ಶುಕ್ರವಾರ, ಸೆಪ್ಟೆಂಬರ್ 17, 2021
26 °C

ಯೂರಿಯಾ ಗೊಬ್ಬರಕ್ಕಾಗಿ ಪ್ರತಿಭಟಿಸಿದ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ಗೋದಾಮಿನಲ್ಲಿ ಯೂರಿಯಾ ಗೊಬ್ಬರ ಇದ್ದರೂ ರೈತರಿಗೆ ನೀಡುತ್ತಿಲ್ಲ. ಬೆಳಿಗ್ಗೆಯಿಂದ ಸರದಿಯಲ್ಲಿ ನಿಂತರೂ ಗೊಬ್ಬರ ನೀಡದೇ, ಬೇಕಾದವರ ಹೆಸರಿನಲ್ಲಿ ಬಿಲ್ ಹರಿದು 15-20 ಚೀಲ ಗೊಬ್ಬರ ನೀಡುತ್ತಿದ್ದಾರೆ ಎಂದು ಆರೋಪಿಸಿ ರೈತರು ಇಲ್ಲಿನ ಟಿಎಸ್‍ಎಸ್ ಕಚೇರಿ ಎದುರು ಬುಧವಾರ ಸಂಜೆ ಪ್ರತಿಭಟಿಸಿದರು.

'ಸಂಜೆವರೆಗೂ ಸಾಲಿನಲ್ಲಿ ನಿಂತ ರೈತರಿಗೆ ಗೊಬ್ಬರ ನೀಡುತ್ತಿಲ್ಲ. ಹಿಂಬದಿಯ ಗೋದಾಮಿನಿಂದ ಯೂರಿಯಾ ಗೊಬ್ಬರದ ಚೀಲಗಳನ್ನು ಸಾಗಿಸುತ್ತಿದ್ದಾರೆ. ನಿಜವಾದ ರೈತರಿಗೆ ಇದರಿಂದ ಮೋಸವಾಗುತ್ತದೆ' ಎಂದು ರೈತ ಮುಖಂಡ ಕೆಂಜೋಡಿ ಗಲಭಿ ಆರೋಪಿಸಿದರು.

ಸುಭಾಷ್ ವಡ್ಡರ್ ಸಹಿತ ಸ್ಥಳದಲ್ಲಿದ್ದ 10ಕ್ಕೂ ಹೆಚ್ಚು ರೈತರು ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದರು. ಸ್ಥಳಕ್ಕೆ ಬಂದ ಸಹಾಯಕ ಕೃಷಿ ಅಧಿಕಾರಿ ಎಂ.ಎಸ್.ಕುಲಕರ್ಣಿ ರೈತರೊಂದಿಗೆ ಚರ್ಚಿಸಿದರೂ, ಸುಮಾರು ಒಂದು ಗಂಟೆ ಕಾಲ ರೈತರು ಪಟ್ಟು ಸಡಿಲಿಸಲಿಲ್ಲ. ನಂತರ ಗೋದಾಮಿನಲ್ಲಿದ್ದ ನೂರರಷ್ಟು ಯೂರಿಯಾ ಗೊಬ್ಬರ ಚೀಲಗಳಲ್ಲಿ, ಮೊದಲೇ ಬಿಲ್ ಮಾಡಿದವರಿಗೆ ನೀಡಿ, ಉಳಿದವುಗಳಲ್ಲಿ ಪ್ರತಿಭಟಿಸುತ್ತಿದ್ದ ರೈತರಿಗೆ ತಲಾ 3-4 ಚೀಲಗಳಂತೆ ಹಂಚಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

'ಕಳೆದ ನಾಲ್ಕೈದು ದಿನಗಳ ಹಿಂದೆ ಒಟ್ಟು 95 ಟನ್ ಯೂರಿಯಾ ಗೊಬ್ಬರವನ್ನು ತರಿಸಲಾಗಿತ್ತು. ಎಲ್ಲ ರೈತರಿಗೂ ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ವಿತರಣೆ ಮಾಡಲಾಗುತ್ತಿದೆ. ಕೆಲವು ರೈತರು ಗೊಬ್ಬರ ಖರೀದಿಸಿ, ವಾಹನ ಸಿಕ್ಕಿಲ್ಲ ಎಂದು ಇಲ್ಲಿಯೇ ಇಟ್ಟಿದ್ದರು. ಕೇವಲ 25 ಚೀಲ ಮಾತ್ರ ಖರ್ಚಾಗುವುದು ಬಾಕಿಯಿತ್ತು. ಆದರೆ, ಗೋದಾಮಿನಲ್ಲಿದ್ದ ಎಲ್ಲ ಚೀಲಗಳನ್ನು ಇಲ್ಲಿರುವ ರೈತರಿಗೇ ಹಂಚುವಂತೆ ರೈತರು ಪಟ್ಟು ಹಿಡಿದಿದ್ದರಿಂದ ಗೊಂದಲ ಉಂಟಾಗಿದೆ' ಎಂದು ಸ್ಥಳೀಯ ಟಿಎಸ್‍ಎಸ್ ವ್ಯವಸ್ಥಾಪಕ ಅನಂತ ಬೊಮ್ಮಕರ್ ಹೇಳಿದರು.

'ಪೂರೈಕೆಗಿಂತ ಬೇಡಿಕೆ ಹೆಚ್ಚಾಗಿದೆ. ಸದ್ಯ ಎರಡೂ ಗೋದಾಮಿನಲ್ಲಿದ್ದ ಯೂರಿಯಾ ಗೊಬ್ಬರದ ಚೀಲಗಳನ್ನು ಇಲ್ಲಿರುವ ರೈತರಿಗೆ ನೀಡುವಂತೆ ಸೂಚಿಸಲಾಗಿದೆ' ಎಂದು ಎಂ.ಎಸ್.ಕುಲಕರ್ಣಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು