ಆರೋಗ್ಯ ವಿಮೆಯಿಲ್ಲದೇ ರೈತರ ಪರದಾಟ

7
ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸದೇ ಯಶಸ್ವಿನಿ ರದ್ದುಗೊಳಿಸಿದ್ದಕ್ಕೆ ತಾಲ್ಲೂಕು ಪಂಚಾಯ್ತಿ ಸದಸ್ಯರ ಆಕ್ಷೇಪ

ಆರೋಗ್ಯ ವಿಮೆಯಿಲ್ಲದೇ ರೈತರ ಪರದಾಟ

Published:
Updated:
ಶಿರಸಿ ತಾಲ್ಲೂಕು ಪಂಚಾಯ್ತಿ ಸಭೆಗೆ ಬದನಗೋಡ ಪಂಚಾಯ್ತಿ ರೈತರು ಭೇಟಿ ನೀಡಿ, ನ್ಯಾಯ ಒದಗಿಸುವಂತೆ ವಿನಂತಿಸಿದರು

ಶಿರಸಿ: ಸರ್ಕಾರದ ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಪಂಚಾಯ್ತಿಗಳಲ್ಲಿ ತರಾತುರಿಯಲ್ಲಿ ನಡೆಯುತ್ತಿದೆ. ವಸತಿ ಯೋಜನೆಯ ಗರಿಷ್ಠ ಆದಾಯಮಿತಿಯ ಮಾನದಂಡಕ್ಕೆ ಸಂಬಂಧಿಸಿ, ಸರ್ಕಾರದಿಂದ ಹೊಸ ಆದೇಶ ಬಂದ ಮೇಲೆ ಫಲಾನುಭವಿಗಳ ಆಯ್ಕೆ ನಡೆಸಬೇಕು ಎಂದು ತಾಲ್ಲೂಕು ಪಂಚಾಯ್ತಿ ಸಭೆ ಒತ್ತಾಯಿಸಿದೆ.

ಗುರುವಾರ ಇಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪಾಧ್ಯಕ್ಷ ಚಂದ್ರು ದೇವಾಡಿಗ ಈ ವಿಷಯ ಪ್ರಸ್ತಾಪಿಸಿದರು. ವಸತಿ ಯೋಜನೆ ಮನೆ ಪಡೆದುಕೊಳ್ಳಲು ವಾರ್ಷಿಕ ಆದಾಯ ಗರಿಷ್ಠ ₹ 32ಸಾವಿರ ಇರಬೇಕು ಎಂಬ ನಿಯಮವಿದೆ. ಈ ನಿಯಮ ಬದಲಾವಣೆಗೆ ಸರ್ಕಾರದ ಮುಂದೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸರ್ಕಾರದಿಂದಲೇ ಪರಿಷ್ಕೃತ ಆದಾಯ ಮಿತಿ ಘೋಷಣೆಯಾಗಲಿದ್ದು, ಅಲ್ಲಿಯ ತನಕ ಫಲಾನುಭವಿಗಳ ಆಯ್ಕೆಗೆ ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ನೈಜ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆಯಿರುತ್ತದೆ ಎಂದರು.

ಹೊಸದಾಗಿ ಪ್ರಾರಂಭವಾಗಲಿರುವ ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನಗೊಳಿಸುವ ಪೂರ್ವದಲ್ಲಿ ಯಶಸ್ವಿನಿ ಯೋಜನೆಯನ್ನು ನಿರ್ಜೀವಗೊಳಿಸಲಾಗಿದೆ. ಇದರಿಂದ ಬಡವರಿಗೆ ತೀವ್ರ ತೊಂದರೆಯಾಗಿದೆ. ಮುಂದಾಲೋಚನೆಯಿಲ್ಲದೇ ಜನಪರ ಯೋಜನೆಗಳನ್ನು ರದ್ದುಗೊಳಿಸಬಾರದು ಎಂದು ಚಂದ್ರು ದೇವಾಡಿಗ ಹೇಳಿದರು. ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಜನೌಷಧ ಕೇಂದ್ರವನ್ನು ಸ್ಕೊಡ್‌ವೆಸ್ ಸಂಸ್ಥೆ ನಡೆಸಲಿದೆ ಎಂದು ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಗಜಾನನ ಭಟ್ಟ ಹೇಳಿದರು.

ಗಣೇಶನಗರ ಮಾರ್ಗವಾಗಿ ಹೊಸ ಬಸ್‌ ನಿಲ್ದಾಣಕ್ಕೆ ಹೋಗುವಲ್ಲಿ ದೊಡ್ಡ ಹೊಂಡ ಸೃಷ್ಟಿಯಾಗಿದ್ದು, ಇದನ್ನು ದುರಸ್ತಿಗೊಳಿಸಬೇಕು. ಇಲ್ಲವಾದಲ್ಲಿ ಈ ಮಾರ್ಗದಲ್ಲಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿ, ಪ್ರತಿಭಟಿಸಲಾಗುವುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ ಎಚ್ಚರಿಸಿದರು.

ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಮಳೆಗಾಲದಲ್ಲಿ ಬಿಸಿ ನೀರು ಕಾಯಿಸುವ ವ್ಯವಸ್ಥೆಯ ಕೊರತೆಯಿದೆ. ನಗರಸಭೆಯಿಂದ ತೆರೆದಿರುವ ಬಾವಿಯ ಕಾಮಗಾರಿ ಅರೆಬರೆಯಾಗಿದೆ. ಆಸ್ಪತ್ರೆಗೆ ತೀರಾ ಅಗತ್ಯವಾಗಿ ಸ್ಟೀಮ್ ಚೇಂಬರ್ ಬೇಕಾಗಿದೆ ಎಂದು ವೈದ್ಯಾಧಿಕಾರಿ ಡಾ.ಪೂರ್ಣಿಮಾ ಹೇಳಿದರು.

ವಸತಿ ನಿಲಯಗಳಿಗೆ ಒಂದೇ ಬಾರಿ ದೊಡ್ಡ ಪ್ರಮಾಣದಲ್ಲಿ ಅಕ್ಕಿ ನೀಡಿರುವುದರಿಂದ ಇದನ್ನು ಸಂಗ್ರಹಿಸಲು ಸಮಸ್ಯೆಯಾಗುತ್ತದೆ ಎಂದು ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ದೂರಿದರು. ‘ಕಳೆದ ಸೆಪ್ಟೆಂಬರ್‌ನಿಂದ ಈವರೆಗಿನ ಅಕ್ಕಿ ಒಮ್ಮೆಲೇ ಬಂದಿದೆ. ಅದನ್ನು ಎಲ್ಲ ವಸತಿ ನಿಲಯಗಳಿಗೆ ಹಂಚಿಕೆ ಮಾಡಲಾಗಿದೆ’ ಎಂದು ಇಲಾಖೆ ಅಧಿಕಾರಿ ಹೇಳಿದರು.

ಬಂಕನಾಳ, ಬಿಸಲಕೊಪ್ಪ ಪಂಚಾಯ್ತಿಗಳ ವ್ಯಾಪ್ತಿಯ ಅನೇಕ ರೈತರಿಗೆ ಬೆಳೆ ವಿಮೆ ವಿತರಣೆಯಲ್ಲಿ ಅನ್ಯಾಯವಾಗಿದೆ ಎಂದು ಸದಸ್ಯೆ ಲತಾ ನಾಯ್ಕ ಹೇಳಿದರು. ‘ರಸ್ತೆ ಪಕ್ಕದಲ್ಲಿರುವ ಸತ್ತ ಬಿದಿರು ಹಿಂಡನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗುತ್ತಿದೆ’ ಎಂದು ವಲಯ ಅರಣ್ಯಾಧಿಕಾರಿ ಹೇಳಿದರು.

ತಾಲ್ಲೂಕಿನಲ್ಲಿ ಆರಂಭದಲ್ಲಿ ಉತ್ತಮ ಮಳೆಯಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಮಳೆ ಕಡಿಮೆಯಾಗಿದೆ. ಭತ್ತ ಬಿತ್ತನೆ ಮಾಡುತ್ತಿದ್ದ ಕೆಲವು ರೈತರು, ನೀರಿಲ್ಲದೇ ನಾಟಿ ಪದ್ಧತಿ ಅನುಸರಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಕೃಷಿ ಅಧಿಕಾರಿ ಕೆ.ವಿ.ಕೂರ್ಸೆ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !