ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಳ್ಳು ತೆನೆಯಿಂದ ಹಾನಿ:ಪರಿಹಾರಕ್ಕೆ ರೈತರ ಒತ್ತಾಯ

Last Updated 23 ಅಕ್ಟೋಬರ್ 2020, 3:16 IST
ಅಕ್ಷರ ಗಾತ್ರ

ಮುಂಡಗೋಡ: ಭತ್ತದ ತೆನೆಯು ಕಪ್ಪು ಬಣ್ಣಕ್ಕೆ ತಿರುಗಿ, ಗಟ್ಟಿ ಕಾಳು ಆಗದೇ, ಜೊಳ್ಳಿನಿಂದ ಕೂಡಿದ ತೆನೆ ಬಿಡುತ್ತಿವೆ.ಇದರಿಂದ ಭತ್ತ ಬೆಳೆಗಾರರು ಹಾನಿ ಅನುಭವಿಸುತ್ತಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ತಾಲ್ಲೂಕಿನ ಸನವಳ್ಳಿ ರೈತರು ಭತ್ತದ ತೆನೆಗಳನ್ನು ಹಿಡಿದುಕೊಂಡು, ಕೃಷಿ ಅಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ಪ್ರತ್ಯೇಕವಾಗಿ ಗುರುವಾರ ಮನವಿ ಸಲ್ಲಿಸಿದರು.

‘ಸನವಳ್ಳಿ ಭಾಗದ ರೈತರು ಸುಮಾರು 240 ಎಕರೆ ಪ್ರದೇಶದಲ್ಲಿ, ಪ್ರತಿವರ್ಷದಂತೆ ಈ ವರ್ಷವೂ 1001, 1010 ತಳಿಯ ಭತ್ತವನ್ನು ಬೆಳೆದಿದ್ದಾರೆ. ಭತ್ತ ತೆನೆ ಬಿಡುವ ಹಂತದಲ್ಲಿಯೇ, ಕಪ್ಪು ಬಣ್ಣಕ್ಕೆ ತಿರುಗಿದೆ. ಇದರಿಂದ ಇಳುವರಿ ಕುಂಠಿತವಾಗಲಿದ್ದು, ಶೇ 10-20ರಷ್ಟು ಫಸಲು ಮಾತ್ರ ಕೈಗೆ ಸಿಗುವ ಸಾಧ್ಯತೆಯಿದೆ’ ಎಂದು ರೈತರಾದ ರಾಜು ಗುಬ್ಬಕ್ಕನವರ್, ಮಂಜು ಕೋಣನಕೇರಿ, ಫಕ್ಕೀರಪ್ಪ ಬೋಕಿಯವರ, ಕುಮಾರಸ್ವಾಮಿ ಹಿರೇಮಠ ಸೇರಿದಂತೆ ಇತರ ರೈತರು ಕೃಷಿ ಅಧಿಕಾರಿಯ ಗಮನಕ್ಕೆ ತಂದರು.

‘ಸಾಲ ಮಾಡಿ ಬೀಜ, ಗೊಬ್ಬರಕ್ಕೆ ಖರ್ಚು ಮಾಡಲಾಗಿದೆ. ತೆನೆ ಬಿಡುವಾಗ ಅತಿಯಾದ ಮಳೆಯಾಗಿ ಭತ್ತದ ಬೆಳೆಗಾರರು ಹಾನಿ ಅನುಭವಿಸಬೇಕಾಗಿದೆ. ಕೃಷಿ ಅವಲಂಬಿತ ರೈತ ಕುಟುಂಬಗಳಿಗೆ ಕೂಡಲೇ ಪರಿಹಾರ ನೀಡಬೇಕು’ ಎಂದು ರೈತರು ಒತ್ತಾಯಿಸಿದರು.

‘ಭತ್ತದ ತೆನೆ ಕಪ್ಪು ಬಣ್ಣಕ್ಕೆ ತಿರುಗಿ ಜೊಳ್ಳು ಕಾಳು ಆಗಿವೆ ಎಂದು ಸನವಳ್ಳಿ ರೈತರು ಮನವಿ ನೀಡಿದ್ದು, ರೈತರ ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಬಹುಸೂಕ್ಷ್ಮಾಣು ಜೀವಿಗಳಿಂದ ಸಂಭವಿಸಿರುವ ತೆನೆ ಕುತ್ತಿಗೆ ಬೆಂಕಿರೋಗ ಹಾಗೂ ತೆನೆ ಕೊಳೆ ರೋಗದ ಬಾಧೆ ಇರಬಹುದು ಎಂದು ಅಂದಾಜಿಸಲಾಗಿದೆ. ವಿಜ್ಞಾನಿಗಳ ತಂಡವನ್ನು ಕಳಿಸಿಕೊಡುವಂತೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT