ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಸಮೀಕ್ಷೆಯ ಎಡವಟ್ಟು: ರೈತರಿಗೆ ಕಗ್ಗಂಟಾದ ‘ಪಹಣಿ ದೋಷ’

ಬೆಳೆ ಸಮೀಕ್ಷೆಯ ಎಡವಟ್ಟು: ಪಹಣಿ ಪತ್ರಿಕೆಯಲ್ಲಿ ತಪ್ಪು ಮಾಹಿತಿ ದಾಖಲು
Last Updated 10 ಫೆಬ್ರುವರಿ 2021, 2:41 IST
ಅಕ್ಷರ ಗಾತ್ರ

ಶಿರಸಿ: ಬೆಳೆಸಾಲಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಪಹಣಿ ಪತ್ರಿಕೆ ತೆಗೆಯಿಸಿದ ರೈತರಿಗೆ ಅದರಲ್ಲಿರುವ ದೋಷ ಹೌಹಾರುವಂತೆ ಮಾಡಿದೆ. ಮುಖ್ಯ ಬೆಳೆ ಕಾಲಂನಲ್ಲಿ ಅಡಿಕೆ ತೋಟದಲ್ಲಿ ಬಾಳೆಯೇ ಪ್ರಮುಖ ಬೆಳೆ ಎಂಬುದು ದಾಖಲಾಗಿದೆ.

ಕೆಲವು ಜಮೀನುಗಳ ಪಹಣಿಯಲ್ಲಿ ಬೆಳೆ ಕಾಲಂ ಖಾಲಿ ಬಿಡಲಾಗಿದೆ. ಪ್ರತಿ ಬಾರಿ ಇಂತಹ ಸಮಸ್ಯೆ ಮುಂದುವರಿಯುತ್ತಿರುವುದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಡಿಕೆ ಬೆಳೆ ಆಧರಿಸಿ ಬೆಳೆಸಾಲ ನೀಡಲಾಗುತ್ತದೆ. ಬೆಳೆವಿಮೆಗೂ ಇದೇ ಪ್ರಧಾನವಾಗಿದೆ. ಆದರೆ, ಈಗಿರುವ ದೋಷ ಪರಿಗಣಿಸಿದರೆ ಸಾಲ ಸಿಗುವುದು ಕಷ್ಟ ಎಂಬುದು ಬಹುತೇಕ ರೈತರ ಅಭಿಪ್ರಾಯ.

‘ಬೆಳೆ ಸಮೀಕ್ಷೆ ಪ್ರಕ್ರಿಯೆ ಗೊಂದಲದಲ್ಲಿ ನಡೆಯಿತು. ಸಮೀಕ್ಷೆ ನಡೆಸಲು ನಿಯೋಜಿಸಿದ್ದ ಸಮೀಕ್ಷಕರು ನೀಡಿದ ಮಾಹಿತಿ ಸರಿಯಾಗಿರಲಿಲ್ಲ’ ಎಂದು ಕೃಷಿಕ ನರಸಿಂಹ ಹೆಗಡೆ ಆರೋಪಿಸಿದರು.

‘ಪಹಣಿಯಲ್ಲಿ ದೋಷ ಹೆಚ್ಚಾಗುತ್ತಿದೆ. ಅಧಿಕಾರಿಗಳು ಮಾಡುವ ತಪ್ಪಿಗೆ ರೈತರು ಶಿಕ್ಷೆ ಅನುಭವಿಸ ಬೇಕಾಗುತ್ತಿದೆ’ ಎಂದು ರೈತ ಸಂತೋಷ ನಾಯ್ಕ ಕಲಕರಡಿ ಹೇಳಿದರು.

‘ತೋಟದಲ್ಲಿ ಬೆಳೆ ಇದ್ದರೂ ಪಹಣಿಯಲ್ಲಿ ಬೆಳೆಯೇ ಇಲ್ಲ ಎಂಬ ಮಾಹಿತಿ ಭರ್ತಿ ಮಾಡಲಾಗಿದೆ. ಬೇಗ ತಪ್ಪು ಮಾಡಲಾಗುತ್ತದೆ, ಅದನ್ನು ಸರಿಪಡಿಸಲು ಬೇಗ ಆಗದು ಎಂಬ ಉತ್ತರ ಅಧಿಕಾರಿಗಳಿಂದ ಸಿಗುತ್ತಿದೆ’ ಎಂದು ಹೇಳಿದರು.

‘ಬೆಳೆ ಸಮೀಕ್ಷೆ ವರದಿ ತಾಲ್ಲೂಕಾಡಳಿತ ಪರಿಶೀಲಿಸಿಯೇ ಕಳುಹಿಸಿದೆ. ಆಗ ಸರಿ ಇತ್ತು. ರಾಜ್ಯಮಟ್ಟದಲ್ಲಿ ಪಹಣಿಯಲ್ಲಿ ದಾಖ ಲಾಗುವಾಗ ತಪ್ಪಾಗಿದೆ’ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ತಪ್ಪು ಮಾಹಿತಿ ದಾಖಲಾದ ಪಹಣಿಗೆ ಪರ್ಯಾಯವಾಗಿ ಕೈಬರಹದ ಮೂಲಕ ರೈತರಿಗೆ ಮಾಹಿತಿ ನೀಡಬೇಕೆಂದು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಲಾಗಿದೆ. ಅದನ್ನು ರೈತರು ಸಾಲಕ್ಕೆ ಅರ್ಜಿ ಸಲ್ಲಿಸಲು ಬಳಸಬಹುದು’ ಎಂದು ತಹಶೀಲ್ದಾರ್ ಎಂ.ಆರ್. ಕುಲಕರ್ಣಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಪ್ರಕ್ರಿಯೆ ಬದಲಾಗಬೇಕು‌’:

‘ಬೆಳೆ ಸಮೀಕ್ಷೆಗೆ ಮೊದಲಿನಂತೆ ಗ್ರಾಮ ಲೆಕ್ಕಾಧಿಕಾರಿಗಳೇ ನಡೆಸುವಂತಾದರೆ ಸಮಸ್ಯೆ ನೀಗಬಹುದು. ತಂತ್ರಜ್ಞಾನ ಆಧರಿಸಿ ನಡೆಸುತ್ತಿರುವ ಸಮೀಕ್ಷೆಯಿಂದ ಸಮಸ್ಯೆ ಉದ್ಭವಿಸುತ್ತಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಎನ್. ಹೆಗಡೆ ಮುರೇಗಾರ.

‘ಕೆಲವು ಕಡೆ ರೈತರೇ ಸಮೀಕ್ಷೆ ಮಾಡಿ ಬೆಳೆ ನಮೂದಿಸಿದ್ದರು. ಆದರೆ, ಈಗ ಉಂಟಾದ ದೋಷಕ್ಕೆ ಕಂದಾಯ ಇಲಾಖೆಯವರು ರೈತರನ್ನೇ ಹೊಣೆಗಾರರನ್ನಾಗಿಸುವುದು ಸರಿಯಲ್ಲ. ಮೊದಲು ಉಂಟಾದ ದೋಷ ಸರಿಪಡಿಸುವ ಕೆಲಸವಾಗಬೇಕು’ ಎಂದು ಒತ್ತಾಯಿಸಿದರು.

‘ಭೂಮಿ’ ತಂತ್ರಾಂಶದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ಪಹಣಿಯಲ್ಲಿ ತಪ್ಪು ಮಾಹಿತಿ ಮುದ್ರಣವಾಗಿದೆ. ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ.

– ಎಂ.ಆರ್. ಕುಲಕರ್ಣಿ, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT