿ ಭೂಮಿಗೆ ನೀರು ಪೂರೈಕೆಯಾಗುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಶೀಘ್ರದಲ್ಲೇ ದುರಸ್ತಿ ನಡೆಸಿ, ರೈತರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಸ್ಥಳೀಯರಾದ ವಿದ್ಯಾಧರ ಗೌಡ ಒತ್ತಾಯಿಸಿದ್ದಾರೆ.

‘ಈ ಒಡ್ಡಿನ ನೀರಿನಿಂದಲೇ ನಾವು ಬೇಸಾಯ ನಡೆಸುತ್ತಿದ್ದೆವು. ಆದರೆ, ಒಡ್ಡು ಒಡೆದಿರುವ ಕಾರಣ ಕೃಷಿ ಭೂಮಿ ಬರಡಾಗುವ ಸಾಧ್ಯತೆಯಿದೆ. ಮಣ್ಣು ಹದಗೊಳಿಸಿ ಹಲವು ದಿನಗಳು ಕಳೆದರೂ ನೀರಿಲ್ಲದೇ ಹೊಲ ಒಣಗುತ್ತಿದೆ’ ಎಂದು ರೈತ ರಾಮಕೃಷ್ಣ ಗೌಡ ಬೇಸರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು