ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿನ್ನರದಲ್ಲಿ ‘ಮತ್ಸ್ಯ ಬೇಟೆ’ಯ ಹಬ್ಬ!

ಕಾಳಿ ಹಿನ್ನೀರಿಗೆ ಇಳಿದು ಮೀನು ಹಿಡಿದ ಗ್ರಾಮಸ್ಥರು; ನೋಡಲು ಸೇರಿದ ನೂರಾರು ಜನ
Last Updated 15 ಮೇ 2019, 12:11 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಸಮೀಪದ ಕಿನ್ನರ ಗ್ರಾಮದಲ್ಲಿ ಬುಧವಾರ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಹಿರಿಯರು– ಕಿರಿಯರು, ಪುರುಷ– ಮಹಿಳೆಯರೆನ್ನದೇ ಗ್ರಾಮಸ್ಥರ ದಂಡು ನದಿಗೆ ಇಳಿದಿತ್ತು! ಸುಮಾರು ಒಂದೂವರೆ ತಾಸಿನ ಬಳಿಕ ಎಲ್ಲರೂ ಖುಷಿಯಿಂದಲೇ ತಮ್ಮ ಮನೆಗಳಿಗೆ ವಾಪಸ್ ಆಗಿದ್ದರು.

ಇದು ಕಾಳಿ ನದಿಯ ಹಿನ್ನೀರಿನಲ್ಲಿ ಪ್ರತಿವರ್ಷ ನಡೆಯುವ ಸಾಂಪ್ರದಾಯಿಕ ‘ಮತ್ಸ್ಯ ಬೇಟೆ’ಯ ಚಿತ್ರಣವಿದು. ಗ್ರಾಮದಲ್ಲಿನ ಗಿಂಡಿ ಮಹಾದೇವಿ ದೇವಸ್ಥಾನದಲ್ಲಿಪೂಜೆನಡೆದ ನಂತರಗ್ರಾಮಸ್ಥರೆಲ್ಲ ಕಾಳಿ ನದಿಯ ಹಿನ್ನೀರಿನ ಸುತ್ತಲೂ ನೆರೆದರು. ಬಲೆಗಳನ್ನು ಹಿಡಿದು ನೀರಿಗಿಳಿದವರು ಕೈಗೆ ಸಿಕ್ಕಷ್ಟು ಮೀನುಗಳನ್ನು ಬಾಚಿಕೊಂಡರು.ದಂಡೆಯ ಮೇಲೆ ನಿಂತ ಕೆಲವರು ಬೇಟೆಗಾರರ ಬಲೆಗೆ ಬಿದ್ದಿದ್ದ ಮೀನುಗಳನ್ನು ಮೇಲೆತ್ತಿ ಚೀಲಕ್ಕೆ ತುಂಬಿಕೊಂಡರು.

ನಂತರ ಬೇಟೆಯಾಡಿದ ಮೀನುಗಳನ್ನು ಕೊಂಡು ಮನೆಗೆ ತೆರಳಿ, ಅದರಲ್ಲೇ ಅಡುಗೆ ತಯಾರಿಸಿ ಹಬ್ಬದೂಟ ಸವಿದರು. ಸುಮಾರು ಐದು ಎಕರೆಗಳಷ್ಟು ವಿಸ್ತಾರ ಹೊಂದಿರುವ ಈ ಹಿನ್ನೀರಿನಲ್ಲಿ ಮತ್ಸ್ಯ ಬೇಟೆ ನಡೆಯುವುದು ಒಂದು ಕಡೆಯಾದರೆ, ಇದನ್ನು ನೋಡಲೆಂದೇ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಜನರು ಸೇರಿದ್ದರು.

ವರ್ಷಕ್ಕೆ ಒಮ್ಮೆ ಮೀನುಗಾರಿಕೆ

‘ಮಳೆಗಾಲದ ಅವಧಿಯಲ್ಲಿ ನದಿ ತುಂಬಿ ಹರಿಯುತ್ತದೆ. ಮಳೆಗಾಲ ಮುಗಿದು ಅಕ್ಟೋಬರ್‌ ಬರುತ್ತಿದ್ದಂತೆ ಇಲ್ಲಿ ಮೀನು ಬೇಟೆಗೆ ನಿಷೇಧ ಹೇರಲಾಗುತ್ತದೆ. ನಂತರದ ಏಪ್ರಿಲ್ ತಿಂಗಳವರೆಗೆ ಇಲ್ಲಿ ಯಾರೂ ಮೀನುಗಾರಿಕೆಗೆ ನಡೆಸುವ ಹಾಗಿಲ್ಲ. ಮೇ ತಿಂಗಳಿನಲ್ಲಿ ಒಂದು ದಿನವನ್ನು ಮೀನು ಬೇಟೆಗೆ ಎಂದು ನಿಗದಿಪಡಿಸಲಾಗುತ್ತದೆ. ಗ್ರಾಮದ ಹಿರಿಯರ ಈ ಸಂಪ್ರದಾಯವನ್ನು ಯಾರೂ ಮೀರುವುದಿಲ್ಲ’ ಎನ್ನುತ್ತಾರೆ ಗ್ರಾಮಸ್ಥ ಉಮೇಶ್ ಗುನಗಿ.

ದೇವರಿಗೂ ಪಾಲು

‘ಮತ್ಸ್ಯ ಬೇಟೆಯಲ್ಲಿ ದೊರೆತ ಅಷ್ಟೂ ಮೀನುಗಳನ್ನು ಮನೆಗೆ ತೆಗೆದುಕೊಂಡು ಹೋಗುವಂತಿಲ್ಲ. ಇದರಲ್ಲಿ ಎರಡು ಪಾಲುಗಳನ್ನಾಗಿ ವಿಂಗಡಿಸಲಾಗುತ್ತದೆ. ಒಂದನ್ನು ದೇವರಿಗೆ, ಇನ್ನೊಂದನ್ನು ತಾವು ಕೊಂಡಯ್ಯುತ್ತಾರೆ. ದೇವರಿಗೆ ನೀಡಿದ ಪಾಲನ್ನು ದೇವಸ್ಥಾನದ ಸಮಿತಿಯಿಂದಹರಾಜು ಹಾಕಲಾಗುತ್ತದೆ.ಇದರಿಂದಸಂಗ್ರಹಗೊಂಡ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುತ್ತದೆ’ ಎಂದು ಅವರು ವಿವರಿಸಿದರು.

ನಾಲ್ಕು ಗಂಟೆ ವಿಳಂಬ:ಪ್ರತಿ ವರ್ಷ ಬೆಳಿಗ್ಗೆ ಸುಮಾರುಒಂಬತ್ತುಗಂಟೆಯ ವೇಳೆಗೆ ಆರಂಭವಾಗಬೇಕಿದ್ದ ‘ಮತ್ಸ್ಯ ಬೇಟೆ’, ಈ ಬಾರಿ ನಾಲ್ಕುತಾಸುವಿಳಂಬವಾಗಿ ನಡೆಯಿತು.ಹಿನ್ನೀರಿನಲ್ಲಿಇಳಿತ ಉಂಟಾಗುವುದು ತಡವಾಯಿತು. ಹೀಗಾಗಿ ಮಧ್ಯಾಹ್ನ ಸುಮಾರು ಒಂದು ಗಂಟೆಯ ವೇಳೆಗೆ ಪ್ರಾರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT