ವಿಷ್ಣು ನಾಯ್ಕರ ಕವಿತೆಯಲ್ಲಿ ಮಾರ್ಮಿಕ ಸಂವೇದನೆ: ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ

7
ಅಭಿನಂದನಾ ಕಾರ್ಯಕ್ರಮ

ವಿಷ್ಣು ನಾಯ್ಕರ ಕವಿತೆಯಲ್ಲಿ ಮಾರ್ಮಿಕ ಸಂವೇದನೆ: ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ

Published:
Updated:
Deccan Herald

ಶಿರಸಿ: ಮಾರ್ಮಿಕ ಸಂವೇದನೆಯನ್ನು ಕವಿತೆಯಲ್ಲಿ ಆಳವಾಗಿ ಹುದುಗಿಸಿ ಓದುಗರಿಗೆ ನೀಡಿದವರು ವಿಷ್ಣು ನಾಯ್ಕರು ಎಂದು ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ ಹೇಳಿದರು.

ಕವಿ ಕಾವ್ಯ ಬಳಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸ್ಥಳೀಯ ಘಟಕ ಜಂಟಿಯಾಗಿ ಶನಿವಾರ ಇಲ್ಲಿ ಆಯೋಜಿಸಿದ್ದ ಕವಿ ವಿಷ್ಣು ನಾಯ್ಕ ಅವರು ಅಭಿನಂದನಾ ಕಾರ್ಯಕ್ರಮದಲ್ಲಿ, ಅವರು ಅಭಿನಂದನಾ ಮಾತನಾಡಿದರು. ವಿಷ್ಣು ನಾಯ್ಕರ ಪಕ್ಷವು ಕಾವ್ಯವಾದರೆ, ಅದರ ಪ್ರಣಾಳಿಕೆ ಕವಿತೆಯಾಗಿದೆ. ಅವರು ಎಲ್ಲ ರೀತಿಯ ಕವಿತೆಗಳ ಮಿಶ್ರಣವನ್ನು ತಮ್ಮದೇ ಲಯಗಾರಿಕೆಯಲ್ಲಿ ಅಭಿವ್ಯಕ್ತಿಸುತ್ತಾರೆ. ಸಾಮಾಜಿಕ ಅನುಭವಗಳನ್ನು ಕಾವ್ಯಾತ್ಮಕವಾಗಿ ಹುರಿಗೊಳಿಸಿದಾಗ ಓದುಗರಿಗೆ ಅದು ಹೃದಯಸ್ಪರ್ಶಿಯಾಗುತ್ತದೆ. ಇಂಥ ಸಾವಿರ ಕವಿತೆಗಳು ಅವರ ಸಾಹಿತ್ಯ ಜೋಳಿಗೆಯಲ್ಲಿವೆ ಎಂದರು.

ಹಾಲಕ್ಕಿಗರ ಭಾಷೆ ಅವರ ಕವಿತೆಗಳಲ್ಲಿ ದಾಖಲೀಕರಣಗೊಂಡಿದೆ. ಅವರ ಅರೆಖಾಸಗಿ ಲೇಖನಗಳು ಗದ್ಯದ ಕಾವ್ಯ ಸ್ವರೂಪಕ್ಕೆ ಉತ್ತಮ ಉದಾಹರಣೆಯಾಗಿವೆ. ಸಾಮಾಜಿಕ ಚಳವಳಿಯ ವ್ಯಕ್ತಿಯಾಗಿ ಅವರು ಕಾವ್ಯ ಸಂವೇದನೆ ಉಳಿಸಿಕೊಂಡವರು. ಅಪ್ಪಟ ಮಾನವೀಯ ತುಡಿತ ಅವರ ಬರಹಗಳಲ್ಲಿದೆ ಎಂದು ಪ್ರಶಂಸಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ ವಿಷ್ಣು ನಾಯ್ಕ ಮಾತನಾಡಿ, ‘ನನ್ನ ತಾಯಿ ಹಾಗೂ ಹಾಲಕ್ಕಿಗರ ನೆರಳಿನಲ್ಲಿ ಬೆಳೆದ ನನಗೆ ಯಾವ ಕಿರೀಟದ ಆಸೆಯೂ ಇಲ್ಲ. ನೆಲದ ಋಣ ಹೊತ್ತು ಸಾಗುತ್ತಿರುವ ನನಗೆ ಅದನ್ನು ತೀರಿಸುವ ಜವಾಬ್ದಾರಿಯೂ ಇದೆ’ ಎಂದರು.

ಪತ್ರಕರ್ತ ಜಯರಾಮ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಭಾಗವತ ಇದ್ದರು. ವಿಂದ್ಯಾ ಪ್ರಾರ್ಥನೆ ಹಾಡಿದರು. ಸಾಹಿತಿ ಭಾಗೀರಥಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಕಲಾ ಭಟ್ಟ ಸ್ವಾಗತಿಸಿದರು. ಎನ್.ಆರ್.ರೂಪಶ್ರೀ ನಿರೂಪಿಸಿದರು. ವಿಷ್ಣು ನಾಯ್ಕ ರಚಿಸಿದ ಕವಿತೆಗಳನ್ನು ರಾಜೀವ ಅಜ್ಜೀಬಳ, ರಾಜು ಹೆಗಡೆ, ಸಿಂಧು ಹೆಗಡೆ ಮೊದಲಾದವರು ವಾಚಿಸಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !